ಕರಾವಳಿ

ಮಂಗಳೂರು : ಮತದಾನಕ್ಕೆ ಯಾರೇ ಅಡ್ಡಿಪಡಿಸಿದರೂ ಕಠಿಣ ಶಿಕ್ಷೆ – ಜಿಲ್ಲಾಧಿಕಾರಿ

Pinterest LinkedIn Tumblr

ಸುಗಮ, ಸುಸೂತ್ರ ಚುನಾವಣೆಗೆ ಪಿಆರ್‍ಒ ಗಳೇ ‘ಬಾಸ್

ಮಂಗಳೂರು ಮಾರ್ಚ್ 26 : ಮತದಾನದ ದಿನದಂದು ಪ್ರಜಾಪ್ರಭುತ್ವದ ಮೌಲ್ಯವನ್ನು ಸಾರುವ ಮತದಾನದ ಹಕ್ಕನ್ನು ಚಲಾಯಿಸಲು ಯಾರೇ ಅಡ್ಡಿಪಡಿಸಿದರೂ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ವಿಧಾನಸಭಾ ಕ್ಷೇತ್ರವಾರು ಮಾಸ್ಟರ್ ಟ್ರೈನರ್‍ಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಚುನಾವಣಾ ದಿನದಂದು ಪ್ರಿಸೈಡಿಂಗ್ ಅಧಿಕಾರಿಗಳು ಚುನಾವಣಾ ಆಯೋಗ ನೀಡಿದ ಕೈಪಿಡಿಯನ್ನು ಓದಿ ಅನುಷ್ಠಾನಗೊಳಿಸಿದರೆ ಚುನಾವಣೆ ಯಶಸ್ವಿಯಾಗುತ್ತದೆ; ಅನುಭವಗಳಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ; ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಓದಿ ತಿಳಿದುಕೊಂಡು ಅನುಸರಿಸಿ. ಸಂಶಯಗಳನ್ನು ನಿವಾರಿಸಿಕೊಂಡರೆ ಪಿಆರ್‍ಒ ಕೆಲಸ ಸುಲಲಿತವಾಗಲಿದೆ.

ಪಿಆರ್‍ಒಗಳೇ ಮತದಾನದ ದಿನ ಮತದಾನ ಕೇಂದ್ರದ ‘ಬಾಸ್’ ಅವರ ತೀರ್ಮಾನಗಳನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದ ಜಿಲ್ಲಾಧಿಕಾರಿಗಳು ಪಿಆರ್‍ಒ ಹ್ಯಾಂಡ್‍ಬುಕ್‍ನ್ನು ಸಮಗ್ರವಾಗಿ ಓದಿ. ಲಿಖಿತವಾಗಿ ನೀಡಿರುವ ನಿರ್ದೇಶನಗಳನ್ನು ರೆಫರೆನ್ಸ್‍ಗೆ ತಮ್ಮೊಂದಿಗೆ ಇರಿಸಿಕೊಳ್ಳಿ. ‘ಮಾಕ್‍ಪೋಲ್’ (ಅಣಕು ಮತದಾನ) ವೇಳೆ ಆದ ಮತದಾನವನ್ನು ಮರೆಯದೆ ಕ್ಲಿಯರ್ ಮಾಡಿ. ಮತದಾನ ಪ್ರಕ್ರಿಯೆಗೆ ಸಿದ್ಧಪಡಿಸಿಕೊಳ್ಳಿ. ಏನೇ ಸವಾಲುಗಳು ಎದುರಾದರೂ ಎದೆಗುಂದದೆ ಪಕ್ಕಾ ಪರಿಹಾರ ನೀಡಲು ಸಾಧ್ಯವಿದೆ; ತಕ್ಷಣವೇ ತಮ್ಮ ಗಮನಕ್ಕೆ ತನ್ನಿ ಎಂದರು. ಈ ನಿಟ್ಟಿನಲ್ಲಿ ಪಿ ಆರ್ ಒಗಳಿಗೆ ಚೆಕ್‍ಲಿಸ್ಟ್ ಸಿದ್ಧಪಡಿಸಿ ನೀಡಲಾಗುವುದು.

ಈ ಬಾರಿ ಮತದಾನದ ವೇಳೆ ‘ವೋಟರ್ ಸ್ಲಿಪ್’ ಅಧಿಕೃತ ಗುರುತು ಪತ್ರವಲ್ಲ ಎಂಬುದನ್ನು ಈಗಾಗಲೇ ಬಹುಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡಲಾಗಿದೆ. ಪ್ರತಿಯೊಂದು ತರಬೇತಿಯಲ್ಲೂ ವಿವರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

17 ಸಿ ಫಾರಂ ಮಹತ್ವದ ದಾಖಲೆಯಾಗಿದ್ದು, ಇದನ್ನು ಮತಗಟ್ಟೆ ಅಧಿಕಾರಿ ಸರಿಯಾದ ರೀತಿಯಲ್ಲಿ ಭರ್ತಿ ಮಾಡುವುದು ಅವಶ್ಯಕ. ಈ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮನವರಿಕೆ ಮಾಡಿ; ಈ ಬಾರಿ ಪೋಸ್ಟಲ್ ಬ್ಯಾಲೆಟ್‍ಗಳ ಸಂಖ್ಯೆ ಕಡಿಮೆಯಾಗಲಿದ್ದು, ಸಿಬ್ಬಂದಿಗಳಿಗೆ ಇಡಿಸಿ(ಇಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್) ನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿ ಪಡೆದು ಗೊಂದಲಕ್ಕೆಡೆಮಾಡದಂತೆ ಕರ್ತವ್ಯ ನಿರ್ವಹಿಸಿ ಎಂದರು.

ಈ ಬಾರಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಬಳಸುವ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಡಿಸಿ ಬಳಕೆ ಆಗಲಿವೆ. ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಕ್ಷೇತ್ರದ ಹೊರಗಡೆ ನಿಯೋಜನೆಗೊಳ್ಳುವ ಸಿಬ್ಬಂದಿಗಳಿಗೆ ಅಂಚೆ ಮತ ಪತ್ರದ ಅವಕಾಶವಿದೆ ಎಂದು ತಿಳಿಸಿದರು.

ಇವಿಎಂ/ವಿವಿಪ್ಯಾಟ್ ಮಿಷಿನ್‍ಗಳ ಬಗ್ಗೆ ಪಿಆರ್‍ಒ ಗಳು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅವಶ್ಯಕ ಚುನಾವಣಾ ಸಮಯದಲ್ಲಿ ಮಿಷಿನ್‍ನಲ್ಲಿ ತೊಂದರೆ ಕಂಡುಬಂದರೆ ಎದೆಗುಂದುವ ಅಗತ್ಯವಿಲ್ಲ; ಸಮಯೋಚಿತವಾಗಿ ನಿರ್ಧಾರ ತೆಗೆದುಕೊಳ್ಳಿ; ಆತ್ಮ ವಿಶ್ವಾಸದೊಂದಿಗೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ತಂಡದಲ್ಲಿಯೂ ಆತ್ಮವಿಶ್ವಾಸ ತುಂಬಿ ಎಂದರು.

ಮಾಧ್ಯಮಗಳ ಪ್ರತಿನಿಧಿಗಳಿಗೂ ಬೂತ್ ಒಳಗಡೆ ಪ್ರವೇಶವಿಲ್ಲ ಎಂದ ಅವರು, ತನ್ನ ಬೂತ್ ಒಳಗಡೆ ಸುಗಮ ಹಾಗೂ ಸುಸೂತ್ರ ಚುನಾವಣೆಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಿ ಆರ್ ಒ ಸ್ವತಂತ್ರರು. ತರಬೇತಿ ಪಡೆದು ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಿ ಎಂದು ಮಾಸ್ಟರ್ ಟ್ರೈನರ್‍ಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಸಲಹೆ ಮಾಡಿದರು.

Comments are closed.