ಕರಾವಳಿ

ಮಕ್ಕಳ ಚಿತ್ರ ನಿರ್ಮಾಣ ಕಾರ್ಯ ಸಾಹಸದಾಯಕ ; ‘ಗಂಧದ ಕುಡಿ ಕಲರವ’ ವಿಶೇಷ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು : ಸಿನಿಮಾ ಈಗ ಉದ್ಯಮವಾಗಿ ಬೆಳೆಯುತ್ತಿರುವಾಗ ಮಕ್ಕಳ ಚಿತ್ರ ನಿರ್ಮಾಣ ಮಾಡುವ ಕಾರ್ಯವಂತೂ ನಿಜವಾಗಿಯೂ ಸಾಹಸದಾಯಕ. ಪರಿಸರದಂತಹ ಥೀಮ್ ಇಟ್ಟುಕೊಂಡು ಬರುತ್ತಿರುವ ಗಂಧದ ಕುಡಿ ಸಿನಿಮಾವನ್ನು ಹೆತ್ತವರು ಮಕ್ಕಳಿಗೆ ತೋರಿಸುವ ಮೂಲಕ ಚಿತ್ರ ತಂಡದ ಶ್ರಮಕ್ಕೆ ಬೆಂಬಲ ನೀಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ನಗರದ ಕೆನರಾ ಸಿಬಿ‌ಎಸ್‌ಇ ಸ್ಕೂಲ್‌ನ ಮೈದಾನದಲ್ಲಿ ನಡೆದ ‘ಗಂಧದ ಕುಡಿ ಕಲರವ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಮಂಗಳೂರು ಬೆಳೆಯುತ್ತಿದೆ. ಪರಿಸರದ ನಾಶ ಕೂಡ ಅಷ್ಟೇ ವೇಗದಲ್ಲಿ ಆಗುತ್ತಿದೆ. ಇದರ ನಡುವೆ ಮುಂದಿನ ಪೀಳಿಗೆಗೆ ಪರಿಸರ ಕಾಳಜಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಪರಿಸರ ರಕ್ಷಣೆ ಕಥಾ ಹಂದರ ಹೊಂದಿರುವ ಚಿತ್ರ ನಿರ್ಮಾಣ ಮಾಡುವ ಕೆಲಸ ಕಷ್ಟಕರ. ಆದರೆ ಚಿತ್ರದ ಮೇಲೆ ಫ್ಯಾಶನ್ ಇಟ್ಟುಕೊಂಡು ಬರುವ ಮಂದಿಗೆ ಮಾತ್ರ ಇಂತಹ ಕೆಲಸ ಸುಲಭ ಎಂದರು.

ಕನ್ನಡದ ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಕರಾವಳಿ ತುಂಬಾ ಸುಸಂಸ್ಕೃತವಾದ ಊರು. ಅದರಲ್ಲೂ ಇಲ್ಲಿನ ಜನ ಬಹಳ ಒಳ್ಳೆಯವರು. ದೇಶದಲ್ಲಿ ಅತೀ ಹೆಚ್ಚು ನಾಗನ ಆರಾಧಕರು ಇರುವ ತಾಣ ಎಂದರೆ ಅದು ಕರಾವಳಿ ಇಂತಹ ಊರಿನ ಮಂದಿ ಪರಿಸರದ ಕುರಿತು ಸಿನಿಮಾ ಮಾಡಿರೋದು ನಿಜವಾಗಿಯೂ ಹೆಮ್ಮೆಯ ಕೆಲಸ. ಗಂಧದ ಮರ ಕೆತ್ತಿದರೂ, ಸುಟ್ಟರೂ ತನ್ನ ಸುವಾಸನೆಯನ್ನು ಮಾತ್ರ ಬಿಟ್ಟು ಕೊಡುವುದಿಲ್ಲ ಇದೇ ರೀತಿಯಲ್ಲಿ ಈ ಸಿನಿಮಾ ಯಶಸ್ಸು ಪಡೆಯಲಿ ಎಂದರು.

ಈ ಬಳಿಕ ಚಿತ್ರದ ನಿರ್ದೇಶಕ ದಿ. ಸಂತೋಷ್ ಶೆಟ್ಟಿ ಕಟೀಲು ಅವರ ತಾಯಿ ಲೀಲಾ ಶಂಕರ ಶೆಟ್ಟಿ ಕಟೀಲು ಅವರನ್ನು ನಿರ್ದೇಶಕರ ಪರವಾಗಿ ಸನ್ಮಾನಿಸಲಾಯಿತು.

ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ ಕೃಷ್ಣ ಮೋಹನ್ ಪೈ, ಚಿತ್ರದ ನಟರಾದ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ರೂಪದರ್ಶಿ ತೃಪ್ತಿ ಅರವಿಂದ್, ನಿವೃತ್ತ ನ್ಯಾಯಾಧೀಶ ಪಿ. ಷಣ್ಮುಗಂ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ನ್ಯಾಯವಾದಿ ಅಮೃತ ಕಿಣಿ, ವಾಮನ್ ಕಾಮತ್, ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ, ರೋನಾಲ್ಡ್ ಮಾರ್ಟಿಸ್, ಶರತ್ ಪೂಜಾರಿ, ಜೀತ್ ಮಿಲಾನ್ ರೋಚ್, ನ್ಯಾಯಾವಾದಿ ಮಮತಾ ಅಧಿಕಾರಿ, ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಲಕ್ಷ್ಮೀ ನಾರಾಯಣ್, ವರದೇಶ್ ಸೇರಿದಂತೆ ಚಿತ್ರತಂಡದ ನಾನಾ ಸದಸ್ಯರು ಉಪಸ್ಥಿತರಿದ್ದರು.

ಗಂಧದ ಕುಡಿಯ ನಿರ್ಮಾಪಕ ಸತ್ಯೇಂದ್ರ ಪೈ ಸ್ವಾಗತಿಸಿದರು. ಆರ್. ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಗಾಯಕರಾದ ಪ್ರಕಾಶ್ ಮಹದೇವನ್, ರೂಪಾ ಮಹದೇವನ್ ಹಾಗೂ ಧನಂಜಯ ವರ್ಮಾ ಅವರಿಂದ ಹಾಡುಗಳ ಕಾರ್ಯಕ್ರಮ ನಡೆಯಿತು.

Comments are closed.