ಕರಾವಳಿ

ಬೇಸಿಗೆಯಲ್ಲಿ ಐಸ್ ಕ್ರೀಂ ತಿನ್ನುವಾಗ ಹುಷಾರ್: ಕ್ಯಾಂಡಿ ತಿಂದು ಕುಂದಾಪುರ ತಾಲೂಕಿನಲ್ಲಿ ಹಲವರು ಅಸ್ವಸ್ಥ!

Pinterest LinkedIn Tumblr

ಕುಂದಾಪುರ: ಬೇಸಿಗೆ ಸಮಯದಲ್ಲಿ ಐಸ್ ಕ್ರೀಮ್ ತಿನ್ನುವಾಗ ಎಚ್ಚರಿಕೆ ವಹಿಸಿ. ಕುಂದಾಪುರದ ಗ್ರಾಮೀಣ ಪ್ರದೇಶಗಳಾದ ಬೆಳ್ವೆ, ಹೆಂಗವಳ್ಳಿ, ಗೋಳಿಯಂಗಡಿ ಭಾಗದಲ್ಲಿ ಐಸ್ ಕ್ಯಾಂಡಿ ತಿಂದು ಮಕ್ಕಳ ಸಹಿತ ಹಿರಿಯರೂಕೂಡ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಐಸ್ ಕ್ಯಾಂಡಿ ತಿಂದು ಮಕ್ಕಳಾದ ಹೆಂಗವಳ್ಳಿಯ ದಿಶಾ(3), ಸಾತ್ವಿಕ್ (8), ಪ್ರತೀಕ್ (11), ಬೆಳ್ವೆಯ ಭುವನ್, ತೊಂಬಟ್ಟುವಿನ ಮಧುಮಿತಾ (5), ಪವಿತ್ರಾ (13), ಆಶಾ(8), ಹೆಂಗವಳ್ಳಿಯ ಜ್ಯೋತಿ(30), ಬೆಳ್ವೆಯ ಲಕ್ಷ್ಮಿ (26) ಅಸ್ವಸ್ಥಗೊಂಡವರು. ಈ ಪೈಕಿ ಅಪ್ರಾಪ್ತ ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಎಲ್ಲರನ್ನೂ ನಲವತ್ತೆಂಟು ಗಂಟೆಗಳ ಕಾಲ ತೀವ್ರಾ ನಿಗಾದಲ್ಲಿ ಇರಿಸಲಾಗಿದೆ. ಉಳಿದಂತೆ ಬಹುತೇಕರು ಚೇತರಿಸಿಕೊಳ್ಳುತ್ತಿದ್ದಾರೆ.

ನಡೆದಿದ್ದೇನು?
ಭಾನುವಾರ ರಜಾ ದಿನವಾಗಿದ್ದು ಮಧ್ಯಾಹ್ನ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಐಸ್ ಕ್ರೀಂ ಮಾರಾಟಗಾರನೊಬ್ಬ ಬಂದಿದ್ದ. ಆತನಿಂದ ಹಲವು ಮಂದಿ ಐಸ್ ಕ್ರೀಂ, ಕ್ಯಾಂಡಿ ಪಡೆದಿದ್ದು ಅದನ್ನು ತಿಂದ ಕೆಲ ಗಂಟೆಗಳಲ್ಲಿ ವಾಂತಿ, ಬೇದಿ ಕಾಣಿಸಿಕೊಂಡಿದೆ. ಮೊದಮೊದಲು ಯಾರೂ ಕೂಡ ಈ ಬಗ್ಗೆ ‌ತಲೆಕೆಡಸಿಕೊಳ್ಳದೇ ಮಕ್ಕಳಿಗೆ ಮನೆ ಮದ್ದು‌ ಮಾಡಿ ಕೊಟ್ಟಿದ್ದರು. ಆದರೂ ಸಮಸ್ಯೆ‌ ಉಲ್ವಣಿಸಿದಾಗ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ‌ ಪ್ರಥಮ ಚಿಕಿತ್ಸೆ ‌ಪಡೆದು ವೈದ್ಯರ ಸಲಹೆಯಂತೆ ಕುಂದಾಪುರ ತಾಲೂಕು‌ ಸಾರ್ವಜನಿಕ ಆಸ್ಪತ್ರೆಗೆ ಇಬ್ನರು ಮಹಿಳೆಯರ ಸಮೇತ ಒಟ್ಟು 9 ಮಂದಿ‌ ದಾಖಲಾಗಿದ್ದಾರೆ. ಇನ್ನು ಕೆಲವು ಮಂದಿ ಹಾಲಾಡಿ, ಬೆಳ್ವೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ.

ಆಸ್ಪತ್ರೆಗೆ ದಾಖಲಾಗುವ ವೇಳೆ ಜ್ವರ, ವಾಂತಿ, ಬೇದಿಯಿಂದ ಬಳಲುತ್ತಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಕೆಲವು ಮಕ್ಕಳು ನಿಶಕ್ತಿಯಿಂದ ಬಳಲುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆಂದು ಮಕ್ಕಳ ತಜ್ಞೆ ಡಾ. ಸುಜಾತಾ, ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.

Comments are closed.