ಕರಾವಳಿ

ಪಾಂಡೇಶ್ವರದಲ್ಲಿ ಬೆಂಕಿ ಅವಘಡ : ಏಳು ಮನೆಗಳಿಗೆ ಹಾನಿ

Pinterest LinkedIn Tumblr

ಮಂಗಳೂರು, ಮಾರ್ಚ್.24:ಆಕಸ್ಮಿಕ ಬೆಂಕಿ ಅವಘಡದಿಂದ ಏಳು ಮನೆಗಳು ಹಾನಿಗೀಡಾದ ಘಟನೆ ಶನಿವಾರ ರಾತ್ರಿ ಪಾಂಡೇಶ್ವರದ ಧೂಮಪ್ಪ ಕಾಂಪೌಂಡ್ ಎಂಬಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೂಮಪ್ಪ ಕಾಂಪೌಂಡ್​ ಅಕ್ಕ ಪಕ್ಕದಲ್ಲಿರುವ ಇತರ ಮನೆಗಳಿಗೂ ಬೆಂಕಿ ತಗುಲಿದ್ದು 7 ಹಂಚಿನ ಮನೆಗಳಲ್ಲಿ 2 ಮನೆಗಳು ಸಂಪೂರ್ಣ ಹೊತ್ತಿ ಉರಿದಿದೆ. ಉಳಿದ ಮನೆಗಳು ಬೆಂಕಿಯ ಕೆನ್ನಾಲಿಗೆ ಹರಡಿ ಹಾನಿಗೊಳಗಾಗಿವೆ.

ಬೆಂಕಿ ಅನಾಹುತಕ್ಕೆ ತುತ್ತಾದ 7 ಮನೆಗಳಲ್ಲಿ ಒಂದು ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದೆ. ಕೂಡಲೇ ಮನೆಯವರು ಹೊರಗೋಡಿ ಬಂದ ಪರಿಣಾಮ ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆ ನಡೆದ ಸ್ಥಳ ವಸತಿ ಪ್ರದೇಶವಾಗಿದ್ದು, ಹಲವು ಮನೆಗಳು ಸಮೀಪದಲ್ಲಿವೆ. ಅಗ್ನಿ ಅವಘಡ ನಡೆದ 200 ಮೀಟರ್ ದೂರದಲ್ಲಿ ಅಗ್ನಿಶಾಮಕ ಕಚೇರಿ ಇರುವುದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್, ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಗುರುಪ್ರಸಾದ್, ಏಳು ಮನೆಗಳಲ್ಲಿ ತಕ್ಷಣಕ್ಕೆ ಮೂರು ಕುಟುಂಬಗಳಿಗೆ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ತಮ್ಮ ಸಂಬಂಧಿಕರ ಮನೆಯಲ್ಲಿ ಇರಲಿದ್ದಾರೆ. ಮನೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Comments are closed.