ಕರಾವಳಿ

ಟಯರಿಗೆ ಬೆಂಕಿಯಿಟ್ಟು ಪ್ರತಿಭಟನೆ: ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಹಿತ ನಾಲ್ವರ ವಿರುದ್ಧ ಪ್ರಕರಣ

Pinterest LinkedIn Tumblr

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಪಕ್ಷದ ಬದಲಾಗಿ, ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದನ್ನು ಖಂಡಿಸಿ ಯಾವುದೇ ಅನುಮತಿ ಪಡೆಯದೇ ಅಕ್ರಮ ಗುಂಪು ಕಟ್ಟಿಕೊಂಡು ದಿಢೀರ್ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಸಹಿತ ಇತರರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವಾಸ್ ಅಮೀನ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ ಹಾಗೂ ಇಮ್ರಾನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಈ ನಾಲ್ವರು ಇತರೊಂದಿಗೆ ಗುಂಪು ಕಟ್ಟಿಕೊಂಡು ನಗರದ ಬ್ರಹ್ಮಗಿರಿಯ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಗುರುವಾರ ರಾತ್ರಿ ವೇಳೆ ಹೈಕಮಾಂಡ್‍ನ ನಿರ್ಧಾರವನ್ನು ಖಂಡಿಸಿ ಪರವಾನಿಗೆ ಪಡೆದುಕೊಳ್ಳದೇ ಪ್ರತಿಭಟನೆ ಮಾಡಿದ್ದರು. ಬಳಿಕ ಟಯರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದರು.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ಹಮ್ಮಿಕೊಂಡಿದ್ದ ಈ ದಿಡೀರ್ ಪ್ರತಿಭಟನೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂಬ ಹಿನ್ನೆಲೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.