ಬ್ಯಾಂಕಾಕ್: ಮಗಳಿಗೆ 25 ವರ್ಷವಾದರೆ ಸಾಕು ಹೆತ್ತವರಿಗೆ ಆಕೆಯ ಮದುವೆಯ ಚಿಂತೆ ಸತಾಯಿಸಲಾರಂಭಿಸುತ್ತದೆ. ನೆರೆ ಮನೆಯವರಿಂದ ಆರಂಭವಾಗಿ ಮ್ಯಾಟ್ರಿಮೋನಿಯಲ್ ಸೈಟ್ ಹೀಗೆ ಎಲ್ಲಾ ಕಡೆ ಆಕೆಗಾಗಿ ವರನ ಹುಡುಕಾಟ ಆರಂಭವಾಗುತ್ತದೆ. ಇದು ಕೇವಲ ಮಧ್ಯಮ ವರ್ಗದವರ ಮಾತಲ್ಲ, ಶ್ರೀಮಂತರ ಮನೆಯ ಕತೆಯೂ ಇದೇ. ಶ್ರೀಮಂತರೂ ತಮ್ಮ ಮನೆ ಮಗಳ ಮದುವೆಯ ವಿಚಾರವಾಗಿ ಬಹಳಷ್ಟು ನಿಗಾ ವಹಿಸುತ್ತಾರೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ಎಂಬುವುದು ಕೂಡಾ ಅಷ್ಟೇ ಸತ್ಯ.
ಹೌದು ಥಾಯ್ಲೆಂಡ್ ನಲ್ಲಿ ಅಚ್ಚರಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲೊಬ್ಬ ಕೋಪಟ್ಯಾಧಿಪತಿ ತಂದೆಗೆ ತನ್ನ ಮಗಳ ಮದುವೆ ಚಿಂತೆ ಅದೆಷ್ಟೆರ ಮಟ್ಟಿಗೆ ಕಾಡುತ್ತಿದೆ ಎಂದರೆ ತನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಮಿರರ್ ಪ್ರಕಟಿಸಿರುವ ವರದಿಯನ್ವಯ ಅರ್ನಾನ್ ರಾಡ್ ಥಾಂಗ್ಸ್ ಹೆಸರಿನ ಕೋಟ್ಯಾಧಿಪತಿಯೊಬ್ಬರು ‘ನನ್ನ ಮಗಳು ಕಾರ್ನ್ ಸಿತಾಳನ್ನು ಮದುವೆಯಾಗುವವರಿಗೆ 10 ಮಿಲಿಯನ್ ಥಾಯ್ ಬಾತ್[ಸುಮಾರು 2 ಕೋಟಿ ರೂಪಾಯಿ] ನೀಡುತ್ತೇನೆ’ ಎಂದಿದ್ದಾರೆ.
ಹಾಗಾದ್ರೆ ಆಕೆಯನ್ನು ಮದುವೆಯಾಗಲು ಷರತ್ತುಗಳೇನು ಎಂಬ ಪ್ರಶ್ನೆ ಕಾಡುವುದು ಸಹಜ. ಹೌದು ಈ ತಂದೆಯೂ ಷರತ್ತೊಂದನ್ನು ಇಟ್ಟಿದ್ದಾರೆ. ಅದು ಕೂಡಾ ಅತ್ಯಂತ ಸರಳವಾದುದು. ಹುಡುಗ ಅತ್ಯಂತ ಶ್ರಮಜೀವಿಯಾಗಿರಬೇಕು, ಹಣ ಸಂಪಾದಿಸಲು ಅತಿ ಹೆಚ್ಚು ಆಸಕ್ತಿ ವಹಿಸಬೇಕು ಹಾಗೂ ಸೋಮಾರಿಯಾಗಿರಬಾರದು. ಇವೆಲ್ಲಕ್ಕೂ ಅಚ್ಚರಿ ಮೂಡಿಸುವ ವಿಚಾರವೆಂದರೆ ಹುಡುಗ ಯಾವುದೇ ಡಿಗ್ರಿ ಹೊಂದಿಲ್ಲವಾದರೂ ಪರವಾಗಿಲ್ಲ ಆದರೆ ಓದಲು ಹಾಗೂ ಬರೆಯಲು ಬರಬೇಕು.
ಅರ್ನಾನ್ ರಾಡ್ ಥಾಂಗ್ಸ್ ಬಳಿ ಜಗತ್ತಿನ ಅತ್ಯಂತ ಬೆಲೆ ಬಾಳುವ ಆದರೆ ಅತಿ ಕೆಟ್ಟ ವಾಸನೆಯ ಹಣ್ಣು ಡೂರಿಯನ್ ತೋಟ ಹೊಂದಿದ್ದಾರೆ. ಈ ಹಣ್ಣುಗಳ ತೋಟ ನಿರ್ವಹಿಸಲು ಮಗಳು ಕೂಡಾ ತನ್ನ ತಂದೆಗೆ ಸಹಾಯ ಮಾಡುತ್ತಾಳೆ. ಹೀಗಾಗಿ ನನ್ನ ಮಗಳಿಗೆ ಗಂಡನಾಗುವವನು ತನ್ನ ಈ ತೋಟದ ನಿರ್ವಹಣೆ ಜವಾಬ್ದಾರಿ ಹೊತ್ತುಕೊಳ್ಳಲು ತಯಾರಿರಬೇಕು ಎಂದೂ ತಿಳಿಸಿದ್ದಾರೆ.
ಇನ್ನು ಭಾರತದಂತೆ ಥಾಯ್ಲೆಂಡ್ ನಲ್ಲಿ ವರದಕ್ಷಿಣೆ ನೀಡುವ ಪದ್ಧತಿ ಇಲ್ಲ. ಇಲ್ಲಿ ಏನಿದ್ದರೂ ವಧುದಕ್ಷಿಣೆಯ ಮಾತು. ಆದರೆ ಅರ್ನಾನ್ ರಾಡ್ ಥಾಂಗ್ಸ್ ತನ್ನ ಮಗಳನ್ನು ವರಿಸಿಕೊಳ್ಳುವ ಹುಡುಗನಿಗೆ 2 ಕೋಟಿ ನೀಡಲು ಮುಂದಾಗಿದ್ದಾರೆ.
Comments are closed.