ಕರಾವಳಿ

ಮಂಗಳೂರಿನ 500ಕ್ಕೂ ಅಧಿಕ ರೌಡಿಗಳ ವಿರುದ್ಧ ಪ್ರತಿಬಂಧಕ ಕಾಯ್ದೆ : ಮೂವರ ಗಡಿಪಾರಿಗೆ ಆದೇಶ

Pinterest LinkedIn Tumblr

ಮಂಗಳೂರು : ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿರುವಂತೆಯೇ ಎಪ್ರಿಲ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಸುಸೂತ್ರವಾಗಿ ನಡೆಯಲು ನಗರದಲ್ಲಿ 500ಕ್ಕೂ ಅಧಿಕ ಮಂದಿಯ ಮೇಲೆ ಪ್ರಿವೆಂಟಿವ್ ಕೇಸ್ ದಾಖಲಿಸಲಾಗಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪ್ರಕ್ರಿಯೆ ಮೇಲೆ ಧಕ್ಕೆ ತರಲು ಸಾಧ್ಯತೆ ಇರುವ ಮೂರು ಮಂದಿಯ ಗಡಿಪಾರಿಗೆ ಆದೇಶಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತ, ಪಾರದರ್ಶಕ ಚುನಾವಣೆಗೆ ಸಂಬಂಧಿಸಿ ಇಲಾಖೆಯು ಕೈಗೊಂಡಿರುವ ಅಗತ್ಯ ಕ್ರಮಗಳ ಭಾಗವಾಗಿ ಈ ಆದೇಶ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಕೇಂದ್ರ ಅರೆಸೇನಾ ಪಡೆಯಿಂದ ಜನರಲ್ಲಿ ವಿಶ್ವಾಸ, ಧೈರ್ಯ ತುಂಬುವ ನಿಟ್ಟಿನಲ್ಲಿ ರೂಟ್ ಮಾರ್ಚ್, ಫ್ಲಾಗ್ ಮಾರ್ಚ್ ನಡೆಸಲಾಗುವುದು ಎಂದರು.

ನಗರ ವ್ಯಾಪ್ತಿಯಲ್ಲಿ 2,010 ಮಂದಿ ಶಸ್ತ್ರಾಸ್ತ್ರ ಪರವಾನಿಗೆದಾರರಿದ್ದು, ಅವರಿಗೆ ಸಮೀಪದ ಠಾಣೆಗಳಲ್ಲಿ ಅದನ್ನು ಠೇವಣಿ ಇರಿಸಲು ಸೂಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಅರ್ಜಿ ನೀಡಿ ಅನುಮತಿ ಪಡೆದಲ್ಲಿ ಶಸ್ತ್ರಾಸ್ತ್ರ ಹೊಂದಿಕೊಳ್ಳಲು ಅವಕಾಶ ದೊರೆಯಲಿದೆ. ಬಾಕಿ ಇರುವ ಜಾಮೀನುರಹಿತ ವಾರೆಂಟ್‌ಗಳ ಕುರಿತಂತೆ ವಿಶೇಷ ತಂಡ ರಚಿಸಿ ತಪ್ಪಿತಸ್ಥರನ್ನು ನ್ಯಾಯಾಲಯದ ಎದುರು ಹಾಜರು ಪಡಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.

ಚುನಾವಣೆಗೆ ಸಂಬಂಧಿಸಿ ಇಲಾಖೆಯ ಸಿಬ್ಬಂದಿಗೆ ನಾಳೆಯಿಂದ ತರಬೇತಿ ನಡೆಯಲಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ರಾಜಕೀಯ ಧುರೀಣರಿಗೆ ಅವರಿಗೆ ಸೂಕ್ತವಾದ ಭದ್ರತೆಯನ್ನು ಒದಗಿಸಲಾಗುತ್ತದೆ. ಅಂತಾರಾಜ್ಯ ಚೆಕ್‌ಪೋಟ್‌ಗಳಲ್ಲಿ 24 ಗಂಟೆಯೂ ತಪಾಸಣಾ ಕಾರ್ಯ ಬಿಗಿಗೊಳಿಸಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.
.

Comments are closed.