ಕರಾವಳಿ

ನಾಳೆ ಅಮ್ಮ ಮಂಗಳೂರಿಗೆ.. : ಮಾರ್ಚ್ 8, 9ರಂದು ಬೋಳೂರಿನಲ್ಲಿ ಅಮೃತ ಸಂಗಮ – 2019

Pinterest LinkedIn Tumblr

ಮಂಗಳೂರು, ಮಾರ್ಚ್.07 : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಕಾರ್ಯಕ್ರಮ ಮಾರ್ಚ್ 8 ಮತ್ತು ಮಾರ್ಚ್ 9ರಂದು ನಡೆಯಲಿದ್ದು, ನಗರದ ಸುಲ್ತಾನ್ ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಆಯೋಜಿಸಿರುವ ಅಮೃತ ಸಂಗಮ – 2019 ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ)ಯವರ ಪಾಲ್ಗೊಳ್ಳಲ್ಲಿದ್ದಾರೆ.  

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದರಾಜ್ ಕಾಂಚನ್ ಅವರು,ಮಾರ್ಚ್ ೮ರಂದು ರಂದು ಬೆಳಗ್ಗೆ ೧೦ಕ್ಕೆ ಸಭಾ ಕಾರ್ಯಕ್ರಮವಿದ್ದು ಅಂದು ವಿಕಲ ಚೇತನರಿಗಾಗಿ ಗಾಲಿ ಕುರ್ಚಿಗಳ ವಿತರಣೆ, ಸ್ಕಾಲರ್ ಶಿಪ್ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಅಮಲ ಭಾರತ (ಸ್ವಚ್ಛ ಭಾರತ) ಅಭಿಯಾನದ ಅಂಗವಾಗಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಚಾಲನೆ, ಅಮೃತ ಸಂಗಮ- ಸ್ಮರಣ ಸಂಚಿಕೆ ಬಿಡುಗಡೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಆಡಳಿತ ನಿರ್ದೇಶಕಿ ಪಿ.ವಿ.ಭಾರತಿ, ಸಚಿವ ಯುಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ತರಂಗ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್.ಪೈ, ಶಾಸಕ ವೇದವ್ಯಾಸ ಕಾಮಾತ್, ಮೇಯರ್ ಭಾಸ್ಕರ್, ಭಾಗವಹಿಸಲಿದ್ದಾರೆ.

ಎಲ್ಲರಿಗೂ ಅಮ್ಮನವರ ದರ್ಶನ : ಅಮ್ಮನ ದರ್ಶನ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಅಗತ್ಯವಾದ ಟೋಕನ್ ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತದೆ. ಸಕಾಲದಲ್ಲಿ ಆಗಮಿಸಿ ಆಸೀನರಾಗಿರುವವರೆಲ್ಲರಿಗೂ ಅವರು ಆಗಮಿಸಿದ ಸಮಯಾನುಸಾರದಂತೆ ದರ್ಶನ ಪಡೆಯಲು ಅವಕಾಶವಿರುತ್ತದೆ.ಸಾರ್ವಜನಿಕರ ಅಭಿಪ್ರಾಯದಂತೆ ಇನ್ನಷ್ಟು ಸರಳವಾಗಿ ಅಮ್ಮನ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಸಾದರಾಜ್ ಕಾಂಚನ್ ತಿಳಿಸಿದರು.

ಅಮೃತ ಸಂಗಮ-2019- ಕಾರ್ಯಕ್ರಮಗಳ ಬಗ್ಗೆ : ಮಂಗಳೂರಿನ ಅಮ್ಮನವರ ಕಾರ್ಯಕ್ರಮವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಆದುದರಿಂದ ಭಕ್ತರು ಆಸಕ್ತಿಯಿಂದ ಇಲ್ಲಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲು ಆಸಕ್ತಿ ವ್ಯಕ್ತಪಡಿಸುತ್ತಾರೆ.

ಇಲ್ಲಿಯ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ನಿರ್ದೇಶನದಂತೆ ವಿದೇಶೀ ಭಕ್ತರ ಸಹಿತ ಆಗಮಿಸುವ ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.ಅಮ್ಮನವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪವನ್ನು ಮಾಡುವ ,ಸತ್ಸಂಗ, ಧ್ಯಾನ,ಭಜನೆ,ಮಾನಸಪೂಜೆಗಳಲ್ಲಿ ಹೆಚ್ಚಾಗಿ ಜನರು ಭಾಗವಹಿಸಲು ಅನುಕೂಲವಾಗುವಂತೆ ಅಗತ್ಯ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ.

ಕಾರ್ಯಕ್ರಮ : ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ:

ಸೂರ್ಯೋದಯದಿಂದ ಸೂರ್ಯಾಸ್ತದ ತನಕ “ಉದಯಾಸ್ತಮಾನ ” ವಿಶೇಷ ಪೂಜೆಗಳು ಇದರಲ್ಲಿ ನವಗ್ರಹ ಶಾಂತಿ ಹೋಮ, ಮಹಾ ಸುದರ್ಶನ ಹೋಮ, ಭಗವತಿ ಪೂಜಾ, ಮಹಾಗಣಪತಿ ಹೋಮ,ಶ್ರೀ ಲಲಿತ ತ್ರಿಶತಿ, ಅಲಂಕಾರ ಪೂಜಾ ಸಹಿತ ವಿವಿಧ ಅರ್ಚನೆ ಗಳು ಬ್ರಹ್ಮಸ್ಥಾನ ಮಹೋತ್ಸವದ ಪ್ರಯುಕ್ತ ಜರುಗಲಿವೆ.

ಯಜ್ಞಶಾಲೆಯಲ್ಲಿ( ಸಭಾಂಗಣ): ಪ್ರವಚನ, ಸತ್ಸಂಗ, ಭಜನೆ,ಧ್ಯಾನ,ಮಾನಸ ಪೂಜೆ ಮತ್ತು ಎಲ್ಲರಿಗೂ ಅಮ್ಮನವರ ಅನುಗ್ರಹ “ದರ್ಶನ” ವಿರುತ್ತದೆ ಎಂದು ಪ್ರಸಾದರಾಜ್ ಕಾಂಚನ್ ವಿವರ ನೀಡಿದರು.

ಅಮ್ಮನವರ ಬಗ್ಗೆ: ಅಮ್ಮನವರು ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾಗಿದ್ದಾರೆ.ವಿಶ್ವದ ಶಾಂತಿ,ಸಾಮರಸ್ಯಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸುತ್ತಾ ಹಗಲಿರುಳೆನ್ನದೆ ಸೇವೆಗೈಯುತ್ತಿದ್ದಾರೆ. ಜೀವನದಲ್ಲಿ ಅನುಭವಿಸುತ್ತಿರುವ ಜನರು ಸಂಕಷ್ಟಗಳ ಪರಿಹಾರಕ್ಕಾಗಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಬಳಿಬಂದವರೆಲ್ಲರನ್ನೂ ಅಮ್ಮನವರು ಜಾತಿ,ಮತ,ವರ್ಣ,ಲಿಂಗ ಭೇದವಿಲ್ಲದೆ ಎಲ್ಲರ ದು:ಖಗಳಿಗೆ ಅಮ್ಮ ತನ್ನ ಕರುಣಾಮಯಿ ಹೃದಯದಿಂದ ಅಪ್ಪಿ ಸಂತೈಸುತ್ತಾ ಅವರೆಲ್ಲರ ಬಾಳಿನಲ್ಲಿ ಚೈತನ್ಯ ತುಂಬುತ್ತಿರುವುದು ಭಕ್ತರ ಅನುಭವದ ಮಾತು.

ಅಮ್ಮನವರ ಪ್ರೇಮ ಹಾಗೂ ಸೇವೆಗಳ ಕರೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಅಮ್ಮನವರಿಗೆ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ಗೌರವಾರ್ಪಣೆ ಮಾಡಲಾಗುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಅಮ್ಮನವರ ಶಾಖಾಮಠಗಳಿದ್ದು ಸೇವಾನಿರತವಾಗಿದೆ. ಅಮ್ಮನವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪವಿತ್ರವಾದ ದೇವರಸೇವೆಯಂತೆ ಅನುಷ್ಠಾನ ಗೊಳಿಸಲಾಗುತ್ತಿದೆ.ಇದರಿಂದಾಗಿ ಮಾತಾ ಅಮೃತಾನಂದಮಯಿ ಮಠವು ಎಲ್ಲರ ಪ್ರೀತಿ,ವಿಶ್ವಾಸಾರ್ಹತೆಯನ್ನು ಹೊಂದಿದೆ.

ಮಂಗಳೂರಿನಲ್ಲಿ:  ಮಂಗಳೂರಿನಲ್ಲಿ ಅಮ್ಮನವರ ಪ್ರಥಮ ಕಾರ್ಯಕ್ರಮ 1995 ರಲ್ಲಿ ನಗರದ ಪುರಭವನದಲ್ಲಿ ಹಾಗೂ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ.ಅಮ್ಮನವರ ಭಕ್ತರು ಅಂದಿನಿಂದಲೂ ಅತ್ಯಂತ ಶ್ರದ್ಧೆಯಿಂದ ಆಧ್ಯಾತ್ಮಿಕ, ಸಾಮಾಜಿಕ ಸೇವಾಕಾರ್ಯಗಳಿಂದ ಸೇವೆಗೈದು ಅಮ್ಮನವರ ಪ್ರೀತಿಗೆ,ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದರ ಪರಿಣಾಮವಾಗಿ ಅಮ್ಮನವರು ಅಮೃತ ವಿದ್ಯಾಲಯಂ ಹಾಗೂ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ,ಜೀವನಾವಶ್ಯಕವಾದ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಉನ್ನತ ಶ್ರೇಣಿಯ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಶ್ರೀ ಬ್ರಹ್ಮಸ್ಥಾನ ಕ್ಷೇತ್ರ 2008 ರಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟಿದೆ.

ಈ ಕ್ಷೇತ್ರದಲ್ಲಿ ಶಿವನ ಕುಟುಂಬದ ಶಿವ,ಪಾರ್ವತಿ ದೇವಿ,ಗಣಪತಿ, ಸುಬ್ರಹ್ಮಣ್ಯ (ರಾಹು, ನಾಗ) ದೇವರುಗಳ ವಿಗ್ರಹಗಳು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ ಹಾಗೂ ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ನಾಲ್ಕು ದ್ವಾರಗಳಿದ್ದು ಶಿವ ಶಕ್ತಿ ಐಕ್ಯತೆಯನ್ನು ಹೊಂದಿರುವ ವಿಶೇಷ ಕ್ಷೇತ್ರವಾಗಿದೆ. ತಮ್ಮ ಜೀವನದಲ್ಲಿ ಗ್ರಹಗಳ ಸ್ಥಾನಾಂತರ ಮತ್ತು ದಶಾ ಸಂಧಿಗಳ ದೋಷ ಪರಿಹಾರಕ್ಕಾಗಿ ಇಲ್ಲಿನ ವಿಶೇಷ ಪೂಜೆ ಹಾಗೂ ಹೋಮಗಳು ಅತ್ಯಂತ ಫಲಪ್ರದವೆಂಬುದು ಭಕ್ತರ ಅನುಭವದ ಮಾತಾಗಿದೆ.

ಅಮ್ಮನವರ ಜನ್ಮ ನಕ್ಷತ್ರವಾದ ಕೃತ್ತಿಕಾದಂದು ಪ್ರತಿ ತಿಂಗಳಲ್ಲೂ ಸಂಜೆ 6.30ರಂದ ರಾತ್ರಿ 8ಗಂಟೆಯ ತನಕ ಭಗವತಿ ಆರಾಧನೆ, ಜ್ಯೋತಿ ಪೂಜೆ ,ಮಹಾ ಪ್ರಸಾಧ ಸೇವೆ ಇರುತ್ತದೆ ಎಂದು ಪ್ರಸಾದರಾಜ್ ಕಾಂಚನ್ ತಿಳಿಸಿದರು.

ಸಾರ್ವಜನಿಕ ಅನ್ನ ಸಂತರ್ಪಣೆ : ಶ್ರೀ ಬ್ರಹ್ಮಸ್ಥಾನ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ.
ಕ್ಯಾಂಟೀನ್ ಸೌಲಭ್ಯ: ವೈದ್ಯಕೀಯ ಚಿಕಿತ್ಸಾ ಸೌಲಭ್ಯವಿರುತ್ತದೆ. ಸಾರಿಗೆ ವ್ಯವಸ್ಥೆ: ಲೇಡಿಹಿಲ್ ನಿಂದ ಅಮೃತ ವಿದ್ಯಾಲಯಂ ವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಬಸ್, ರೈಲ್ವೆ ನಿಲ್ದಾಣ ಗಳಿಗೆ ಸಾರಿಗೆ ವ್ಯವಸ್ಥೆ ಇರುತ್ತದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಮಿತಿ ಪ್ರಮುಖರಾದ ಮಾದವ ಸುವರ್ಣ ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಾಮನ್ ಕಾಮಾತ್, ಸುರೇಶ್ ಅಮೀನ್, ವಾಸುದೇವ ಬೋಳೂರು, ಮಾದವ ಸುವರ್ಣ ಉಪಸ್ಥಿತರಿದ್ದರು.

Comments are closed.