ಕರಾವಳಿ

ಎರಡು ದಿನಗಳ ಅಬ್ಬಕ್ಕ ಉತ್ಸವಕ್ಕೆ ಸಚಿವ ಖಾದರ್ ಚಾಲನೆ

Pinterest LinkedIn Tumblr

ಮಂಗಳೂರು : ಉಳ್ಳಾಲ ಕಡಲಕಿನಾರೆಯಲ್ಲಿ ಎರಡು ದಿನಗಳ ಅಬ್ಬಕ್ಕ ಉತ್ಸವವನ್ನು ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಸಿಂಗಾರವನನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.

ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಉಳ್ಳಾಲದ ಬೀಚ್‌ನಲ್ಲಿ ಹಮ್ಮಿಕೊಂಡ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಬ್ಬಕ್ಕನ ಸಾಹಸ ಚರಿತ್ರೆ ನಮ್ಮೆಲ್ಲರಿಗೂ ಸ್ಫೂರ್ತಿ, ಅದೇ ರೀತಿ ಉತ್ಸವ ಸೌಹಾರ್ದತೆಯ ಸಂಕೇತವಾಗಿ ಯುವ ಜನತೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಅಬ್ಬಕ್ಕ ಈ ನಾಡಿಗಾಗಿ ಎಲ್ಲರನ್ನು ಜೊತೆಗೂಡಿಸಿಕೊಂಡು ಶತ್ರುಗಳ ವಿರುದ್ದ ಹೋರಾಡಿದ ನಾಯಕತ್ವ ಆಕೆಯ ದೈರ್ಯ ನಮ್ಮೆಲ್ಲರಿಗೂ ಪ್ರೇರಕ ಶಕ್ತಿ. ಈ ಚರಿತ್ರೆ ಮುಂದಿನ ಹಾಗೂ ಈಗಿನ ಪೀಳಿಗೆಯವರಿಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ಉಳ್ಳಾಲದ ಆಸುಪಾಸಿನ ಊರುಗಳಲ್ಲಿ ಅಬ್ಬಕ್ಕ ಉತ್ಸವವನ್ನು ಆಚರಿಸಿಕೊಂಡು ಈ ಬಾರಿ ಉಳ್ಳಾಲದಲ್ಲಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಕತಾಳೀಯವಾಗಿ ಉಳ್ಳಾಲ ತಾಲೂಕು ಘೋಷಣೆಯಾಗಿ ವಿವಿಧ ರೀತಿಯ ಅಭಿವೃದ್ಧಿಗೆ ನಾಂದಿಯಾಗಿದೆ. ಉಳ್ಳಾಲದ ತೊಕ್ಕೊಟ್ಟಿನಲ್ಲಿ 8 ಕೋಟಿ ರೂ. ವೆಚ್ಚದ ಅಬ್ಬಕ್ಕ ಭವನ ನಿರ್ಮಾಣವಾಲಿದೆ ಎಂದು ಖಾದರ್ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಮಂಗಳೂರು ಮೂಡಾ ಆಯುಕ್ತ ಶ್ರೀಕಾಂತ ರಾವ್, ಉಳ್ಳಾಲ ಜಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಕುಮಾರ್,  ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್  ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

Comments are closed.