ಕರಾವಳಿ

ರೈಲು ಚಾಲಕನ ಮರೆವಿನಿಂದ ಬೈಂದೂರು ನಿಲ್ದಾಣದಲ್ಲೇ ಬಾಕಿಯಾಗಿದ್ರು 45 ಪ್ರಯಾಣಿಕರು!

Pinterest LinkedIn Tumblr

ಉಡುಪಿ: ರೈಲು ಚಾಲಕನ ಮರೆವಿನಿಂದಾಗಿ ಗಂಟೆಗಳ ಕಾಲ 45 ಮಂದಿ ಪ್ರಯಾಣಿಕರು ಕಾದು ಬಳಿಕ ಪುನರ್ ವ್ಯವಸ್ಥೆಯನ್ನು ಇಲಾಖೆ ಅವರಿಗೆ ಕಲ್ಪಿಸಿದ ಘಟನೆ ಬೈಂದೂರು ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ.

(ಸಾಂದರ್ಭಿಕ ಚಿತ್ರ)

ಕೊಲ್ಲೂರು ದೇವಳಕ್ಕಾಗಿ ಆಗಮಿಸಿದ್ದ 45 ಮಂದಿ ಪ್ರಯಾಣಿಕರು ಅಜ್ಮೀರ್‌- ಎರ್ನಾಕುಲಂ ಮರುಸಾಗರ್ ರೈಲಿನಲ್ಲಿ ಮಾ. 2ರಂದು ಕೇರಳಕ್ಕೆ ತೆರಳಲು ಮುಂಗಡ ಸೀಟುಗಳನ್ನು ಕಾಯ್ದಿರಿಸಿ ಸಂಜೆ 4:40ರ ಸುಮಾರಿಗೆ ರೈಲಿಗಾಗಿ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದರು.

ಈ ವೇಳೆ ಆಗಮಿಸಿದ ರೈಲು ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ನೀಡದೆ ಮುಂದಕ್ಕೆ ಸಾಗಿದ್ದು ಗೊಂದಲಕ್ಕೀಡಾದ ಪ್ರಯಾಣಿಕರು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ, ತುರ್ತು ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಕೂಡಲೇ ಅಧಿಕಾರಿಗಳು ಉಡುಪಿ ನಿಲ್ದಾಣಕ್ಕೆ ಈ ಕುರಿತು ಮಾಹಿತಿ ರವಾನಿಸಿದರು.

ಇದೇ ಸಮಯದಲ್ಲಿ ಆಗಮಿಸಿದ ಕಾರವಾರ-ಬೆಂಗಳೂರು ರೈಲಿನಲ್ಲಿ ಈ 45 ಪ್ರಯಾಣಿಕರನ್ನು ಉಡುಪಿಗೆ ಕಳುಹಿಸಿಕೊಡಲಾಯಿತು. ಉಡುಪಿ ನಿಲ್ದಾಣಕ್ಕೆ ಆಗಮಿಸಿದ ಇವರೆಲ್ಲರು, ಅಲ್ಲೇ ನಿಂತಿದ್ದ ಮರುಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆಂದು ಹೇಳಲಾಗಿದೆ.

Comments are closed.