ಮಂಗಳೂರು, ಫೆಬ್ರವರಿ. 25: ಸ್ಮಾರ್ಟ್ ಸಿಟಿಯಾಗುತ್ತಿರುವ ನಗರದಲ್ಲಿ ‘ಚಲೋ ಆಯಪ್’ ಆಧಾರಿತ ಬಸ್ ಸೇವೆ ದೇಶಕ್ಕೆ ಮಾದರಿ ಯಾಗಬೇಕು. ಯಾರೋ ಒಬ್ಬ ಬಸ್ ಚಾಲಕ ಮಾಡುವ ಕೆಲವು ತಪ್ಪಿನಿಂದ ಸಂಪೂರ್ಣ ಸಿಟಿ ಬಸ್‌ಗಳಿಗೆ ಕೆಟ್ಟ ಹೆಸರು ಬರುತ್ತದೆ. ಸಾರಿಗೆಯ ವ್ಯವಸ್ಥೆಗಳನ್ನು ಉನ್ನತೀಕರಿಸಿದಾಗ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಗರದಲ್ಲಿಂದು ಸಿಟಿ ಬಸ್‌ಗಳ ಲೈವ್‌ಟ್ರಾಕಿಂಗ್ ತಂತ್ರಜ್ಞಾನ ‘ಚಲೋ ಆಯಪ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ರೀತಿ ಬಸ್ಸುಗಳ ಸೇವೆಯನ್ನಾಧರಿಸಿ ರೇಟಿಂಗ್ ನೀಡುವ ವ್ಯವಸ್ಥೆ ಜಾರಿಯಾದಾಗ ಉತ್ತಮ ಸೇವೆ ನೀಡಿದವರಿಗೆ ಗೌರವದ ಜತೆಗೆ ನಿಯಮ ಮೀರಿದ ಕಳಪೆ ನಿರ್ವಹಣೆಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಗ್ರ ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ ಎಂದು ಅವರು ಹೇಳಿದರು.
ಉಪಪೊಲೀಸ್ ಆಯುಕ್ತೆ ( ಎಸ್ಪಿ – ಎಸಿಬಿ) ಉಮಾ ಪ್ರಶಾಂತ್, ಸಹಾಯಕ ಆರ್‌ಟಿಓ ಜಾನ್‌ಮಿಸ್ಕಿತ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಸೋಸಿಯೇಶನ್ ಅಧ್ಯಕ್ಷ ದಿಲ್‌ರಾಜ್ ಆಳ್ವ, ಚಲೋ ಆಯಪ್‌ನ ಸಹಸಂಸ್ಥಾಪಕಿ ಪ್ರಿಯಾಸಿಂಗ್ ಉಪಸ್ಥಿತರಿದ್ದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸಿಟಿ ಬಸ್ಸುಗಳ ಸಮಗ್ರ ಮಾಹಿತಿ ನೀಡುತ್ತದೆ ಈ ಚಲೋ ಆಯಪ್:
ಜಿಲ್ಲಾ ಬಸ್ಸು ಮಾಲಕರ ಸಂಘ ಮತ್ತು ಚಲೋ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾದ ಈ ಚಲೋ ಆಯಪ್ ನಗರದಲ್ಲಿ ಓಡಾಡುವ ಸಿಟಿ ಬಸ್ಸುಗಳ ಸಮಗ್ರ ಮಾಹಿತಿಯನ್ನು ಒದಗಿಸಲಿದೆ. ಸ್ಮಾರ್ಟ್ ಫೋನ್‌ನಲ್ಲಿ ಚಲೋ ಆಯಪ್ ಡೌನ್‌ಲೋಡ್ ಮಾಡಿಕೊಂಡಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಬಸ್ಸುಗಳ ಬಗ್ಗೆ ತಿಳಿದುಕೊಳ್ಳಬಹುದು. ಆಯಪ್‌ನ ಪ್ರಥಮ ಭಾಗವಾಗಿ ನಗರದ 320 ಬಸ್‌ಗಳಲ್ಲಿ ಜಿಪಿಎಸ್ ತಂತ್ರಜ್ಞಾನದ ಮೂಲಕ ಈ ಆಯಪ್ ಕಾರ್ಯನಿರ್ವಹಿಸುತ್ತಿದೆ.
ಚಲೋ ಆಯಪ್‌ನಲ್ಲಿ ಬಸ್‌ನ ಲೈವ್ ಟ್ರಾಕಿಂಗ್ ವ್ಯವಸ್ಥೆ ಇದೆ. ಮೊಬೈಲ್ ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ಮಾಹಿತಿ ಪಡೆಯಬಹುದು. ಮ್ಯಾಪ್‌ನಲ್ಲಿ ಟ್ಯಾಪ್ ಮಾಡಿ ಬಸ್ಸು ಎಲ್ಲಿದೆ? ಯಾವ ಸಮಯಕ್ಕೆ ಯಾವ ಬಸ್ಸು ನಿಲ್ದಾಣಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
ಪ್ರಯಾಣಿಕ ಸ್ನೇಹಿ ಆಯಪ್ ಇದಾಗಿದ್ದು, ಚಾಲಕ ಎಷ್ಟು ಕಿ.ಮೀ. ವೇಗದಲ್ಲಿ ಬಸ್ಸನ್ನು ಓಡಿಸುತ್ತಿದ್ದಾನೆ, ರೂಟ್ ಬದಲಾವಣೆಯನ್ನು ಕೂಡಾ ಈ ಆಯಪ್ ಮೂಲಕ ಮಾಹಿತಿ ಪಡೆಯಬಹುದು.
ಪ್ರಯಾಣಿಕರನ್ನು ಮುಖ್ಯ ಧ್ಯೇಯವಾಗಿರಿಸಿಕೊಂಡು ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಆಯಪ್ ಅತ್ಯಂತ ಉಪಯುಕ್ತವಾಗಿದ್ದು, ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳಕ್ಕೆ ಬಸ್ಸಿಗಾಗಿ ತಾಸುಗಟ್ಟಲೆ ಬಸ್ಸು ನಿಲ್ದಾಣಗಳಲ್ಲಿ ಕಾಯುವ ಪ್ರಮೇಯ ಇದರಿಂದ ತಪ್ಪಲಿದೆ.





Comments are closed.