ಕರಾವಳಿ

‘ಶೋಭಾ ಗೋ ಬ್ಯಾಕ್’; ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕರಂದ್ಲಾಜೆ ವಿರುದ್ಧ ಅಸಮಧಾನ!

Pinterest LinkedIn Tumblr

ಉಡುಪಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೆಂಬುದು ಕಾರ್ಯಕರ್ತರ ಅಸಮಾಧನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಟ್ವಿಟರ್‌ನಲ್ಲಿ ಗೋ ಬ್ಯಾಕ್‌ ಶೋಭಾ ಟ್ವೀಟ್‌ ಅಭಿಯಾನ ನಡೆಸಿದ್ದಾರೆ. ಶೋಭಾ ಗೋ ಬ್ಯಾಕ್‌ ಹ್ಯಾಶ್‌ಟ್ಯಾಗ್‌ ಮೂಲಕ ಟ್ವೀಟ್‌ ಆರಂಭಿಸಿ ಎರಡು ಗಂಟೆ ಅವಧಿಯಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ಟ್ವೀಟ್‌ಗಳಾಗಿವೆ.

ಕಾರ್ಯಕರ್ತರು ಹೇಳೋದೇನು?
ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿ ಯಾರೇ ಆದರೂ ತೊಂದರೆಯಿಲ್ಲ, ನಾವು ಬೆಂಬ ನೀಡುತ್ತೇವೆ. ಶೋಭಾ ಆದರೆ ಖಂಡಿತ ನಮ್ಮ ಬೆಂಬಲವಿಲ್ಲ, ಬದಲಾಗಿ ವಿರೋಧವಿದೆ. ಕಳೆದ ಬಾರಿ ಮೋದಿ ಅಲೆಯಲ್ಲಿ ಮತ ಚಲಾಯಿಸಿದೆವು. ಈ ಬಾರಿ ಸ್ಥಳೀಯ ಬಿಜೆಪಿ ಅಭ್ಯರ್ಥಿಗಳೇ ಸಂಸದರಾಗಬೇಕು. ಸ್ಥಳೀಯರು ಸಂಸದರಾದರೆ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಈ ಐದು ವರ್ಷದಲ್ಲಿ ಅವರು ಕ್ಷೇತ್ರದ ಕಡೆಗೆ ಬಾರದೆ ಅನಾಥರನ್ನಾಗಿ ಮಾಡಿದ್ದಾರೆ. ಮತದಾರರ ಸಂಕಷ್ಟ ಕೇಳಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಟ್ವಿಟರ್‌ ಟ್ರೆಂಡ್‌ ಅಭಿಯಾನ ಆರಂಭಿಸಿದ್ದರು.

ಉಭಯ ಕ್ಷೇತ್ರಗಳಲ್ಲೂ ಅಸಮಧಾನದ ಹೊಗೆ!
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಶೋಭಾ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಲೇ ಉಡುಪಿ ಕ್ಷೇತ್ರದ ಮಂದಿ ಗರಂ ಆಗಿ ಟ್ವೀಟ್ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನ ಗಂಭೀರತೆ ಪಡೆಯುತ್ತಲೇ ಶೋಭಾ ಕರಂದ್ಲಾಜೆ ಬೆಂಬಲಿಗರೊಬ್ಬರು ಉಡುಪಿಯ ಮೋದಿ ಅಭಿಮಾನಿ ಪ್ರವೀಣ್ ಯಕ್ಷಿಮಠ ಎನ್ನುವರ ಮೇಲೆ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ನೀಡುತ್ತಾರೆ. ಇದು ಕಾರ್ಯಕರ್ತರ ಮತ್ತಷ್ಟು ಆಕ್ರೋಷಕ್ಕೆ ಕಾರಣವಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕರಂದ್ಲಾಜೆ ವಿರುದ್ಧ ಸಮಾಧನದ ಬರಹಗಳು ಕಂಡುಬಂದಿದೆ. ಇತ್ತ ಶುಕ್ರವಾರ ತರಿಕೆರೆಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಶೋಭಾ ಕರಂದ್ಲಾಜೆ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಮಹೇಶ್ ಪೂಜಾರಿ ಕುಂದಾಪುರ ಅವರ ಕುರಿತು ಮಾತನಾಡಿದ್ದು ಇದರಿಂದ ಅಲ್ಲಿಯೂ ಕೂಡ ಸ್ಥಳೀಯ ಕಾರ್ಯಕರ್ತರು ಶೋಭಾ ವಿರುದ್ಧ ಗರಂ ಆದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಇನ್ನು ಕ್ಷೇತ್ರಕ್ಕೆ ಬಾರದ ಬಗ್ಗೆಯೂ ಕೂಡ ಅಲ್ಲಿನ ಕಾರ್ಯಕರ್ತರು ಸಿಟ್ಟಾಗಿದ್ದರು ಎನ್ನಲಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಸಂಸದರನ್ನು ವಿರೋಧಿಸುತ್ತಿರುವುದರಿಂದ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ, ಕಾರ್ಯಕರ್ತರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ.

Comments are closed.