ಕರಾವಳಿ

“ದೇಯಿಬೈದತಿ” ತುಳು ಚಲನಚಿತ್ರಕ್ಕೆ ಚಿತ್ರಪ್ರೇಮಿಗಳಿಂದ ಅದ್ಭುತವಾದ ಪ್ರತಿಕ್ರಿಯೆ : ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ

Pinterest LinkedIn Tumblr

ಮಂಗಳೂರು: ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ತಾಯಿಯ ಕುರಿತು ಸೂರ್ಯೋದಯ ಪೆರಂಪಳ್ಳಿ ಅವರು ನಿರ್ಮಿಸಿ, ನಿರ್ದೇಶಿಸಿರುವ “ದೇಯಿಬೈದತಿ” ತುಳು ಚಲನಚಿತ್ರ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಬಿಡುಗಡೆಗೊಂಡಿದ್ದು, ಅವಳಿ ಜಿಲ್ಲೆಗಳ ಚಿತ್ರಪ್ರೇಮಿಗಳಿಂದ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿನಿಮಾದಲ್ಲಿ ಕರಾವಳಿಯ ಭವ್ಯ ಪರಂಪರೆಯ ಸಂಸ್ಕೃತಿಯನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಚಿತ್ರ ವೀಕ್ಷಿಸಿದ ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಾ ಇದೆ. ಅದರಲ್ಲೂ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಟಾಕೀಸ್‌ಗಳಲ್ಲಿ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಮೊದಮೊದಲಿಗೆ ಚಿತ್ರದ ಒಟ್ಟು ಅವಧಿ ತುಸು ಜಾಸ್ತಿಯಾಯಿತು, ಚಿತ್ರದ ಅವಧಿಯನ್ನು ಇನ್ನೂ ಸ್ವಲ್ಪ ಕಡಿಮೆಗೊಳಿಸಿದರೆ ಒಳ್ಳೆದಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿತ್ತಾದರೂ, ಬಳಿಕ ದೇಯಿಬೈದೆತಿ ಕಥೆಯನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸಬೇಕಾದರೆ ಚಿತ್ರದ ಒಟ್ಟು ಅವಧಿಯಲ್ಲಿ ಯಾವೂದೇ ರೀತಿಯ ಒಪ್ಪಂದ ಸಾಧ್ಯವಿಲ್ಲ. ಸಿನಿಮಾವನ್ನು ಮೊಟಕುಗೊಳಿದರೆ ಚಿತ್ರದ ಕಥೆ ಸಮರ್ಪಕ ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು.

ಈ ಚಿತ್ರಕ್ಕಾಗಿ ಐನೂರು ವರ್ಷಗಳ ಹಿಂದಿನ ಕಾಲಕ್ಕೆ ಸರಿ ಹೊಂದುವ ಭವ್ಯ ಮನೆಗಳ ಸೆಟ್‌ಗಳ ನಿರ್ಮಿಸಿ ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ ಆಚಾರ, ವಿಚಾರ, ಉಡುಗೆ,ತೊಡುಗೆಗಳ ಓರಣಗಳನ್ನು ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳಲ್ಲೂ ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕರಾವಳಿ ಬೆಡಗಿ ಸೌಜನ್ಯ ಹೆಗ್ಡೆ ( ದೇಯಿಬೈದತಿ), ಕರಾವಳಿ ಮೂಲದ ಮುಂಬಾಯಿ ಬೆಡಗಿ ಕಾಜಾಲ್ (ಸ್ವರ್ಣ ಕೇದಗೆ), ಚೇತನ್ ರೈ ಮಾಣಿ, ಎಂ.ಕೆ.ಮಠ, ಪ್ರಕಾಶ್ ಧರ್ಮನಗರ, ಲಕ್ಷಣ್ ಕುಮಾರ್ ಮಲ್ಲೂರ್ ಮೊದಲಾದವರು ಚಿತ್ರಕ್ಕೆ ಜೀವ ತುಂಬಿದ್ದಾರೆ.

ಹಾಡುಗಳಂತೂ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿದೆ. ವಿನೂತನ ಶೈಲಿಯಲ್ಲಿ ಸಂಗೀತ ನೀಡಲಾಗಿದ್ದು, ಹಾಡುಗಳ ಮೂಲಕವೇ ಪಾತ್ರಗಳು ಕಣ್ಣಮುಂದೆ ಬಂದು ಹಾದುಹೋಗುವ ಪರಿ ಅದ್ಬುತವಾಗಿದೆ. ಒಟ್ಟಿನಲ್ಲಿ ಕಮರ್ಷಿಯಲ್ ಚಿತ್ರಗಳ ಬಗ್ಗೆ ಹೆಚ್ಚು ಒತ್ತು ನೀಡುವ ಕರಾವಳಿಯ ಸಿನಿಪ್ರಿಯರು, ಇಂತಹ ಚಿತ್ರಗಳನ್ನು ಯಾವರೀತಿಯಲ್ಲಿ ಸ್ವಿಕರಿಸುತ್ತಾರೆ ಎಂಬ ಕುತೂಹಲವಿದ್ದರೂ, ಬಿಲ್ಲವ ಸಮಾಜದ ಸಂಘಟನೆಗಳು ಮಾತ್ರ ಈ ಚಿತ್ರವನ್ನು ನಿರ್ಮಾಪಕರಿಗೆ ಯಾವೂದೇ ರೀತಿಯಲ್ಲಿ ಮೋಸ ಆಗದಂತೆ ಗೆಲ್ಲಿಸಿಕೊಡುವುದಂತೂ ಖಂಡಿತ.

ಇದಕ್ಕೆ ಪೂರಕವೆಂಬಂತೆ ಬೆಳ್ತಂಗಡಿಯಲ್ಲಿ ಯುವವಾಹಿನಿ ಸಂಘಟನೆಯು ಈಗಾಗಲೇ 1500 ಮಂದಿಗೆ ಚಿತ್ರ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಅದೇ ರೀತಿ ಬಿಲ್ಲವ ಸಮಾಜದ ಕೆಲವು ಮುಖಂಡರು ಹಲವೆಡೆಗಳಲ್ಲಿ ಚಿತ್ರ ವೀಕ್ಷಣೆಗೆ ಬೇಕಾದ ಅನುಕೂಲತೆಗಳನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಚಿತ್ರ ಚೆನ್ನಾಗಿ ಮೂಡಿ ಬಂದಿರುವುದರಿಂದ ಹಾಗೂ ಚಿತ್ರಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಸಿನಿಮಾಕ್ಕೆ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ನಟ ಸೂರ್ಯೋದಯ ಪೆರಂಪಳ್ಳಿಯವರು ತುಂಬಾ ಸಂತೋಷವಾಗಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕ, ನಿರ್ಮಾಪಕ ಸೂರ್ಯೋದಯ ಅವರು ಏನೆನ್ನುತ್ತಾರೆ..?

ಕೋಟಿ ಚೆನ್ನಯರ ಪಾರ್ದನದಲ್ಲಿ ಈ ತನಕ ದೇಯಿಬೈದತಿಯ ಬದುಕಿನ ನುಡಿಯನ್ನು ಮಾತ್ರ ಕೇಳಿದ್ದೇವೆ. ಆದರೆ ನುಡಿಯೊಳಗೆ ಅಡಗಿರುವ ಸತ್ಯದ ನಡೆಯನ್ನು ದೇಯಿಬೈದತಿ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಸಿನಿಮಾದಲ್ಲಿ ಕರಾವಳಿಯ ಭವ್ಯ ಪರಂಪರೆಯ ಸಂಸ್ಕೃತಿಯನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ತಾಯಿ ಸಂಕ್ರಿ ಅಮೀನ್, ಸೋದರ ಮಾವನರಾದ ಪಾತ್ರಿರಾಮ ಪೂಜಾರಿಯವರು ಹೇಳುತ್ತಿದ್ದ ತುಳುನಾಡಿನ ಬೈದೆರ್ಲ ಪಾಡ್ದನವನ್ನು ಕೇಳುತ್ತಾ ಬೆಳೆದ ನನಗೆ ಬಾಲ್ಯದಲ್ಲೇ ವೀರಪುರುಷರಾದ ಕೋಟಿ ಚೆನ್ನಯ್ಯರ ಬಗ್ಗೆ ಆಸಕ್ತಿ ಬೆಳೆಯಿತು. ಹಾಗಾಗಿ ತುಳುನಾಡಿನ ಜನಪದ ಮಹಾಕಾವ್ಯವಾದ ಬೈದೆರ್ಲ ಪಾರ್ದನದ ಬಗ್ಗೆ ಅಧ್ಯಯನ ಮಾಡಿದ ನಾನು ಹತ್ತು ವರ್ಷಗಳ ಹಿಂದೆಯೇ ಕೋಟಿ ಚೆನ್ನಯ್ಯರ ತಾಯಿ ದೇಯಿಬೈದೆತಿಯ ಕುರಿತು ಸಿನಿಮಾ ಮಾಡಲು ಅಧ್ಯಯನ ಮಾಡಿದೆ.

ಸಿನಿಮಾಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಾ ಇದೆ. ಅದರಲ್ಲೂ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಟಾಕೀಸ್‌ಗಳಲ್ಲಿ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾದ ಒಟ್ಟು ಅವಧಿ ತುಸು ಜಾಸ್ತಿಯಾದರೂ ದೇಯಿಬೈದೆತಿ ಕಥೆಯನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಸಿನಿಮಾವನ್ನು ಮೊಟಕುಗೊಳಿಸಲು ಸಾಧ್ಯವಾಗಲಿಲ್ಲ.

ಬಹುತೇಕ ಜನರಿಗೆ ದೇಯಿಬೈದೆತಿ ಎಂದರೆ ಕೋಟಿ ಚೆನ್ನಯ್ಯರ ತಾಯಿ, ಬಲ್ಲಾಳರ ಕಾಲಿಗೆ ಆದ ಗಾಯಕ್ಕೆ ಔಷಧಿ ಕೊಟ್ಟು ಗುಣಪಡಿಸಿದ್ದಾಳೆ ಎಂಬುದು ಮಾತ್ರ ಗೊತ್ತಿತ್ತು. ಈ ಸಿನಿಮಾದಲ್ಲಿ ಆಕೆಯ ಹುಟ್ಟು, ಬದುಕು, ಸಾವು ಎಲ್ಲವನ್ನು ತೋರಿಸಿದ್ದೇವೆ. ಸಿನಿಮಾವನ್ನು ಇನ್ನು ಮೂರು ತಿಂಗಳಲ್ಲಿ ಕನ್ನಡದಲ್ಲೂ ತೆರೆ ಕಾಣಿಸುತ್ತಿದ್ದೇವೆ ಎಂದು ಸೂರ್ಯೋದಯ ಅವರು ಹೇಳಿದ್ದಾರೆ.

ಸಿನೆಮಾದ ಕಥೆ ಐನೂರು ವರ್ಷಗಳ ಹಿಂದೆ ನಡೆದಿದ್ದು, ಹೀಗಾಗಿ ಹಲವು ಸಂಶೋಧಕರೊಂದಿಗೆ ಚರ್ಚಿಸಿ ಅಧ್ಯಯನ ಮಾಡಿ ಸಿನೆಮಾವನ್ನು ತಯಾರಿಸಲಾಗಿದೆ. ಈ ಚಿತ್ರಕ್ಕಾಗಿ ಐನೂರು ವರ್ಷಗಳ ಹಿಂದಿನ ಕಾಲಕ್ಕೆ ಸರಿ ಹೊಂದುವ ಭವ್ಯ ಮನೆಗಳ ಸೆಟ್‌ಗಳ ನಿರ್ಮಿಸಿ ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ ಆಚಾರ, ವಿಚಾರ, ಉಡುಗೆ,ತೊಡುಗೆಗಳ ಓರಣಗಳನ್ನು ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳಲ್ಲೂ ಈ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಸಿನಿಮಾಕ್ಕೆ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ನಟ ಸೂರ್ಯೋದಯ ಪೆರಂಪಳ್ಳಿಯವರು ತಿಳಿಸಿದ್ದಾರೆ.

ಈ ವೇಳೆ ಚಿತ್ರದ ಸಹ ನಿರ್ಮಾಪಕ ಲಕ್ಷಣ ಸಾಲಿಯಾನ್, ಪ್ರಶಸ್ತಿ ವಿಜೇತ ನಟ ಎಂ.ಕೆ. ಮಠ, ನಟಿ ಸೌಜನ್ಯ ಹೆಗ್ಡೆ, ಮತ್ತೋರ್ವ ನಟಿ ಕಾಜಲ್ (ಮುಂಬಾಯಿ), ಯುವವಾಹಿನಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಜಯಂತ್ ನಡುಬೈಲ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಪಿತಂಬರ್ ಹೆರಾಜೆ, ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದ ಕುಮಾರ್, ಪ್ರಕಾಶ್ ಪಾಂಡೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

__ಸತೀಶ್ ಕಾಪಿಕಾಡ್ (Mob: 9035089084)

Comments are closed.