ಕರಾವಳಿ

ವಿಶ್ವದರ್ಜೆಯ ವರ್ಣಚಿತ್ರಗಳಿರುವ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್‌ನ ನವೀಕೃತ ಚಾಪೆಲ್‌ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.17: ನಗರದ ಸಂತ ಅಲೋಶಿಯಸ್ ಕಾಲೇಜ್ ಚಾಪೆಲ್‌ನ ವಿಶ್ವದರ್ಜೆಯ ವರ್ಣಚಿತ್ರಗಳು ಎರಡನೇ ಬಾರಿಗೆ ನವೀಕರಣಗೊಂಡಿದ್ದು, ಶನಿವಾರ ಲೋಕರ್ಪಣೆಗೊಂಡಿದೆ.

ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂದನೀಯ ರೆ.ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಚಾಪೆಲ್‌ಗೆ ಆಶೀರ್ವಚನ ನೀಡಿದರು. ಚಾಪಲ್‌ನ್ನು ನವದಿಲ್ಲಿಯ ಕಲಾ ಮತ್ತು ವಸ್ತು ಪರಂಪರೆ ವಿಭಾಗದ ಇನ್‌ಟ್ಯಾಚ್-ಐಸಿಐ ಕನ್ಸರ್ವೇಶನ್ ಸಂಸ್ಥೆಗಳ ಪ್ರಧಾನ ನಿರ್ದೇಶಕ ನಿಲಭ್ ಸಿನ್ಹಾ ಸ್ಮಾರಕ ಫಲಕಗಳನ್ನು ಅನಾವರಣಗೊಳಿಸಿದರು.

ಖ್ಯಾತ ವರ್ಣಚಿತ್ರಕಾರ ಅಂತೋನಿಯೋ ಮೊಸ್ಕೇನಿ ಅವರ ಹಿರಿಯ ಸಹೋದರ ಸಂಬಂಧಿ ಇಟಲಿಯ ಮಿಲನ್‌ನ ಸಿಲ್ವನಾ ರಿಝ್ವಿ ಮಾತನಾಡಿ, ಚಾಪೆಲ್‌ನಲ್ಲಿ ವರ್ಣಚಿತ್ರಗಳಲ್ಲಿ ಜೀವಂತಿಕೆ ಇದೆ. ವರ್ಣಚಿತ್ರದ ಬಾರ್ಡರ್‌ಗಳಲ್ಲಿ ಚಿತ್ರಿಸಿರುವ ಹೂಗಳು ವರ್ಣಚಿತ್ರದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಎಲ್ಲ ವರ್ಣಚಿತ್ರಗಳು ಮನಮೋಹಕವಾಗಿದ್ದು, ಕಲೆಯೇ ಸಂಸ್ಕೃತಿಯ ಜೀವಾಳವಾಗಿದೆ ಎಂದು ಹೇಳಿದರು.

ವಸ್ತು ಸಂಗ್ರಹಾಲಯ ಉದ್ಘಾಟನೆ: ಸಂತ ಅಲೋಶಿಯಸ್ ಕಾಲೇಜಿನ ನವೀಕರಿಸಲಾದ ಮತ್ತು ಸ್ಥಳಾಂತರಗೊಂಡ ವಸ್ತು ಸಂಗ್ರಹಾಲಯವನ್ನು ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂದನೀಯ ರೆ.ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಉದ್ಘಾಟಿಸಿದರು.

ಸಂತ ಅಲೋಶಿಯಸ್ ಕಾಲೇಜಿನ ರೆ.ಡಾ.ಡೈನಿಶಿಯಸ್ ವಾಝ್ ಮಾತನಾಡಿ, ಇಟಲಿಯ ಜೆಸ್ವಿಟ್ ಫಾ.ಚಿಯಾಪಿ 1913ರಲ್ಲಿ ಈ ಮ್ಯೂಸಿಯಂನ್ನು ಆರಂಭಿಸಿದ್ದರು. ಖನಿಜಗಳು, ಗಿಡಮೂಲಿಕೆಗಳು ಮತ್ತು ರೋಮನ್ ನಾಣ್ಯಗಳ ಸಂಗ್ರಹ ಮತ್ತು ಕೊಲೆಜಿಒ ವಿಏಟ ಇಟಲಿಯ ಉಡುಗೊರೆಗಳಿಂದ ಮ್ಯೂಸಿಯಂ ಆರಂಭಗೊಂಡಿತ್ತು. ಇದೀಗ ಮ್ಯೂಸಿಯಂ ಕೆಂಪುಕಟ್ಟಡದಿಂದ ಚಾಪೆಲ್‌ನ ಸಮೀಪ ಇರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಇದರಿಂದ ಚಾಪೆಲ್‌ಗೆ ಭೇಟಿ ನೀಡುವ ಸಂದರ್ಶಕರಿಗೆ ಅನುಕೂಲವಾಗಲಿದೆ ಎಂದರು.

ಸಮಾರಂಭದಲ್ಲಿ ನವದಿಲ್ಲಿಯ ಕಲಾ ಮತ್ತು ವಸ್ತು ಪರಂಪರೆ ವಿಭಾಗದ ಇನ್‌ಟ್ಯಾಚ್-ಐಸಿಐ ಕನ್ಸರ್ವೇಶನ್ ಸಂಸ್ಥೆಗಳ ಪ್ರಧಾನ ನಿರ್ದೇಶಕ ನಿಲಭ್ ಸಿನ್ಹಾ ಹಾಗೂ ಖ್ಯಾತ ವರ್ಣಚಿತ್ರಕಾರ ಅಂತೋನಿಯೋ ಮೊಸ್ಕೇನಿ ಅವರ ಹಿರಿಯ ಸಹೋದರ ಸಂಬಂಧಿ ಇಟಲಿಯ ಮಿಲನ್‌ನ ಸಿಲ್ವನಾ ರಿಝ್ವಿ ಅವರನ್ನು ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂದನೀಯ ರೆ.ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಶಾಲು ಹೊದಿಸಿ ಸನ್ಮಾನಿಸಿದರು.

ಸಮಾರಂಭದಲ್ಲಿ ಫಾ.ಪ್ರಶಾಂತ್ ಮಾಡ್ತಾ, ಫಾ.ಲಿಯೊ ಡಿಸೋಜ, ಫಾ.ಪ್ರದೀಪ್ ಆಯಂಟನಿ, ಮೈಕಲ್ ಡಿಸೋಜ, ಗಿಲ್ಬರ್ಟ್ ಸಿಕ್ವೇರಾ, ಸಲ್ಡಾನ, ಜೇಮ್ಸ್, ಗೋಪಾಲಗೌಡ, ಕವಿತಾ ಮತ್ತಿತರರು ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಕಾಲೇಜಿನ ರೆ.ಡಾ.ಡೈನಿಶಿಯಸ್ ವಾಝ್ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಕುಡುಮಿ ನೃತ್ಯವನ್ನು ಪ್ರದರ್ಶಿಸಲಾಯಿತು.

ವಸ್ತು ಸಂಗ್ರಹಾಲಯದಲ್ಲಿನ ವಿಶೇಷತೆ..

ಐದು ಅಡ್ಡ ಸಭಾಂಗಣದಿಂದ ಈ ವಸ್ತು ಸಂಗ್ರಹಾಲಯದಲ್ಲಿ ಒಂದು ಮುಖ್ಯ ಸಭಾಂಗಣವಿದೆ. ಈ ಸಭಾಂಗಣ ನವಶಿಲಾಯುಗದ ಕಲ್ಲಿನಿಂದ ಮಾಡಿದ ಕೊಡಲಿ, ಬರ್ಲಿನ್ ಗೋಡೆಯ ತುಣುಕುಗಳು, ಹೋಲಿ ಲ್ಯಾಂಡಿನಿಂದ ತಂದ ವಸ್ತುಗಳು, ಉತ್ತರ ಧ್ರುವದ ಅತ್ಯಂತ ಶೀತಪ್ರದೇಶದಿಂದ ತಂದ ಬಂಡೆಯ ಚೂರು, ಮೊದಲಾದ ವಸ್ತುಗಳಿವೆ.

ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸಲಾದ ಅನೇಕ ವಸ್ತುಗಳು, ದೀಪಗಳ ಸಂಗ್ರಹ, ಆಫ್ರಿಕದ ಕಲಾಕೃತಿಗಳು, ಪುರಾತನ ಪಿಂಗಾಣಿ ಹೂದಾನಿಗಳು, ಹಳೆ ಕಾಲದ ಸರಳ ತಂತ್ರಜ್ಞಾನದ ಕ್ಯಾಮೆರಾದಿಂದ ಹಿಡಿದು ಆಧುನಿಕ ವಿದ್ಯುನ್ಮಾನ ಯುಗದ ಹೊಸ ಕ್ಯಾಮೆರಾಗಳ ಸಂಗ್ರಹವಿದೆ. ಸುಮಾರು 2,000ದಷ್ಟು ಖನಿಜಗಳ ಮಾದರಿಗಳು ಮತ್ತು ಪಳೆಯುಳಿಕೆಗಳಿವೆ. ಜೊತೆಗೆ ಅಂಚೆಚೀಟಿಗಳು ಮತ್ತು ವಿಭಿನ್ನ ರಾಷ್ಟ್ರಗಳ ಕರೆನ್ಸಿ ನೋಟುಗಳಿವೆ.

ಮಂಗಳೂರಿನ ವಿದ್ಯುತ್ ಸರಬರಾಜು ಆಗುವ ಮೊದಲು ಕಂಪ್ಯೂಟರ್ ಇದೆ. ಸಾಕಷ್ಟು ಸಂಖ್ಯೆಯಲ್ಲಿ ರೇಡಿಯೊ ಸೆಟ್‌ಗಳಿವೆ. ಗ್ರಾಮಫೋನ್ ಮತ್ತು ಟಿವಿಗಳಿವೆ. ಅಡ್ಡಗೋಡೆಗಳಲ್ಲಿ ಅಸ್ಥಿಪಂಜರಗಳನ್ನು ನೇತಾಡಿಸಲಾಗಿದೆ. ಕಲ್ಲಿಕೋಟೆಯ ಹತ್ತಿರದ ಬಿಲಯಪಟಮ್‌ನಿಂದ ತಂದ ತಿಮಿಂಗಿಲವೊಂದರ ಅಸ್ಥಿಪಂಜರವೂ ಇಲ್ಲಿದೆ. ಮುಖ್ಯ ಸಭಾಂಗಣದ ಇನ್ನೊಂದು ಬದಿಯಲ್ಲಿ ಮಂಗಳೂರಿಗೆ ಬಂದ ಮೊದಲ ಕಾರ್ ಇದೆ. ಹಿಂದಿನ ಕಾಲದಲ್ಲಿ ಗಾಡಿಗಳು ಮತ್ತು ಕುದುರೆಯ ಮೇಲೆ ಕುಳಿತು ಪ್ರಯಾಣ ಮಾಡಲಾಗುತ್ತಿತ್ತು. ಹಾಗೆಯೆ ಕುದುರೆಗಳನ್ನು ಹೈಸ್ಕೂಲ್ ಕಟ್ಟಡದ ಮುಂದೆ ಕಟ್ಟಲಾಗುತ್ತಿತ್ತು. ಅಂಥ ಒಂದು ಕಲ್ಲು ಈ ಮ್ಯೂಸಿಯಂನಲ್ಲಿದೆ.

ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿಗಳು, ತಾಳೆಗರಿಯಲ್ಲಿನ ಹಸ್ತಪ್ರತಿಗಳು, ರೋಮನ್ ಕ್ಯಾಥೋಲಿಕ್ ಪ್ರಾರ್ಥನೆ ಮತ್ತು ವ್ರತಪುಸ್ತಕಗಳು, ಕ್ರೈಸ್ತ ವಿಧಿ ಆಚರಣೆಗಳ ಸಂದರ್ಭಗಳಲ್ಲಿ ತೊಡಲಾಗುವ ಉಡುಪುಗಳು, ಹಿಬ್ರೂ ಶಾಸನಗಳ ಕರಡುಪ್ರತಿ ಹಾಗೆಯೇ ಹವಾನಿಯಂತ್ರಿತ ವಾತಾವರಣದಲ್ಲಿ ಇಡಬೇಕಾದ ಇನ್ನಿತರ ಅನೇಕ ವಸ್ತುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.

Comments are closed.