ಕರಾವಳಿ

ಕಾಶ್ಮೀರದಲ್ಲಿನ ಪ್ರತ್ಯೇಕವಾದಿಗಳಿಗೆ ಸೂಕ್ತ ಉತ್ತರ ನೀಡುವ ಮೂಲಕ ಪ್ರಧಾನಿ ಮೋದಿಯವರಿಂದ ಮತ್ತೊಂದು ಇತಿಹಾಸ ಸೃಷ್ಟಿಯಾಗಬೇಕಿದೆ : ಖ್ಯಾತ ನಟ ಅನಂತ್‌ನಾಗ್

Pinterest LinkedIn Tumblr

ಮಂಗಳೂರು, ಫೆಬ್ರವರಿ.16: ಜಮ್ಮು -ಕಾಶ್ಮೀರ ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯನ್ನು ಸ್ಯಾಂಡಲ್‌ವುಡ್‌ನ ಖ್ಯಾತ ನಟ ಅನಂತ್‌ನಾಗ್ ತೀವ್ರವಾಗಿ ಖಂಡಿಸಿದ್ದಾರೆ.

ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗುತ್ತಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22 ಕನ್ನಡ ಚಲನಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ” ಇಂಗ್ಲಿಷ್ ” ಹೆಸರಿನ ತುಳು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ಅವರು ಶನಿವಾರ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸುದ್ಧಿಗಾರ ಜೊತೆ ಮಾತನಾಡಿದರು.

ಜಮ್ಮು -ಕಾಶ್ಮೀರ ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ಆತ್ಮಹತ್ಯಾ ದಾಳಿ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಆತ್ಮಹತ್ಯಾ ದಾಳಿ ಭೀಕರ ಘಟನೆಯಾಗಿದ್ದು, ಇದನ್ನು ನಾನೋರ್ವ ಭಾರತೀಯ ನಾಗರೀಕನಾಗಿ ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆ ಜನರ ಮನಸ್ಸನ್ನು ಅಲ್ಲೋಲ ಕಲ್ಲೋಲವನ್ನಾಗಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದಿಟ್ಟ ಪ್ರತಿಕ್ರಿಯೆಯನ್ನು ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ಈ ರೀತಿ ದೇಶದ ಸಾರ್ವಭೌಮತೆಗೆ ಸವಾಲೆಸಗುವ ಮತ್ತು ಜಗತ್ತಿನಾದ್ಯಂತ ದೇಶದ ಅಪಹಾಸ್ಯವನ್ನು ಮಾಡುವ ಉಗ್ರರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಹೊಡದುರುಳಿಸುವುದು ಅವಶ್ಯಕವಿದೆ. ಪ್ರಧಾನಿ ಮೋದಿ ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರ ನಿರ್ಮಿತಿಯ ಕೇಂದ್ರವಾದ ಪಾಕ್ ವಿರುದ್ಧ ಕೂಡಲೇ ಕ್ರಮವನ್ನು ಕೈಗೊಂಡು ಕಾಶ್ಮೀರ ಕೈಬಿಟ್ಟರು ಪರವಾಗಿಲ್ಲ, ಸಿಂದ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕಾಶ್ಮೀರದಲ್ಲಿಯ ಪ್ರತ್ಯೇಕವಾದಿಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

1947ರಲ್ಲಿ ಧರ್ಮದ ಆಧಾರದಲ್ಲಿ ಭಾರತ ವಿಭಜನೆಯಾದ ಬಳಿಕವೂ ಇಂತಹ ಘಟನೆಗಳು ಮುಂದುವರಿದಿದೆ. 1955ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು, 1971ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದುಕೊಂಡು ಅದಕ್ಕೆ ತಕ್ಕ ಉತ್ತರ ನೀಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿವಾದಿತ ಪ್ರದೇಶವನ್ನು ಸಂಪೂರ್ಣವಾಗಿ ಸೇನೆಯ ಸುಪರ್ದಿಗೆ ವಹಿಸಿಕೊಂಡು ಅಲ್ಲಿ ಸೇನೆಯವರ ಮೇಲೆ ಕಲ್ಲು ತೂರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಯಾಗಬೇಕಿದೆ. ಮಾತ್ರವಲ್ಲದೇ ಪ್ರಧಾನಿ ಮೋದಿಯವರು ಇಂಥಹ ಒಂದು ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಯೋಧರನ್ನು ಅನ್ಯಾಯವಾಗಿ ಸಾಯಲು ಬಿಡುವ ಬದಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅತೀ ಅಗತ್ಯವಿದೆ ಎಂದು ಅನಂತ್‌ನಾಗ್ ಹೇಳಿದರು.

ಈ ವೇಳೆ `ಇಂಗ್ಲಿಷ್’ ತುಳು ಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್, ಶ್ರೀಮತಿ ಶರ್ಮಿಳಾ ಶೇರಿಗಾರ್, ನಿರ್ದೇಶಕ ಕೆ. ಸೂರಜ್ ಶೆಟ್ಟಿ, ಗಾಯತ್ರಿ ಅನಂತ್‌ನಾಗ್ ಉಪಸ್ಥಿತರಿದ್ದರು.

__Sathish Kapikad

Comments are closed.