ಗಲ್ಫ್

ದುಬೈಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಅನುಕ್ತ’ ಸಿನೆಮಾ

Pinterest LinkedIn Tumblr

ಕರ್ನಾಟಕದಲ್ಲಿ ಬಿಡುಗಡೆಗೊಂಡು ಮೊದಲ ವಾರದಲ್ಲೇ 1ಕೋಟಿಗೂ ಹೆಚ್ಚಿನ ಬಾಕ್ಸ್ ಆಫೀಸ್ ಕಲೆಕ್ಷನ್ ಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಸೂಪರ್ ಹಿಟ್ ಕನ್ನಡ ಸಿನಿಮಾ “ಅನುಕ್ತ” ಪ್ರೀಮಿಯರ್ ಷೋ ರಾಕ್ಸಿ ಸಿನಿಮಾದಲ್ಲಿ ಅದ್ಧೂರಿಯಾಗಿ ನಡೆಯಿತು. ಅನುಕ್ತ ಚಿತ್ರತಂಡದ ಉಪಸ್ಥಿತಿಯಲ್ಲಿ ದುಬೈ ಸಿಟಿವಾಕ್ ನಲ್ಲಿರುವ ರಾಕ್ಸಿ ಸಿನಿಮಾದಲ್ಲಿ ನಡೆದ ಪ್ರೀಮಿಯರ್ ಷೋ ಪ್ರಾರಂಭಕ್ಕೂ ಮುನ್ನ ‘ಅನುಕ್ತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖುಷಿಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿತು. ಈ ಮೂಲಕ ರಾಕ್ಸಿ ಸಿನಿಮಾದಲ್ಲಿ ಬಿಡುಗಡೆಗೊಂಡ ದಕ್ಷಿಣ ಭಾರತದ ಪ್ರಥಮ ಸಿನಿಮಾ ಎಂಬ ಇತಿಹಾಸ ನಿರ್ಮಿಸಿತು.

ಯುಎಈಯಲ್ಲಿರುವ ಕನ್ನಡ ಸಂಘಗಳು ಹಾಗೂ ಇತರ ಹಲವಾರು ಸಂಘ ಸಂಸ್ಥೆಗಳ, ಅನಿವಾಸಿ ಉದ್ಯಮಿಗಳಷ್ಟೇ ಅಲ್ಲದೆ ಅರಬ್ಬಿಗಳೂ ಚಿತ್ರ ವೀಕ್ಷಿಸಲು ಬಂದಿದ್ದು, ಥಿಯೇಟರ್ ನಲ್ಲಿ ನೆರೆದಿದ್ದ ಎಲ್ಲಾ ಸಿನಿಪ್ರಿಯರನ್ನು ಓವರ್ಸೀಸ್ ಕನ್ನಡ ಮೂವೀಸ್ ನ ದೀಪಕ್ ಸೋಮಶೇಖರ್ ಸ್ವಾಗತಿಸಿದರು, ನಿರ್ಮಾಪಕರಾದ ದುಬೈ ಉದ್ಯಮಿ ಹರೀಶ್ ಬಂಗೇರ ಮಾತನಾಡಿ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಲೇ ಕನ್ನಡ ಚಿತ್ರ ನಿರ್ಮಿಸಿದ್ದು, ಕರ್ನಾಟಕದಲ್ಲಿ ಜನರು ಸ್ವೀಕರಿಸಿ ಆಶಿರ್ವದಿಸಿದ್ದಾರೆ, ಯುಎಈಯ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.

  

ಚಿತ್ರವೀಕ್ಷಿಸಿ ಹೊರಬಂದ ಪ್ರತಿಯೊಬ್ಬರೂ ಅತ್ಯುತ್ತಮ ಚಿತ್ರವೆಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಥಮ ಬಾರಿಗೆ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಅಶ್ವಥ್ ಸಾಮ್ಯೂಲ್ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟರು. ಉತ್ತಮ ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಈ ಚಿತ್ರ ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲಿಸುವಷ್ಟು ಕುತೂಹಲಕಾರಿಯಾಗಿದೆ, ಹಾಡುಗಳು, ಸಂಗೀತ, ಹಿನ್ನಲೆ ಸಂಗೀತ ಎಲ್ಲವೂ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಣೆ ಮಾಡಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಫೆಬ್ರವರಿ 14ರಂದು ಬಿಡುಗಡೆ ಕಂಡ ಈ ಸೂಪರ್ ಹಿಟ್ ಚಿತ್ರ ಇದೀಗ ನಿಮ್ಮ ಸಮೀಪದ ಥಿಯೇಟರ್ ಗಳಲ್ಲಿ ಲಭ್ಯವಿದ್ದು, ಯುಎಈಯಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು, ಅಮೇರಿಕಾ ಮತ್ತು ಕೆನಡಾದಲ್ಲೂ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

Comments are closed.