ಕರಾವಳಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪವರ್ ಸ್ಟಾರ್ ಭೇಟಿ: ದೇಶದ ಯೋಧರ ಬಗ್ಗೆ ಪುನೀತ್ ಹೇಳಿದ್ದೇನು?

Pinterest LinkedIn Tumblr

ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಮಿಸಿ, ದೇವರ ದರ್ಶನ ಮಾಡಿದರು. ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು. ಮತ್ತು ಚಿನ್ನದ ತಗಡನ್ನು ಮಾಡಲು ರಾಜಕೋಟ್ ನಿಂದ ತರಿಸಿದ ನೂತನ ರೋಲಿಂಗ್ ಮೆಷೀನನ್ನು ಸ್ವಿಚ್ ಹಾಕುವುದರೊಂದಿಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಯೊಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆಯ ದಿನವಾಗಿದೆ. ನಮಗೋಸ್ಕರ ಗಡಿಭಾಗದಲ್ಲಿ ಯೋಧರು ಕಷ್ಟಪಡುತ್ತಾರೆ. ಯೋಧರ ಬಗ್ಗೆ ನಾನು ಏನು ಮಾತಾಡಿದ್ರೂ ಕಮ್ಮೀಯಾಗುತ್ತದೆ. ನಮ್ಮ ಮಂಡ್ಯದ ಹೆಮ್ಮೆಯ ಯೋಧನನ್ನು ಕಳೆದುಕೊಂಡಿದ್ದೇವೆ. ಒಂದು ಕಡೆ ದುಖವಾಗುತ್ತಿದ್ದು ನಮಗೇನೂ ಮಾಡೋಕೆ ಆಗ್ತಿಲ್ಲ ಅನ್ನೋ ನೋವೂ ಆಗುತ್ತಿದೆ. ಸರ್ಕಾರ ಈ ಹೊತ್ತಲ್ಲಿ ಏನ್ಮಾಡ್ತಿದೆ ಅನ್ನೋದು ಮುಖ್ಯವಲ್ಲ. ನಾವು ಈ ದೇಶಕ್ಕೆ ಏನು ಮಾಡಿದೇವೆ ಅನ್ನೋದು ಮುಖ್ಯ. ಎಲ್ಲರೂ ಸೇರಿ ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂದರು.

ಅಪ್ಪಾಜಿ ಜೊತೆ ಹಲವು ಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೆ. ಆ ದಿನಗಳು ಯಾವತ್ತಿಗೂ ಮರೆಯೋಕಾಗಲ್ಲ ಎಂದು ತಂದೆ ಡಾ. ರಾಜಕುಮಾರ್ ಜೊತೆ ಕೃಷ್ಣಮಠಕ್ಕೆ ಬೇಟಿ ನೀಡಿದ ಹಳೆಯ ದಿನಗಳನ್ನು ನೆನೆದ ಪುನೀತ್ ರಾಜಕುಮಾರ್ ‘ನಟಸಾರ್ವಭೌಮ’ ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಂಬೈಯ ಉದ್ಯಮಿ ಆದರ್ಶ ಶೆಟ್ಟಿ, ನಟರ ಆಪ್ತ ಕಾರ್ಯದರ್ಶಿ ನೀಲಕಂಠ ವೀರಾಸ್ವಾಮಿ, ಪರ್ಯಾಯ ಮಠದ ಮ್ಯಾನೇಜರ್ ವೆಂಕಟರಮಣ ಆಚಾರ್ಯ, ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್, ಸುರ್ವಣ ಗೋಪುರದ ಕೆಲಸದ ಉಸ್ತುವಾರಿಗಳಾದ ಸಚ್ಚಿದಾನಂದ ರಾವ್, ವೆಂಕಟೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

Comments are closed.