ಕರಾವಳಿ

ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮ ಹುಟ್ಟೂರಿನ ಮಣ್ಣಿನಲ್ಲಿ ಲೀನ

Pinterest LinkedIn Tumblr

ಮಂಗಳೂರು, ಫೆಬ್ರವರಿ.03: ಇತ್ತೀಚಿಗೆ ವಿಧಿವಶರಾದ ಕೇಂದ್ರದ ಮಾಜಿ ರಕ್ಷಣಾ ಸಚಿವ, ದಿ.ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮವನ್ನು ಅವರ ಹುಟ್ಟೂರಿನಲ್ಲಿ ಮಣ್ಣಿನಲ್ಲಿ ಲೀನಗೊಳಿಸುವ ಕಾರ್ಯ ಶನಿವಾರ ನಡೆಯಿತು.

ಆರಂಭದಲ್ಲಿ ಜಾರ್ಜ್ ಫೆರ್ನಾಂಡೀಸ್ ಅವರ ಸಹೋದರ ಮೈಕಲ್ ಫೆರ್ನಾಂಡೀಸ್, ಸಹೋದರಿ ಲಿಯನೊಲ್ ಮೊರಾಸ್ ಹಾಗೂ ಮುಂಬೈಯ ಕಾರ್ಮಿಕ ನಾಯಕ ಫೆಲಿಕ್ಸ್ ಡಿಸೋಜ ಅವರು ಚಿತಾ ಭಸ್ಮದ ಕುಂಡವನ್ನು ನಗರದ ಬಿಜೈ ಚರ್ಚಿನ ಪ್ರಧಾನ ಧರ್ಮಗುರು ಫಾ. ವಿಲನ್ಸ್ ವೈಟಸ್ ಡಿ ಸೋಜ ಅವರಿಗೆ ಹಸ್ತಾಂತರ ಮಾಡಿದರು. ಬಳಿಕ ಅವರು ಚರ್ಚಿನ ಪ್ರಾರ್ಥನಾ ವೇದಿಕೆ ಬಳಿಯಲ್ಲಿ ಇಟ್ಟು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.ತದನಂತರ ಬಿಜೈನ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ವಠಾರದ ದಫನ ಸ್ಥಳದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಿತಾಸ್ಮವನ್ನು ಸಮಾಧಿ ಮಾಡಲಾಯಿತು.

ಚರ್ಚಿನಲ್ಲಿ ಪ್ರಾರ್ಥನಾ ವಿಧಿ ಬಳಿಕ ದಫನ ಭೂಮಿಗೆ ಚಿತಾ ಭಸ್ಮವನ್ನು ಮೆರವಣಿಗೆಯ ಮೂಲಕ ತರಲಾಯಿತು. ಈ ಬಳಿಕ ಬಿಜೈ ಚರ್ಚಿನ ಪ್ರಧಾನ ಧರ್ಮಗುರು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಫೆರ್ನಾಂಡೀಸ್ ಅವರ ಚಿತಾ ಭಸ್ಮದ ಪೆಟ್ಟಿಗೆಯನ್ನು ಮರದ ಪೆಟ್ಟಿಗೆಯೊಳಗೆ ಇಟ್ಟು ನಂತರ ಅದನ್ನು ದಫನ ಮಾಡಲಾಯಿತು.

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ಫಾ.ರಾಬರ್ಟ್ ಡಿಸೋಜ ಪ್ರವಚನ ನೀಡಿ, ಅವರ ರಾಜಕೀಯ ವ್ಯಕ್ತಿತ್ವ, ಸಾಧನೆಯನ್ನು ಸ್ಮರಿಸಿದರು. ದೇರೆಬೈಲ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಆಸ್ಟಿನ್ ಪೆರಿಸ್, ಬಿಜೈಯ ಸಹಾಯಕ ಧರ್ಮಗುರು ಫಾ.ವಿನೋದ್ ಲೋಬೋ, ನಿವೃತ್ತ ಧರ್ಮಗುರು ಫಾ.ಸಂತೋಷ್ ಕಾಮತ್ ಜೆ.ಸ, ಫಾದರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ಭಾರತೀಯ ಕಥೋಲಿಕ್ ಯುವ ಸಂಚಾಲನದ ನಿರ್ದೇಶಕ ಫಾ.ರೊನಾಲ್ಡ್ ಪ್ರಕಾಶ್ ಡಿಸೋಜ, ಫಾ. ಸಿಪ್ರಿಯನ್ ಕಾಪುಚಿನ್, ಅಸ್ಸಿಸಿ ಪ್ರೆಸ್‌ನ ನಿರ್ದೇಶಕ ಫಾ. ಮ್ಯಾಕ್ಸಿಂ ಕಾಪುಚಿನ್ ಪ್ರಾರ್ಥನಾವಿಧಿಯಲ್ಲಿ ಭಾಗವಹಿಸಿದ್ದರು.

ಮಂಗಳೂರಿನ ಜನತೆಯ ಪರವಾಗಿ ಮನಪಾ ಮೇಯರ್ ಭಾಸ್ಕರ ಕೆ ಮಾತನಾಡಿ, ಜಾರ್ಜ್ ಅವರು ಮಾಡಿದ ಕೆಲಸಗಳು ಇಂದಿಗೂ ಶ್ವಾಶತವಾಗಿ ಉಳಿದೆ ಅವರು ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ನಾನಾ ರಾಜಕೀಯ , ಸಾಮಾಜಿಕ ಗಣ್ಯರು, ಅವರ ಅಭಿಮಾನಿಗಳು ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದ್ದರು.

Comments are closed.