ಕರಾವಳಿ

ಕುಂದಾಪುರ ಶಾಸಕ ಹಾಲಾಡಿ ಶೆಟ್ಟಿಯವರಿಗೂ ಬೆದರಿಕೆ ಹಾಕಿದ್ದ ಡಾನ್ ರವಿ ಪೂಜಾರಿ!

Pinterest LinkedIn Tumblr

ಬೆಂಗಳೂರು: ಅತ್ತ ಕಡೆಯಿಂದ ಕರೆಯೊಂದು ಬರುತ್ತೆ, ಅದರಲ್ಲಿ ಮಾತನಾಡುವ ವ್ಯಕ್ತಿ ತನ್ನನ್ನು ರವಿ ಪೂಜಾರಿ ಎಂದು ಪರಿಚಯಿಸಿಕೊಳ್ಳುತ್ತಾನೆ. ಕರೆ ಮಾಡಿದವರ ಬಗ್ಗೆ ತಾನೇ ಎಲ್ಲವನ್ನೂ ಮಾಡುತ್ತಾನೆ. ನಯವಾಗಿಯೇ ನನಗಿಷ್ಟು ಕೊಡಿ ಎಂದು ನೇರ ವ್ಯವಹಾರಕ್ಕೆ ಇಳಿಯುತ್ತಾನೆ. ಇಷ್ಟಕ್ಕೂ ಆ ಕರೆ ಮಾಡುವ ವ್ಯಕ್ತಿ ಬೇರ್ಯಾರು ಅಲ್ಲ. ರವಿ ಪೂಜಾರಿ. ಮೋಸ್ಟ್ ವಾಂಟೆಂಡ್ ಅಂಡರ್ ವರ್ಲ್ಡ್ ಡಾನ್, ಭೂಗತ ಪಾತಕಿ, ಡಾನ್ ಎಂದೇ ಕುಖ್ಯಾತಿಯುಳ್ಳ ರವಿ ಪೂಜಾರಿ.

(ಡಾನ್ ರವಿ ಪೂಜಾರಿ)

ಮೂಲತಃ ಉಡುಪಿಯ ಮಲ್ಪೆಯ ಕಡೇಕಾರ್ ಊರಿನ ರವಿ ಪೂಜಾರಿ ಬಹುತೇಕ ಬೆಳೆದಿದ್ದು ಮುಂಬೈನಲ್ಲಿ. ಅಲ್ಲಿಯೇ ಭೂಗತ ಲೋಕಕ್ಕೆ ಮೊದಲ ಹೆಜ್ಜೆಯಿಟ್ಟಿದ್ದನಂತೆ. ಸ್ನೇಹಿತರ ಜೊತೆಗೂಡಿ ರೌಡಿಸಂ ಸೇರಿದ ರವಿ ಪೂಜಾರಿ ನಂತರ ಸಾಧು ಶೆಟ್ಟಿ ಮೂಲಕ ಛೋಟಾ ರಾಜನ್ ಗ್ಯಾಂಗ್ ಸೇರಿದ್ದ. ಛೋಟಾ ರಾಜನ್ ಜೊತೆ ಯಾವುದೋ ಕಾರಣಕ್ಕೆ ಮನಸ್ಥಾಪ ಮಾಡಿಕೊಂಡು ತನ್ನದೆ ಪ್ರತ್ಯೇಕವಾಗಿ ಗ್ಯಾಂಗ್ ಕಟ್ಟಿಕೊಂಡು ಬ್ಯಾಂಕಾಕ್, ದುಬೈ, ಆಸ್ಟ್ರೇಲಿಯಾ, ಆಪ್ರಿಕಾದಲ್ಲಿ ಭೂಗತನಾಗಿ ನೆಲೆಯೂರಿದ್ದ.

ಬರೋಬ್ಬರಿ 17-18 ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿ ಮೇಲೆ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಈತ ಆ್ಯಂಟೋನಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಆಫ್ರಿಕಾ ದೇಶಗಳಲ್ಲಿ ತಿರುಗುತ್ತಿದ್ದ ಎನ್ನಲಾಗುತ್ತಿದೆ. ಕೆಲವರು ಈತ ಮುಖಕ್ಕೆ ಫ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು ಓಡಾಡುತ್ತಾನೆಂಬುದನ್ನು ಹೇಳುತ್ತಾರೆ.

ಪೋನಿನಲ್ಲೇ ಟಾರ್ಗೇಟ್ ಮಾಡ್ತಿದ್ದ ರವಿಪೂಜಾರಿ..
ಅಜ್ನಾತ ಸ್ಥಳದಲ್ಲಿದ್ದುಕೊಂಡೇ ತಾನಿಟ್ಟ ಟಾರ್ಗೆಟ್ ವ್ಯಕ್ತಿಗಳಿಗೆ ಫೋನಾಯಿಸುತ್ತಿದ್ದ ರವಿ ಪೂಜಾರಿ ಅವರ ಭಯವನ್ನು ತನ್ನ ಲಾಭಕ್ಕೆ ಭಂಡಾವಾಳವನ್ನಾಗಿಸಿಕೊಳ್ಳುತ್ತಿದ್ದ. ರಾಜಕಾರಣಿಗಳು, ಉದ್ಯಮಿಗಳು, ಬಿಲ್ಡರ್, ಜ್ಯುವೆಲ್ಲರ್ಸ್, ಡಾಕ್ಟರ್ಸ್, ಸಿನೆಮಾ ಕಲಾವಿದರು, ಗಣಿ ಉದ್ಯಮಿಗಳು ಈತನ ಮುಖ್ಯ ಆಹಾರವಾಗಿದ್ದರು. ಯಾರಾದರೂ ಹಣವುಳ್ಳವರೆಂದು ಈತನಿಗೆ ತಿಳಿದರೆ ಸಾಕು ಭಾರತದಲ್ಲಿನ ತನ್ನ ಸಹಚರರ ಮೂಲಕ ಅವರ ನಂಬರ್ ಸಂಪಾದಿಸುತ್ತಿದ್ದ. ಅದಕ್ಕೆ ಕರೆ ಮಾಡಿ ನಯವಾಗಿ ಮಾತನಾಡಿ ನನಗಿಷ್ಟು ಹಣ ಕೊಡಿ ಎಂದು ದುಂಬಾಲು ಬೀಳುತ್ತಿದ್ದ. ವಿಓಐಪಿ, ಸ್ಕೈಪ್ ಸೇರಿದಂತೆ ಇತರೆ ಸಂಪರ್ಕ ಜಾಲದ ಮೂಲಕ ಕರೆ ಮಾಡುತ್ತಿದ್ದ ರವಿ ಪೂಜಾರಿ ಪತ್ತೆ ಅಸಾಧ್ಯವಾಗಿತ್ತು. ಆತ ತಾನು ಕರೆ ಮಾಡಿದ ಮೂಲ ಸ್ಥಳವನ್ನು ರಹಸ್ಯವಾಗಿಡುತ್ತಿದ್ದು ಫೆಸಿಪಿಕ್, ಆಫ್ರಿಕಾ, ಪಶ್ಚಿಮ ಯುರೋಪ್ ದೇಶ ಎಂದು ಕರೆ ಸ್ಥಾನ (ಲೊಕೇಶನ್) ಕಾಣುವಂತೆ ಮಾಡುತ್ತಿದ್ದ. ಜೀವ ಭಯದಿಂದ ಕೇಳಿದಷ್ಟು ಹಣವನ್ನು ಆತ ಹೇಳಿದಲ್ಲಿ ಮುಟ್ಟಿಸುತ್ತಿದ್ದರು. ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ ಮತ್ತು ಇತರೆಡೆ ಅನೇಕ ಮಂದಿ ಮುಗ್ದರನ್ನು ಕೊಂದಿದ್ದ.

ಕುಂದಾಪುರ ಶಾಸಕ ಹಾಲಾಡಿಗೂ ಬೆದರಿಕೆ!
ಈ ಹಿಂದೆ ಕರ್ನಾಟಕದ ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಡಿಕೆ ಸುರೇಶ್, ಶಿವಸೇನಾ ಸಂಸದರು ಸೇರಿದಂತೆ ಹಲವು ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದ. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಬೆದರಿಕೆ ಹಾಕಿ ಕೋಟ್ಯಾಂತರ ರೂ. ಬೇಡಿಕೆಯಿಟಿದ್ದ. ಅಂದಿನ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಈ ಬಗ್ಗೆ ತನಿಖೆ ನಡೆಸಿದ್ದು ಒಂದಷ್ಟು ದಿನ ಶಾಸಕರಿಗೆ ಭದ್ರತೆ ನೀಡಿದ್ದು ಇದು ಬಹಳಷ್ಟು ಸುದ್ದಿಯಾಗಿತ್ತು.

ಕೆಲ ವರ್ಷಗಳ ಹಿಂದಷ್ಟೇ ಕುಂದಾಪುರ ಮೂಲದ ದುಬೈ ಉದ್ಯಮಿಗೆ ಬೆದರಿಕೆಯೊಡ್ಡಿ ಅದೇ ಉದ್ಯಮಿ ಮೂಲಕ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಮೊರೆಕ್ಕೋದಲ್ಲಿ ಬಂಧಿಸಲಾಗಿತ್ತು. ಸದ್ಯ ಬನ್ನಂಜೆ ರಾಜಾ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಸದ್ಯ ಇನ್ನೋರ್ವ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಬಂಧನವಾಗಿದ್ದು ಆತನಿಂದ ನೊಂದವರು ಸಮಾಧಾನ ಪಟ್ಟುಕೊಂಡಿದ್ದಾರೆ.

 

Comments are closed.