ಕರಾವಳಿ

ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ರವಿ ಪೂಜಾರಿ ಕ್ರಿಮಿನಲ್ ಹಿಸ್ಟ್ರಿ : ಭೂಗತ ಲೋಕವೇ ಬೆಚ್ಚಿ ಬೀಳುವ ಘಾತಕ ಮಾಹಿತಿಗಳು

Pinterest LinkedIn Tumblr

ಪೊಲೀಸರಿಗೆ ಸುಳಿವು ನೀಡಿದ ನವರಾತ್ರಿ ಡ್ಯಾನ್ಸ್ ವಿಡೀಯೋ

ಮಂಗಳೂರು : ಪಶ್ಚಿಮ ಆಫ್ರಿಕಾದ ಸೆನೆಗಲ್‌ ರಾಜಧಾನಿ ಡಕಾರ್‌ನಲ್ಲಿ ಇತ್ತೀಚಿಗೆ ಬಂಧಿತನಾದ ಕರಾವಳಿ ಮೂಲದ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಭೂಗತ ಪಾತಕಿ ರವಿ ಪೂಜಾರಿಯ ಕ್ರಿಮಿನಲ್ ( ಇತಿಹಾಸ ) ಹಿಸ್ಟ್ರಿಯನ್ನು ಕೆದಕುತ್ತಾ ಹೋದರೆ ಭೂಗತ ಜಗತನ್ನೇ ತಲ್ಲಣಗೊಳಿಸುವಂತಹ ಘಾತಕ ಮಾಹಿತಿಗಳು ಸ್ಫೋಟಗೊಳ್ಳುತ್ತದೆ.

ಪಶ್ಚಿಮ ಆಫ್ರಿಕಾದ ಸೆನೆಗಲ್‌ ಪೊಲೀಸರಿಂದ ಬಂಧಿತನಾದ ಮೂಲತಃ ಉಡುಪಿಯ ಮಲ್ಪೆಯ ಕಡೇಕಾರ್ ನಿವಾಸಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಆರು ತಿಂಗಳಿನಿಂದಲೇ ಖೆಡ್ಡಾ ತೋಡುವ ಕೆಲಸ ಶುರುವಾಗಿತ್ತು. ಮಲೇಶಿಯಾ, ಆಸ್ಪ್ರೇಲಿಯಾದಿಂದ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ರವಿ ಪೂಜಾರಿ ಆಫ್ರಿಕಾದ ಕಡು ಬಡ ದೇಶಗಳಲ್ಲೇ ಓಡಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಹಿಡಿದಿದ್ದ ರಾಜ್ಯದ ಎಸಿಪಿಯೊಬ್ಬರು ಆತನನ್ನು ಬೆನ್ನತ್ತಿದ್ದರು. ನವರಾತ್ರಿ ಹಬ್ಬದಲ್ಲಿ ಸಹಚರರ ಜತೆ ಆತ ಡಾನ್ಸ್‌ ಮಾಡುತ್ತಿದ್ದ ವೀಡಿಯೋವೊಂದು ಬೆಂಗಳೂರು ತಲುಪಿತ್ತು. ಅಲ್ಲಿಂದಲೇ ಖೆಡ್ಡಾಕ್ಕೆ ಬೀಳಿಸಿಕೊಳ್ಳುವ ಪ್ರಯತ್ನ ಚುರುಕಾಗಿತ್ತು.

ಕಳೆದ ಹದಿನೈದು ವರ್ಷಗಳಿಂದ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದರೂ..ಸೆನೆಗಲ್ ದೇಶದ ರಾಜಧಾನಿಯಾಗಿರುವ ಡಾಕರ್ ನಲ್ಲಿ ಜನವರಿ 19ರಂದೇ ರವಿ ಪೂಜಾರಿ ಬಂಧನವಾಗಿರುವುದು ಇದೀಗ ಖಚಿತವಾಗಿದೆ. ಇಂಟರ್‌ಪೋಲ್‌ ಸಂಸ್ಥೆ (ಅಂತಾರಾಷ್ಟ್ರೀಯ ಮನ್ನಣೆ ಪಡೆದ ತನಿಖಾ ಸಂಸ್ಥೆ) ಗುರುವಾರ ಆತನ ಬೆರಳಚ್ಚು ಮಾಹಿತಿಯನ್ನು ಕೇಳಿದೆ. ಸದ್ಯಕ್ಕೆ ರವಿ ಪೂಜಾರಿಯನ್ನು ಡಾಕರ್ ನಲ್ಲಿರುವ ರೆಬ್ಯೂಸ್ ಡಿಟಕ್ಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ರವಿ ಪೂಜಾರಿ ಹಲವು ದುಷ್ಕೃತ್ಯದಲ್ಲಿ ಭಾಗಿಯಾಗಿದ್ದರೂ ಆತನನ್ನು ಬಂಧಿಸಿರುವುದು ಮುಂಬಯಿ ಪೊಲೀಸರು ಮಾತ್ರ. ಈ ಹಿನ್ನೆಲೆಯಲ್ಲಿ ಇಂಟರ್‌ಪೋಲ್‌ ಮುಂಬಯಿ ಪೊಲೀಸರ ಬಳಿ ಆತನ ಫಿಂಗರ್‌ ಪ್ರಿಂಟ್‌ (ಬೆರಳಚ್ಚು) ಕೇಳಿದ್ದು, ಅದನ್ನು ಶನಿವಾರದೊಳಗೆ ರವಾನೆ ಮಾಡುವ ಸಾಧ್ಯತೆಯಿದೆ.

ಪೂಜಾರಿ ಬಂಧನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಸೆನೆಗಲ್ ಸರಕಾರಕ್ಕೆ ಭಾರತ ಮನವಿ ಮಾಡಲಿದೆ ಎಂದು ವರದಿ ತಿಳಿಸಿದೆ. ರವಿ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ನಗರ ಪೊಲೀಸರು ಇಂಟರ್ಪೋಲ್‌ಗೆ ಮನವಿ ಮಾಡಿದ್ದರು. ಕಳೆದ ಒಂದೂವರೆ ದಶಕದಿಂದ ಆಸ್ಟ್ರೇಲಿಯ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡೇ ಭಾರತದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ ರವಿ ಪೂಜಾರಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.

ಆದರೆ ಹಸ್ತಾಂತರ 1 ತಿಂಗಳು ವಿಳಂಬವಾಗುವ ಸಾಧ್ಯತ್ಎ ಇದೆ. ರವಿ ಪೂಜಾರಿ ಸಂಬಂಧಿಸಿದಂತೆ ದೇಶದ ಯಾವ ರಾಜ್ಯದ ಯಾವ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಅದೆಲ್ಲ ಪ್ರಾದೇಶಿಕ ಭಾಷೆಯಿಂದ ಇಂಗ್ಲೀಷ್‌ಗೆ ತರ್ಜುಮೆಯಾಗಬೇಕು. ಬಳಿಕ ಇಂಟರ್‌ಪೋಲ್‌ ಸಂಸ್ಥೆ ರವಿ ಪೂಜಾರಿ ಬಂಧನವಾದ ದಕ್ಷಿಣ ಆಫ್ರಿಕಾದ ಸ್ಥಳೀಯ ಭಾಷೆಗೆ ಅನುವಾದ ಮಾಡಿ ನೀಡಬೇಕು. ಈ ವರದಿಯ ಮೇಲೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಗೆ ಕನಿಷ್ಠ ಒಂದು ತಿಂಗಳು ತಗಲುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರವಿ ಪೂಜಾರಿ ಬಂಧನಕ್ಕೆ ಮುಂಬಯಿ, ಗುಜರಾತ್‌, ಬೆಂಗಳೂರು ಪೊಲೀಸರ ಕಾರ್ಯತಂತ್ರ ಯಶಸ್ವಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ತಿಂಗಳ ಆರಂಭದಲ್ಲಿ ಆತನ ಇಬ್ಬರು ಸಹಚರರಾದ ವಿಲಿಯಂ ರಾಡ್ರಿಕ್ಸ್ ಮತ್ತು ಆಕಾಶ್ ಶೆಟ್ಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಬಂಧಿತರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಖ್ಯಾತ ಡಾನ್ ರವಿ ಪೂಜಾರಿ ಕ್ರೈಮ್ ಹಿಸ್ಟ್ರಿ :

ಮುಂಬೈ ಭೂಗತಲೋಕದ ಹಲವು ಪಾತಕಿಗಳ ಜೊತೆ ಕೆಲಸ ಮಾಡಿದ್ದ ಪೂಜಾರಿ ಎರಡು ದಶಕಗಳ ಹಿಂದೆ ತನ್ನದೇ ಗುಂಪನ್ನು ರಚಿಸಿ ಕೊಲೆ, ಸುಲಿಗೆ ಮಾಡುವುದನ್ನು ಮುಂದುವರಿಸಿದ್ದ. ಒಂದು ಕಾಲದಲ್ಲಿ ದಾವೂದ್‌ ಗ್ಯಾಂಗ್‌ನೊಂದಿಗೆ ಗುರುತಿಸಿದ್ದ ಈತ ಮುಂಬಯಿ ಘಟನೆ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ. ದುಬೈನಲ್ಲಿ ಛೋಟಾರಾಜನ್‌ ಜತೆ ಗುರುತಿಸಿಕೊಂಡಿದ್ದ ಈತನ ಮೇಲೆ ದಾವೂದ್‌ಗೆ ಕಣ್ಣು ಬಿದ್ದಿದ್ದು, ಈ ಇಬ್ಬರ ಹತ್ಯೆಗೆ ಸಂಚು ರೂಪಿಸಿದ್ದರು. ಬಳಿಕ ರವಿ ಪೂಜಾರಿ ಛೋಟಾರಾಜನ್‌ನಿಂದಲೂ ದೂರವಾಗಿ ಕಲಿ ಯೋಗೀಶ್‌ ಮತ್ತು ಸುರೇಶ್‌ ಪೂಜಾರಿ ಮುಖಾಂತರ ತನ್ನ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ಅವರಿಂದಲೂ ದೂರವಾಗಿ ತನ್ನ ಸಹಚರರ ಮೂಲಕ ಬೆದರಿಕೆಯೊಡ್ಡುತ್ತಿದ್ದ ಎಂದು ತಿಳಿದು ಬಂದಿದೆ.

ಕಳೆದ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳಲ್ಲಿ ಓಡಾಡುತ್ತಾ ತನ್ನ ದಂಧೆ ಮಾಡಿಕೊಂಡಿದ್ದ. ಈತ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಗೆ ಕೂಡ ಬೆದರಿಕೆ ಒಡ್ಡಿ ಸುದ್ದಿಯಾಗಿದ್ದ. ಕರ್ನಾಟಕದ ಮಾಜಿ ಸಚಿವರಿಗೆ ಬೆದರಿಕೆ ಹಾಕಿದ್ದು ಈತನ ಜಾಲ ಯಾವ ಪರಿ ಇತ್ತು ಎಂಬುದಕ್ಕೆ ಸಾಕ್ಷಿ ಎಂಬಂತೆ ಇತ್ತು.

90ರ ದಶಕದಲ್ಲಿ ಭೂಗತಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕೂತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದನೆನ್ನಲಾಗಿದೆ. ಅರವತ್ತಕ್ಕೂ ಹೆಚ್ಚು ಪ್ರಕರಣಗಳು ಆತನ ವಿರುದ್ಧ ಇವೆ. ರವಿ ಪೂಜಾರಿ ವಿರುದ್ಧ ಕೇಂದ್ರ ಸರಕಾರ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು. ಹಫ್ತಾ ವಸೂಲಿ ಅವನ ಮುಖ್ಯ ದಂಧೆಯಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಉದ್ಯಮಿಗಳು, ರಾಜಕಾರಣಿಗಳು ಅವನ ಗುರಿಯಾಗುತ್ತಿದ್ದರು.

ರವಿ ಪೂಜಾರಿ ವಿದೇಶದಲ್ಲಿದ್ದುಕೊಂಡು ತಮ್ಮ ಸಹಚರರ ಮೂಲಕ ಅಥವಾ ತಾನೇ ಕರೆ ಮಾಡಿ ಮುಂಬಯಿ, ಗುಜರಾತ್‌, ಬೆಂಗಳೂರು, ಮಂಗಳೂರು, ಉಡುಪಿಯ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ. ಇದು ಮಾತ್ರವಲ್ಲದೆ ಕೆಲವು ಕೊಲೆ ಪ್ರಕರಣದಲ್ಲೂ ಆರೋಪಿ. ರವಿ ಪೂಜಾರಿ ಮೇಲೆ ಕರ್ನಾಟಕದಲ್ಲಿ 18-20 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ ಈತನ ವಿರುದ್ಧ 3 ಶೂಟ್ ಔಟ್ ಮತ್ತು 3 ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಈ ಭೂಗತ ಪಾತಕಿಯ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿವೆ.

ಕರ್ನಾಟಕ, ಮಹಾರಾಷ್ಟ್ರ,ಕೇರಳ, ಗುಜರಾತ್ ರಾಜ್ಯಗಳಲ್ಲಿ ೨೦೦೧ರಿಂದ ಹಿಂಸೆಯನ್ನು ನಡೆಸುತ್ತಿದ್ದನು, ಅವನು ಈ ರಾಜ್ಯಗಳಲ್ಲಿ ಪ್ರಭಾವ ಶಾಲಿ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಅವರಿಗೆ ಕರೆ ಮಾಡಿ ಹಣ ಸುಲಿಗೆ ಮಾಡುವುದು ಅವನ ಕಾರ್ಯಚರಣೆಯ ವಿಧಾನವಾಗಿತ್ತು. ಜೀವ ಭಯದಿಂದ ರವಿ ಪೂಜಾರಿ ಹೇಳುವಂತಹ ಜಾಗದಲ್ಲಿ ಹಾಗೂ ಕೇಳಿದಷ್ಟು ಹಣವನ್ನು ತಲುಪಿಸುತ್ತಿದ್ದರು. ಈ ಕೃತ್ಯವನ್ನು ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ ಮತ್ತು ಇತರೆ ಸ್ಥಳಗಳಲ್ಲಿ ಮಾಡುತಿದ್ದು,ಈತನಿಗೆ ಹಫ್ತಾ ನೀಡದ ಹಲವಾರು ಮುಗ್ದರನ್ನು ಈತ ಹತ್ಯೆಮಾಡಿರುವ ಬಗ್ಗೆ ಗಂಭೀರವಾದ ಆರೋಪವಿದೆ.

ಭೂಗತ ಪಾತಕಿ ರವಿ ಪೂಜಾರಿ ಉದ್ಯಮಿಗಳಿಗೆ ಹಫ್ತಾ ವಸೂಲಿಗೆ ಕರೆ ಮಾಡಿ 1 ಕೋಟಿ ರೂ.ಗೆ ಬೇಡಿಕೆ ಇಡುತ್ತಿದ್ದ. ಬಳಿಕ ಅದನ್ನು ಕಡಿತಗೊಳಿಸಿ ಕೆಲವು ಉದ್ಯಮಿಗಳಿಂದ 5 ಲಕ್ಷ ರೂ. ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.ದೂರವಾಣಿ ಕರೆಗಳನ್ನು ಮಾಡಿ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮತ್ತು ಬಾಲಿವುಡ್ ನಟರನ್ನು ಹೆದರಿಸಿ ತನ್ನ ಸಹಚರರ ಮೂಲಕ ಹಫ್ತಾ ವಸೂಲು ಮಾಡಿಸುತ್ತಿದ್ದ ಕುಖ್ಯಾತಿ ಈತನಿಗಿದೆ. ಈತ ಆಯಂಟೋನಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಆಫ್ರಿಕಾ ದೇಶಗಳಲ್ಲಿ ತಿರುಗುತ್ತಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆ ಹುರಿಯತ್‌ನ ನಾಯಕ ಸೈಯದ್ ಅಲಿ ಶಾ ಗಿಲಾನಿ ಹಾಗೂ ಇತರ ಎಲ್ಲ ದೇಶವಿರೋಧಿ ಧ್ವನಿಗಳನ್ನು ನಿಗ್ರಹಿಸುವುದಾಗಿ ಆತ ಎಚ್ಚರಿಕೆ ನೀಡುವ ಮೂಲಕ ರವಿ ಪೂಜಾರಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದ.

ಬಂಧನಕ್ಕೆ ಸಿಎಂ ಸೂಚನೆ : ಕಾರ್ಯಾಚರಣೆಗೆ ವಿಶೇಷ ತಂಡ

ರವಿ ಪೂಜಾರಿಯನ್ನು ಹಿಡಿದು ತರುವ ಪ್ರಯತ್ನ ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್‌ ಅವರಿಂದಲೇ ಶುರುವಾಗಿತ್ತು. ಬನ್ನಂಜೆ ರಾಜನನ್ನು ಕರೆತರುವಲ್ಲಿ ಯಶಸ್ವಿ ಆಗಿದ್ದ ಅವರು, ಮುಂದಿನ ಸರದಿಯಲ್ಲಿ ಚೋಟಾ ರಾಜನ್‌ ಮತ್ತು ರವಿಪೂಜಾರಿಯ ಬೆನ್ನು ಬೀಳಲು ಒಂದು ತಂಡ ಸಿದ್ಧಪಡಿಸಿದ್ದರು. ಈ ತಂಡದಲ್ಲಿದ್ದ ಸಿಸಿಆರ್‌ಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ತಮ್ಮ ಮಂಗಳೂರು ಮೂಲದ ಸಂಪರ್ಕಗಳನ್ನು ಬಳಸಿಕೊಂಡಿದ್ದರು. ಆಗಲೇ ಪೂಜಾರಿಯ ಮಗಳ ಹೃದಯ ಶಸ್ತ್ರ ಚಿಕಿತ್ಸೆ ನಾರಾಯಣ ಹೃದಯಾಲಯದಲ್ಲಿ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಈ ಸುಳಿವನ್ನು ಬೆನ್ನತ್ತಿದಾಗ ಶ್ರೀಲಂಕಾದ ಪಾಸ್‌ಪೋರ್ಟ್‌ನಲ್ಲಿ ಓಡಾಡುತ್ತಿರುವ ಪೂಜಾರಿ ಆಫ್ರಿಕಾದ ಬುರ್ಕಿನೋಫಾಸೋದಲ್ಲಿ ಮನೆ ಮಾಡಿದ್ದಾನೆ ಎನ್ನುವುದು ಗೊತ್ತಾಗಿತ್ತು. ಇಷ್ಟೆಲ್ಲಾ ಮಾಹಿತಿ ಸಂಗ್ರಹಿಸುವ ಹೊತ್ತಿಗೆ ಓಂ ಪ್ರಕಾಶ್‌ ಅವರು ನಿವೃತ್ತಿಯಾಗಿದ್ದರಿಂದ ಪೂಜಾರಿಯನ್ನು ಹಿಡಿದು ತರುವ ಪ್ರಯತ್ನ ಅಲ್ಲಿಗೇ ನಿಂತಿತ್ತು.

ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿಯವರ ಮುಖ್ಯಮಂತ್ರಿ ಪದವಿ ಅಧಿಕಾರ ವಹಿಸಿಕೊಂಡಾಗ, ರವಿ ಪೂಜಾರಿಯಿಂದ ತಮ್ಮ ಜೀವಕ್ಕೆ ಕುತ್ತು ತಂದ ಹಲವಾರು ಜನರು ಸರ್ಕಾಕ್ಕೆ ತಿಳಿಸುತ್ತಾರೆ, ಈ ಅಪರಾಧಿಯನ್ನು ದಸ್ತಗಿರಿ ಮಾಡುವ ಕರ್ತವ್ಯವನ್ನು ಡಿಜಿ ಮತ್ತು ಐಜಿಪಿ ಶ್ರೀಮತಿ ನೀಲಮಣಿ ರಾಜು ಮತ್ತು ಎಡಿಜಿಪಿ, ಗುಪ್ತವಾರ್ತೆ, ಡಾ ಅಮರ್ ಕುಮಾರ್ ಪಾಂಡೆ ಅವರಿಗೆ, ರವಿ ಸುಳಿಯಾ ಪೂಜಾರಿ ಯಾವುದೇ ಸ್ಥಳದಲ್ಲಿದ್ದರೂ ಅವರನ್ನು ದಸ್ತಗಿರಿ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸುತ್ತಾರೆ.ಶ್ರೀಮತಿ ನೀಲಮಣಿ ರಾಜು , ಡಿಜಿ ಮತ್ತು ಐಜಿಪಿ ಹಾಗೂ ಡಾ ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಗುಪ್ತಾವಾರ್ತೆ ಇವರಿಬ್ಬರೂ ಜೂನ್ ೨೦೧೮ ರಿಂದ ಕಾರ್ಯಚರಣೆಯನ್ನು ಆರಂಭಿಸಿದರು.

ಡಾ ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಗುಪ್ತಾವಾರ್ತೆಯವರು ರವಿ ಪೂಜಾರಿ ಒಳಗೊಂಡಿರುವ ಹಿಂದಿನ ಎಲ್ಲಾ ಪ್ರಕರಣಗಳ ದಾಖಾಲಾತಿಗಳನ್ನು ಸಂಗ್ರಹಿಸಿ ಅವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದರು.ಅವನನ್ನು ಹಿಡಿಯಲು ಯಾವುದೇ ಮಾಹಿತಿ ಸಿಗದಿರುವುದರಿಂದ, ಸ್ಯಾಶನಲ್ ಕ್ರೈಮ್ ಬ್ಯೂರೋ, ದೆಹಲಿರವರನ್ನು ಸಂಪರ್ಕಿಸಿ ಅವನನ್ನು ಹುಡುಕಲು ಇಂಟರ್‌ಪೋಲ್ ರವರಿಗೆ ರೆಡ್ ಕಾರ್ನರ್ ನೋಟೀಸ್ ಅನ್ನು ನೀಡಲು ಸೂಚಿಸಲಾಯಿತು. ನ್ಯಾಶನಲ್ ಕ್ರೈಮ್ ಬ್ಯೂರೋ ರವರಿಂದ ಇ ಪ್ರಕ್ರಿಯೆಯು ಪುನಃ ಪ್ರಾರಂಬಿಸಲಾಯಿತು.

ಕ್ರಮೇಣ ಪಶ್ಚಿಮ ಆಪ್ರಿಕಾ ದೇಶಗಳಾದ ಕೊನಾಕ್ರಿ, ಬುರ್‌ಕಿನ ಫಾಸೋ, ಸೆನೆಗಲ್, ಐವರಿ ಕೋಸ್ಟ್‌ನಲ್ಲಿ ರೆಸ್ಟೋರೆಂಟ್‌ಗೆ ಉತ್ತರ ಭಾರತೀಯರವರ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ನಾಗ್\ಹಿತಿ ಲಭಿಸಿತು. ರವಿ ಪೂಜಾರಿಯು ಅವರ ಹೆಸರನ್ನು ಅಂಟೋನಿ ಫೆರನಾಂಡಿಸ್ ಎಂಬ ಹೆಸರಲ್ಲಿ ತಪ್ಪು ಮಾಹಿತಿ ನೀಡಿ ಹೊಸ ಗುರುತನ್ನು ಪಡೆದು ಬುರ್‌ಕಿನ ಫಾಸೋ ದೇಶದ ರಹದಾರಿ ಪತ್ರವನ್ನು ತನ್ನ ಹೆಂಡತಿ ಹಾಗೂ ಮಕ್ಕಳ ಹೆಸರಲ್ಲಿ ಪಡೆದಿರುತ್ತಾನೆ,ಬುರ್‌ಕಿನ ಫಾಸೋದಲ್ಲಿ ಅವನ ಚಲನವಲನದ ಮಾಹಿತಿಯ ವರದಿಯನ್ನು ಡಾ ಅಮರ್ ಕುಮಾರ್ ಪಾಂಡೆರವರಿಗೆ ನಿಯಮಿತವಾಗಿ ವರದಿ ನೀಡಲಾಗುತ್ತಿತ್ತು.

ಅವನಿಗೆ ತುಂಬಾ ದಿನ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗದಿದ್ದು, ಅವನನ್ನು ಸೆನೆಗಲ್ ರಾಜದಾನಿ ಡಕಾರ್ ದಲ್ಲಿ ಕಾಣಿಸಿಕೊಂಡಿದ್ದನು, ಡಾ ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಗುಪ್ತಾವಾರ್ತೆ ರವರು ಭೂಗತ ಪಾತಕಿಯು ಡಕಾರ್, ಸೆನಗಲ್ ನಲ್ಲಿ ಇರುವ ಬಗ್ಗೆ ಭಾರತೀಯ ರಾಯಭಾರಿಗೆ ಎಚ್ಚರಿಗೆ ನೀಡಿದ್ದು, ಇದರಿಂದ ಪ್ರಭಾವಿತರಾದ (ರಾಜೀವ್ ಕುಮಾರ್, ಐಎಫ್‌ಎಸ್, ಭಾರತದ ರಾಯಭಾರಿ, ಸೆನೆಗಲ್) ಇವರು ಶೀಘ್ರವೇ ಮಿಸಿಸ್ಟ್ರಿ ಆಫ್ ಇಂಟಿರಿಯರ ರವರಲ್ಲಿ ವೈಯಕ್ತಿಕವಾಗಿ ಈ ಮಾಹಿತಿಯನ್ನು ಇಂಟಿರಿಯರ್ ಮಿನಿಸ್ಟರ್, ಸೆನೆಗಲ್ ಹಾಗೂ ರಾಜೀವ್ ಕುಮಾರ್, ಐಎಫ್‌ಎಸ್, ರವರು ಸೆನೆಗಲ್ ರಾಷ್ಟ್ರಪತಿಯವರ ಕಾರ್ಯಲಯಕ್ಕೆ ಪೂರ್ಣ ಮಾಹಿತಿಯನ್ನು ನೀಡಿರುತ್ತಾರೆ.

ಪೂಜಾರಿಯಿಂದ ನಮಸ್ತೆ ಬಾರ್‌ನಲ್ಲಿ ನವರಾತ್ರಿ ಡಾನ್ಸ್ : ಚುರುಕಾದ ಕಾರ್ಯಾಚರಣೆ :

ರವಿ ಪೂಜಾರಿಯಿಂದ ಸಂಸದ ಡಿ.ಕೆ.ಸುರೇಶ್‌, ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಲಾಡ್‌ಗೆ ಬೆದರಿಕೆ ಕರೆಗಳು ಬಂದ ನಂತರ. ಮುಖ್ಯಮಂತ್ರಿ ಕುಮಾರಸ್ವಾಮಿ ಖುದ್ದಾಗಿ ಡಿಜಿ-ಐಜಿಪಿ ನೀಲಮಣಿ ಎನ್‌ ರಾಜು ಹಾಗೂ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಜತೆ ಈ ಬಗ್ಗೆ ಚರ್ಚಿಸಿದ್ದರು. ಆಗ ಮತ್ತೆ ಚುರುಕಾದವರು ವೆಂಕಟೇಶ್‌ ಪ್ರಸನ್ನ. ಡಕಾರ್‌ನಲ್ಲಿರುವ ‘ನಮಸ್ತೆ ಇಂಡಿಯಾ’ ಹೋಟೆಲ್‌ ಪೂಜಾರಿಯ ಅಡ್ಡ ಎನ್ನುವ ಮಾಹಿತಿ ಸಿಕ್ಕಿತ್ತು. ನವರಾತ್ರಿ ದಿನ ಈ ಹೋಟೆಲ್‌ನಲ್ಲಿ ತನ್ನ ಸಹಚರರ ಜತೆ ಕೆಂಪು ಟೀ ಶರ್ಟ್‌ನಲ್ಲಿ ಡಾನ್ಸ್‌ ಮಾಡುತ್ತಿದ್ದ ವೀಡಿಯೋ, ಪ್ರಸನ್ನ ಅವರ ಕೈಸೇರಿತ್ತು. ಇಲ್ಲಿಂದ ಬೆಂಗಳೂರು ಕಮಿಷನರೇಟ್‌ನ ಅಧಿಕಾರಿಗಳು ಚುರುಕಾದರು. ಈ ನಡುವೆ ಪಶ್ಚಿಮ ವಲಯದ ಐಜಿಪಿ ಅರುಣ್‌ ಚಕ್ರವರ್ತಿ, ಪ್ರಸನ್ನ ಅವರನ್ನು ಎರಡು ತಿಂಗಳ ಹಿಂದೆ ಕರೆಸಿಕೊಂಡು ಪೂಜಾರಿ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು.

ಮನೆ ಖರೀದಿ: ಬುರ್ಕಿನೋ ಫಾಸೋದ ಕ್ಯಾಂಬೋಡಿಯಾ ಶಾಲೆಯ ಪಕ್ಕದಲ್ಲಿ ಪೂಜಾರಿ ಸ್ವಂತ ಮನೆ ಖರೀದಿಸಿದ್ದ. ಪತ್ನಿ ಮತ್ತು ಮಕ್ಕಳು ಇಲ್ಲೇ ಇರುತ್ತಿದ್ದರಾದರೂ ಈತ ಮಾತ್ರ ಹೆಚ್ಚಾಗಿ ಇರುತ್ತಿದ್ದದ್ದು ಸೆನೆಗಲ್‌ನಲ್ಲಿ.

ಪೂಜಾರಿ ಬಂಧಿತನಾಗಿದ್ದು ಜ.19 ರಂದು. ಜ.20 ರಂದೇ ಸೆನೆಗಲ್‌ನ ಫ್ರೆಂಚ್‌ ಪತ್ರಿಕೆಗಳಲ್ಲಿ ಸುಳ್ಯ ಪೂಜಾರಿ ಬಂಧನ ಎನ್ನುವ ಸುದ್ದಿ ಪ್ರಕಟವಾಗಿವೆ. ಮೊದಲಿಗೆ ತಾನು ಪೂಜಾರಿ ಅಲ್ಲ ಎಂದೇ ವಾದಿಸುತ್ತಿದ್ದ . ಇಂಟರ್‌ಪೋಲ್‌ ಪೊಲೀಸರು ಬೆಂಗಳೂರಿನಿಂದ ಬೆರಳಚ್ಚು ಮಾದರಿಗಳನ್ನು ತರಿಸಿಕೊಂಡು ಪರೀಕ್ಷಿಸಿ ಈತನೇ ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ರವಿ ಪೂಜಾರಿ ಎನ್ನುವುದು ಖಚಿತವಾಗಿದ್ದು ಜ.22 ಕ್ಕೆ. ಈತನ ಬಂಧನದ ಬೆನ್ನಲ್ಲೇ ಡಕಾರ್‌ ಪೊಲೀಸರು ‘ನಮಸ್ತೆ ಇಂಡಿಯಾ’ ಹೋಟೆಲ್‌ ಮೇಲೆ ದಾಳಿ ನಡೆಸಿ ಪೂಜಾರಿಗೆ ಸೇರಿದ ಲ್ಯಾಪ್‌ಟಾಪ್‌, ಮೊಬೈಲ್‌ ಇತ್ಯಾದಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ರವಿಪೂಜಾರಿಯನ್ನು ಅಲ್ಲಿನ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನ್ನ ಜತೆ ಆತ್ಮೀಯ ಸಂಪರ್ಕದಲ್ಲಿದ್ದ ರಾಜ್ಯದ ಪೊಲೀಸ್‌ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಆತ ಬಾಯಿ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಜತೆಗೆ ಈತನ ಹೆಸರಿನಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ನಾನಾ ಕೃತ್ಯಗಳನ್ನು ಮಾಡಿಸುತ್ತಿದ್ದವರ ಹೆಸರುಗಳೂ ಇಂಟರ್‌ಪೋಲ್‌ ಪೊಲೀಸರಿಗೆ ಸಿಕ್ಕಿವೆ ಎನ್ನಲಾಗುತ್ತಿದೆ.

ನವರಾತ್ರಿ ಡಾನ್ಸ್‌ ಮಾಡುವಾಗ ಪೂಜಾರಿ ಸುಮಾರು 180 ಕೆಜಿ ತೂಕದ ವ್ಯಕ್ತಿ ಆಗಿದ್ದ. ಆನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು 80 ಕೆಜಿ ಬೊಜ್ಜು ತೆಗೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಮಾಧ್ಯಮಗಳಲ್ಲಿ ಕಾಣಿಸುತ್ತಿರುವ ಪೂಜಾರಿಯ ಫೋಟೋ 20 ವರ್ಷಗಳ ಹಿಂದಿನದ್ದು. ಈಗ ಈತನ ಆಕಾರವೇ ಬೇರೆ ರೀತಿ ಇದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಭಾರತದಲ್ಲಿ ಜಿವಾವಧಿ ಶಿಕ್ಷೆ ಆಗುವ ನಿರೀಕ್ಷೆ…

ಬೆಂಗಳೂರು ನಗರದಲ್ಲಿ ರವಿ ಪೂಜಾರಿಯ ಮೇಲೆ 30 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೧೫ ಫೆಬ್ರವರಿ ೨೦೦೭ ರಂದು ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀಮತಿ ಶೈಲಜಾ ಮತ್ತು ಶಬ್ ನಮ್ ಡೆವೆಲಪರ್ಸ್ ನ ರವಿಯ ಕೊಲೆಯು ಸೇರಿದೆ, ಮಂಗಳೂರು ನಗರದಲ್ಲಿ ೩೬ ಪ್ರಕರಣ, ಉಡುಪಿಯಲ್ಲಿ ಜಿಲ್ಲೆಯಲ್ಲಿ ೧೧ ಪ್ರಕರಣ, ಹಾಗೂ ಮೈಸೂರು ನಗರ, ಹುಬ್ಬಳ್ಳಿ, ಧಾರವಾಡ, ಕೊಲಾರ, ಮಂಗಳುರು ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದು ಒಟ್ಟು ೯೭ ಪ್ರಕರಣಗಳು ರವಿಪೂಜಾರಿಯ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ದಾಖಲಾಗಿರುತ್ತದೆ.

ರವಿ ಪೂಜಾರಿಯ ಮೇಲೆ ಭಾರತದಲ್ಲಿ ನೂರಾರು ಪ್ರಕರಣಗಳಿ ಇದ್ದು ಹಾಗೂ ಮಂಗಳೂರಿನ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವು ಅವನ ಸಹಚರರಿಗೆ ಜಿವಾವಧಿ ಹಾಗೂ ಕಠಿಣ ಶಿಕ್ಷೆ ವಿಧಿಸಿದ್ದು, ರವಿ ಪೂಜಾರಿಗೂ ಇದೇ ರೀತಿಯ ಶಿಕ್ಷೆ ಆಗುವ ನಿರೀಕ್ಷೆ ಇದೆ

ಮೂಲ ದಾಖಲೆಗಳ ಸಹಾಯದಿಂದ ಕ್ರಿಮಿನಲ್ ಜಸ್ಟೀಸ್ ಪೊಲೀಸ್, ಸೆನೆಗಲ್ ರವರು ಭಾರತೀಯ ಅಧಿಕಾರಿಗಳಿಗೆ ರವಿ ಪೂಜಾರಿಯ ಗುರುತನ್ನು ಖಚಿತಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.