ಕರಾವಳಿ

ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚೆ: ಸಚಿವ ರಾಜಶೇಖರ ಪಾಟೀಲ್

Pinterest LinkedIn Tumblr

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಮರಳುಗಾರಿಕೆ ಕುರಿತಂತೆ ಪ್ರತ್ಯೇಕ ನೀತಿ ರೂಪಿಸಲು ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ ತಿಳಿಸಿದ್ದಾರೆ. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯುತ್ತಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ರೂಪಿಸಿದ ನಿಯಮಗಳು ಈ ಜಿಲ್ಲೆಗೆ ಅನ್ವಯಿಸುವುದಿಲ್ಲ, ಆದ್ದರಿಂದ ಈ ಜಿಲ್ಲೆಗಳ ಪ್ರಾದೇಶಿಕತೆಗೆ ಅನುಗುಣವಾಗಿ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಹಾಗೂ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಜಿಲ್ಲೆಯ ಎಲ್ಲಾ ಶಾಸಕರು ಸಚಿವರಲ್ಲಿ ಕೋರಿದರು, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಕುರಿತಂತೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು, ಪ್ರತ್ಯೇಕ ಮರಳು ನೀತಿಗೆ ಅನುಗುಣವಾಗಿ ಸೇರಿಸಬಹುದಾದ ಅಂಶಗಳ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಗುರುತಿಸಲಾಗಿರುವ 23 ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಕುರಿತಂತೆ ಪಿ.ಡಬ್ಯೂಡಿ, ಕೆ.ಆರ್.ಐ.ಡಿಎಲ್, ಪಿ.ಆರ್.ಇ.ಡಿ ಸೇರಿದಂತೆ ವಿವಿಧ ಸರಕಾರಿ ಏಜೆನ್ಸಿಗಳಿಗೆ ಹಾಗೂ ಪ್ರಾಯೋಗಿಕವಾಗಿ ಸದ್ರಿ ಮರಳು ದಿಬ್ಬ ವ್ಯಾಪ್ತಿಯ 2 ಗ್ರಾಮ ಪಂಚಾಯತ್ಗಳಿಗೆ ಅನುಮತಿ ನೀಡುವ ಕುರಿತಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ನಿರ್ದೇಶಕ ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಓ ಸಿಂಧು ಬಿ ರೂಪೇಶ್, ಎಸ್ಪಿ ಲಕ್ಷ್ಮಣ ಬ ನಿಂಬರಗಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.