ಕರಾವಳಿ

ಜನವರಿ 27ರಂದು ಮಂಗಳೂರಿನಲ್ಲಿ “ತುಳುಚಿತ್ರ ಶತೋತ್ಸವ” : ನಿರ್ಮಾಪಕರು,ನಿರ್ದೇಶಕರು,ಕಲಾವಿದರು ಸೇರಿ 100 ಮಂದಿಗೆ ಸನ್ಮಾನ

Pinterest LinkedIn Tumblr

ಮಂಗಳೂರು, ಜನವರಿ.25: ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಆಶ್ರಯದಲ್ಲಿ “ತುಳು ಚಿತ್ರ ಶತೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಆದ್ಧೂರಿ ಸಮಾರಂಭವು ಜನವರಿ 27ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಜರಗಲಿದೆ ಎಂದು ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಗೌರವಾಧ್ಯಕ್ಷ ಕಿಶೋರ್ ಡಿ. ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ತುಳು ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರನ್ನು ಸನ್ಮಾನಿಸಲಾಗುವುದು. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿ 100 ಮಂದಿಯನ್ನು ಗಣ್ಯರ ಸಮ್ಮುಖದಲ್ಲಿ ನ್ಮಾನಿಸಲಾಗುವುದು ಎಂದು ಹೇಳಿದರು.

ಜನವರಿ 27ರಂದು ಬೆಳಗ್ಗೆ 9.45ಕ್ಕೆ ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಗಣೇಶ್ ರಾವ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, ಬಳಿಕ 11 ಗಂಟೆಗೆ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರಮಂದಿರ ಮಾಲಕರು, ವ್ಯವಸ್ಥಾಪಕರಿಗೆ ಅಭಿನಂದನೆ ನಡೆಯಲಿದೆ. 12 ಗಂಟೆಗೆ ತುಳುಚಿತ್ರದ ಬೆಳವಣಿಗೆ ಬಗ್ಗೆ ಸಂವಾದ, 2 ಗಂಟೆಗೆ ವಿದ್ಯಾರ್ಥಿಗಳಿಗೆ ಚಿತ್ರರಂಗದ ಬಗ್ಗೆ ರಸಪ್ರಶ್ನೆ, 3 ಗಂಟೆಗೆ ಅಭಿನಂದನಾ ಕಾರ್ಯಕ್ರಮ, 4 ಗಂಟೆಗೆ ತುಳುಚಿತ್ರಗಳ ರಸಮಂಜರಿ, 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 6 ಗಂಟೆಗೆ ತುಳು ಚಿತ್ರ ತಾರೆಯರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.30ಕ್ಕೆ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ನಿರ್ಮಾಪಕರ ಸಂಘದ ಉದ್ಘಾಟನೆ ನಡೆಯಲಿದೆ. ಈ ವೇಳೆ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಆರ್.ಧನರಾಜ್ ಅವರು ಅಧಿಕಾರ ವಹಿಸಲಿರುವರು. ಬಳಿಕ ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಮುಖ್ಯಮಂತ್ರಿ ಕುಮಾರ ಸ್ವಾಮಿ ಉದ್ಘಾಟನೆ :

ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಉದ್ಘಾಟಿಸಲಿದ್ದಾರೆ. ಉದ್ಯಮಿ ಹಾಗೂ ಚಿತ್ರ ನಿರ್ಮಾಪ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆ ವಹಿಸಲಿರುವರು. ಕೋಸ್ಟಲ್‌ವುಡ್‌ನ ಕಲಾವಿದರ ಜೊತೆಯಲ್ಲಿ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿರುವರು ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಕಾರ್ಯಾಧ್ಯಕ್ಷ ಬಿ.ಆಶೋಕ್ ಕುಮಾರ್, ಸಂಘದ ಸ್ಥಾಪಕ ಹರೀಶ್ ಕೊಡ್ಪಾಡಿ, ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಕೊಪ್ಪಲ ಕದ್ರಿ, ಜತೆ ಕಾರ್ಯದರ್ಶಿ ಪ್ರಜ್ವಲ್ ಅತ್ತಾವರ, ತುಳುಚಿತ್ರ ಶತೋತ್ಸವ ಸ್ವಾಗತ ಸಮಿತಿ ಸಂಚಾಲಕ ಆರ್. ಧನರಾಜ್, ಪ್ರಧಾನ ಸಂಚಾಲಕ ಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

_ Sathish Kapikad

Comments are closed.