ಕರಾವಳಿ

ಮಂಗನ ಕಾಯಿಲೆ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತಾ ಕ್ರಮ- ಡಿಸಿ ಪ್ರಿಯಾಂಕ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕುರಿತಂತೆ ಇದುವರೆಗೆ ಯಾವುದೆ ಪ್ರಕರಣ ಪತ್ತೆಯಾಗಿಲ್ಲ ಆದರೂ ಸಹ ಜಿಲ್ಲೆಯಲ್ಲಿ ಈ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಸೋಮವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಡಿನಲ್ಲಿ ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆಯಾಗಿದ್ದು, ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಸತತ ಎಂಟ ರಿಂದ ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ, ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು, ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತ ಸ್ರಾವವಾಗಬಹುದು, ಸನ್ನಿವಾತ/ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು, ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಡಿಸಿ ಹೇಳಿದರು.

ಮಂಗನ ಕಾಯಿಲೆ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ, ಆರೋಗ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸದಾ ಜಾಗೃತರಾಗಿದ್ದು, ತುರ್ತು ಸಂದರ್ಭದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಮತ್ತು ತಮ್ಮ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸಂಬಂದಪಟ್ಟಂತೆ ಜನರಲ್ಲಿ ಅರಿವು ಮೂಡಿಸಬೇಕು, ಯಾವುದೇ ಅಸ್ವಾಭಾವಿಕ ಮಂಗನ ಸಾವಿನ ಮಾಹಿತಿ ಸಿಕ್ಕ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು, ಪಶು ಸಂಗೋಪನಾ ಇಲಾಖೆಯಿಂದ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನೆರವೇರಿಸಿ, ಮಂಗಗಳ ಅಂಗಗಳನ್ನು ವೈರಾಣು ಪರೀಕ್ಷೆಗೆ ಕಳುಹಿಸುವುದು ಮತ್ತು ಕಾಡಿಗೆ ತೆರಳು ಸಾಕು ಪ್ರಾಣಿಗಳ ಉಣ್ಣೆಗಳಿಂದ ಈ ರೋಗ ಮನುಷ್ಯರಿಗೆ ಹರಡುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಅರಣ್ಯ ಇಲಾಖೆವತಿಯಿಂದ , ಕಾಡಿನ ಎಲ್ಲಾ ಪ್ರವೇಶ ರಸ್ತೆಗಳಲ್ಲಿ ಮಂಗನ ಕಾಯಿಲೆ ಕುರಿತ ಎಚ್ಚರಿಕೆ ಸಂದೇಶ ಅಳವಡಿಸಬೇಕು ಹಾಗೂ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಬೇಕು, ಕಾಡಿನಲ್ಲಿ ಯಾವುದೇ ಮಂಗನ ಅಸ್ವಾಭಾವಿಕ ಸಾವು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು, ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ಗ್ರಾಮಗಳಲ್ಲಿ ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಸಭೇಗಳನ್ನು ಕರೆದು ವೈದ್ಯಾಧಿಕಾರಿಗಳ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು, ಮಂಗನ ಕಾಯಿಲೆ ಕುರಿತ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಪೋಸ್ಟರ್ ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗನ ಕಾಯಿಲೆಗೆ ಸಂಬಂದಪಟ್ಟ ಸೂಕ್ತ ಔಷಧಗಳು ಮತ್ತು ಅಗತ್ಯ ಸಲಕರಣೆಗಳನ್ನು ದಾಸ್ತಾನು ಇಡುವಂತೆ , ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲು ಹಾಗೂ ಮಂಗನ ಸಾವು ಸಂಭವಿಸಿದ ಸ್ಥಳದ ಸುತ್ತಲಿನ 50 ಮೀಟರ್ ಪ್ರದೇಶದಲ್ಲಿ ಮೆಲಥಿಯನ್ ಕ್ರಿಮಿನಾಶಕ ಸಿಂಪಡಿಸುವಂತೆ ಹಾಗೂ ಮಂಗನ ಸಾವು ಸಂಭವಿಸಿದ ಸ್ಥಳದಲ್ಲಿ ಪ್ರತಿದಿನ ಜ್ವರ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಮಾತನಾಡಿ, ಜಿಲ್ಲೆಯಲ್ಲಿ ಇದುವರಗೆ ಒಟ್ಟು 20 ಮಂಗಗಳ ಸಾವಿನ ಮಾಹಿತಿ ಬಂದಿದೆ, 11 ಮಂಗಗಳ ಅಂಗಾಂಗಗಳ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದ್ದು, ಎರಡು ದಿನದಲ್ಲಿ ವರದಿ ಬರಲಿದೆ, ಮಂಗನ ಕಾಯಿಲೆ ಕುರಿತಂತೆ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳನ್ನು ಹಾಗೂ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಪ್ರಶಾಂತ್ ಭಟ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಪ್ರತಿದಿನದ ವರದಿ ಪಡೆಯಲಾಗುತ್ತಿದೆ, ಜಿಲ್ಲೆಗೆ ಪ್ರಥಮ ಹಂತದಲ್ಲಿ 120 ಬಾಟೆಲ್ ಡಿಎಂಪಿ ತೈಲ ಸರಬರಾಜಾಗಿದ್ದು, ಎರಡನೇ ಹಂತದಲ್ಲಿ 960 ಬಾಟೆಲ್ ಸರಬರಾಜು ಆಗಿದೆ, ಈ ತೈಲವನ್ನು ಅವಶ್ಯಕತೆಗೆ ಅನುಗುಣವಾಗಿ ವಿತರಿಸಲಾಗುತ್ತಿದ್ದು, ಆದಿವಾಸಿ ಸಮುದಾಯದವರಿಗೆ, ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ಎಎನ್ಎಫ್ ಸಿಬ್ಬಂದಿಗೂ ಸಹ ಅವಶ್ಯಕತೆಗೆ ತಕ್ಕಂತೆ ವಿತರಿಸಲಾಗುತ್ತಿದೆ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲೂ ಚಿಕಿತ್ಸೆ ಲಭ್ಯವಿದ್ದು , ಚಿಕಿತ್ಸೆ ನೀಡಲು ಪ್ರತ್ಯೇಕ ವೈದ್ಯರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಸಂಬಂದಿಸಿದಂತೆ ಇದುವರೆಗೆ 73 ಶಂಕಿತ ರೋಗಿಗಳು ದಾಖಲಾಗಿದ್ದು, 27 ಪ್ರಕರಣ ದೃಢಪಟ್ಟಿವೆ, ಇದುವರೆಗೆ 50 ಮಂದಿ ಗುಣಮುಖರಾಗಿ ತೆರಳಿದ್ದು, ಪ್ರಸ್ತುತ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 12 ಪಾಸಿಟಿವ್ ಮತ್ತು 11 ನೆಗೆಟಿವ್ ರೋಗಿಗಳಿದ್ದಾರೆ, ಆಸ್ಪತ್ರೆಯಲ್ಲಿ ಈ ರೋಗಿಗಳ ಚಿಕಿತ್ಸೆಗಾಗಿ, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಾರ್ಡ್ ಮೀಸಲಾಗಿಟ್ಟಿದ್ದು, ಪ್ರೊ. ಡಾ.ಕವಿತಾ ಎಂಬ ಪ್ರತ್ಯೇಕ ವೈದ್ಯರನ್ನು ಚಿಕಿತ್ಸೆ ನೀಡಲು ನಿಯೋಜಿಸಲಾಗಿದ್ದು , ಎಲ್ಲರಿಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ , ಯಾವುದೇ ಮರಣ ಸಂಭವಿಸಿಲ್ಲ ಹಾಗೂ ಉಡುಪಿ ಜಿಲ್ಲೆಯ ಯಾವುದೇ ರೋಗಿ ದಾಖಲಾಗಿಲ್ಲ ಎಲ್ಲಾ ರೋಗಿಗಳು ಶಿವಮೊಗ್ಗದ ಸಾಗರ ತಾಲೂಕಿನವರು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ, ಕೆಂಎಂಸಿಯ ಡಾ. ಅರುಣ್ ಕುಮಾರ್, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.