ಕರಾವಳಿ

ಸಿಸಿಬಿ ಪೊಲೀಸರಿಂದ ಮೂವರು ವಾಹನ ಚೋರರ ಸೆರೆ : 5 ದ್ವಿಚಕ್ರ ವಾಹನ ಸಹಿತಾ ರೂ.1,58,000 ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಹಾಗೂ ಇತರ ಜಿಲ್ಲೆಗಳಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ 5 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ನಗರದ ಕಸಬಾ ಬೆಂಗ್ರೆ ನಿವಾಸಿಗಳಾದ ಸಯ್ಯದ್ ಅಫ್ರಿದ್ (19), ಮೊಹಮ್ಮದ್ ಸಫ್ವಾನ್ (19) ಮತ್ತು ಮೊಹಮ್ಮದ್ ಗೌಸ್ (20) ಬಂಧಿತ ಆರೋಪಿಗಳು.

ದಿನಾಂಕ: 13-01-2019 ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ ಪೋರ್ಟ್ ರಸ್ತೆಯ ಸುಲಬ್ ಶೌಚಾಲಯದ ಬಳಿಯಲ್ಲಿ ನಂಬರ್ ಪ್ಲೇಟ್ ಅಳವಡಿಸದೇ ದ್ವಿಚಕ್ರ ವಾಹನಗಳೊಂದಿಗೆ ಅನುಮಾನಸ್ಪದ ರೀತಿಯಲ್ಲಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 2018 ನೇ ಆಗೋಸ್ಟ್ ತಿಂಗಳಲ್ಲಿ ನಗರದ ಜೋಡುಮಠ ರಸ್ತೆಯ ಯುನೈಟೆಡ್ ಫ್ಲಾಝಾ ಪಾರ್ಕಿಂಗ್ ಸ್ಥಳದಿಂದ ಕಳವುಗೈದ ಸುಝುಕಿ ಅಕ್ಸಸ್ ಸ್ಕೂಟರ್, 2018 ನೇ ಸೆಪ್ಟೆಂಬರ್ ತಿಂಗಳಲ್ಲಿ ನಗರದ ದಕ್ಷಿಣ ಧಕ್ಕೆಯ ಬಳಿಯಲ್ಲಿ ಪಾರ್ಕ್ ಮಾಡಿದ ಹೀರೋ ಹೊಂಡಾ ಸ್ಲೆಂಡರ್ ಬೈಕ್, 2016 ನೇ ಇಸವಿಯಲ್ಲಿ ಮಂಗಳೂರು ಓಲ್ಡ್ ಕೇಂಟ್ ರಸ್ತೆಯ ಕಟ್ಟಡವೊಂದರ ಬಳಿಯಲ್ಲಿ ಪಾರ್ಕ್ ಮಾಡಿದ ಯಮಹಾ ಎಫ್ ಝೆಡ್ ಬೈಕ್, 2018 ನೇ ಇಸವಿಯಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳವು ಗೈದ ಹೀರೋ ಹೊಂಡಾ ಸಿಡಿ100 ಬೈಕ್,2018 ನೇ ಆಗೋಸ್ತ್ ತಿಂಗಳಲ್ಲಿ ಹಾಸನ ಜಿಲ್ಲೆಯ ಪೆನ್ಶನ್ ಮೊಹಲ್ಲಾ ವ್ಯಾಪ್ತಿಯಿಂದ ಕಳವುಗೈದ ಹೊಂಡಾ ಡಿಯೋ ಸ್ಕೂಟರ್ ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,58,000/- ಆಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿಗಳ ಪೈಕಿ ಸಯ್ಯದ್ ಅಫ್ರಿದ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿದ್ದು, ಈ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದನು. ಇನ್ನೋರ್ವ ಆರೋಪಿ ಮೊಹಮ್ಮದ್ ಸಫ್ವಾನ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ, ಪಣಂಬೂರು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಯವರಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹೆಚ್ ಡಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.