ಕರಾವಳಿ

ಸುರತ್ಕಲ್ ಪರಿಸರದಲ್ಲಿ ಮೊಬೈಲ್ ಹಾಗೂ ಬ್ಯಾಟರಿ ಕಳವು ಪ್ರಕರಣ : ಮೂವರ ಸೆರೆ – 2.5 ಲಕ್ಷ ರೂ. ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಜನವರಿ.14: ನಗರದ ಹೊರವಲಯ ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ಮೊಬೈಲ್ ಹಾಗೂ ಬ್ಯಾಟರಿಗಳನ್ನು ಕಳವುಗೈಯುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಅಬ್ದುಲ್ ಅಮೀರ್ ಯಾನೆ ಅಮೀರ್ (20), ಮುಲ್ಕಿ ಕೊಲ್ನಾಡು ನಿವಾಸಿ ಅಬ್ದುಲ್ ಬಿಲಾಲ್(19), ಕಾಟಿಪಳ್ಳ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ತನ್ವೀರ್(24) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಮೊಬೈಲ್, ಆಯಕ್ಟೀವಾ ಹೊಂಡಾ, ಹೊಂಡಾ ಡಿಯೋ, ಗೂಡ್ಸ್ ಟೆಂಪೊ, ಆರು ಎಕ್ಸಿಡ್ ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ ಅಂದಾಜು 2.5 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ಜ.10ರಂದು ವಿಜಯಪುರ ಮೂಲದ ಸಂಶುದ್ದೀನ್ ಅಶಾಂಫಿರ್ ಮುಜಾವರ್ (56) ಎಂಬವರು ಪಣಂಬೂರು ನಂದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಲಗಿದ್ದರು. ಈ ಸಂದರ್ಭ ಮೂವರು ಆರೋಪಿಗಳು ಚಾಕು ತೋರಿಸಿ ಹೆದರಿಸಿ ಸಂಶುದ್ದೀನ್ ಅವರಲ್ಲಿದ್ದ ಮೊಬೈಲ್ ಮತ್ತು ಹಣ ನೀಡುವಂತೆ ಬೆದರಿಸಿದ್ದರು.

ಸಂಶುದ್ದೀನ್ ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಚಾಲಕರ ಹಣೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಮೊಬೈಲ್‌ನ್ನು ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಶ್ರೀನಿವಾಸ್ ಗೌಡ ನೇತೃತ್ವದ ರೌಡಿನಿಗ್ರಹ ದಳ ತಂಡವು ಕಾರ್ಯಾಚರಣೆ ನಡೆಸಿತು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಇದೇ ಆರೋಪಿಗಳ ತಂಡ ಈ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ರಾ.ಹೆ. 66ರ ಬದಿಯಲ್ಲಿ ನಿಲ್ಲಿಸಿದ್ದ ಕಬ್ಬು ಜ್ಯೂಸ್ ಜನರೇಟರ್‌ನ ಬ್ಯಾಟರಿ ಸೇರಿದಂತೆ ವಿವಿಧೆಡೆ ಬ್ಯಾಟರಿಗಳನ್ನು ಟೆಂಪೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಪಣಂಬೂರು ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್ ಕುಮಾರ್ ಎಂ.ಎನ್., ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹದಳದ ಅಧಿಕಾರಿ/ಸಿಬ್ಬಂದಿ, ಪಣಂಬೂರು ಮತ್ತು ಸುರತ್ಕಲ್ ಠಾಣಾ ಪೊಲೀಸ್ ಸಿಬ್ಬಂದಿ ಶ್ರಮಿಸಿದ್ದಾರೆ.

Comments are closed.