ಕರಾವಳಿ

ವಿದ್ಯಾದಾನ ಸರ್ವಶ್ರೇಷ್ಠ : ರಾಜ್ಯಪಾಲ ವಜೂಬಾಯಿ ರೂಡಾಬಾಯಿವಾಲ

Pinterest LinkedIn Tumblr

ಮಂಗಳೂರು ಜನವರಿ,06: ಎಲ್ಲ ದಾನಗಳಿಗಿಂತಲೂ ಮಿಗಿಲು ವಿದ್ಯಾದಾನ. ಬದುಕು ಕಟ್ಟಿಕೊಳ್ಳಲು ನೆರವಾಗುವ ವಿದ್ಯೆ ಎಲ್ಲ ಮಕ್ಕಳಿಗೂ ಲಭ್ಯವಾಗಿಸುವುದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯಪಾಲ ವಜೂಬಾಯಿ ರೂಡಾಬಾಯಿವಾಲ ಅವರು ಹೇಳಿದರು.

ಅವರು ದಡ್ಡಲಕಾಡು – ಮೇಲಂತಸ್ತಿನ ವಿದ್ಯಾದೇಗುಲ ಲೋಕಾರ್ಪಣೆ ಮಾಡಿ ಮಾತನಾಡಿ, ಭವಿಷ್ಯವನ್ನು ಬೆಳಗುವ ವಿದ್ಯೆ ಧೈರ್ಯ, ಸಾಧನೆಗೆ ಸೋಪಾನ. ಎಲ್ಲ ಮಕ್ಕಳಿಗೂ ಏಕರೂಪದ ವಿದ್ಯೆ ದೊರೆಯುವುದರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಬೇಧವಿರುವುದಿಲ್ಲ ಎಂದ ರಾಜ್ಯಪಾಲರು, ಏಕರೂಪದ ಶಿಕ್ಷಣದಿಂದ ಪ್ರತಿಭಾನ್ವಿತ ಮಕ್ಕಳು ತಮ್ಮ ಪ್ರತಿಭೆಗಳಿಂದ ದೇಶವನ್ನು ಬೆಳಗಬಲ್ಲರು ಎಂದರು.

ನಮ್ಮೆಲ್ಲರ ಮೂಲ ಹಳ್ಳಿಯೇ ಆಗಿದ್ದು, ಪ್ರತಿಯೋರ್ವ ಹೆತ್ತವರಿಗೂ ಇಂದಿನ ಕಾಲದಲ್ಲಿ ತಮ್ಮ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯಬೇಕೆಂಬ ಹಂಬಲ ತಪ್ಪಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು; ಪ್ರಜೆಗಳು ತಮ್ಮ ದನಿಯನ್ನು ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವುದರಿಂದ ರಾಜ್ಯ ಸರ್ಕಾರಗಳು ನೀತಿ ನಿರೂಪಣೆ ಮಾಡಲು ಸಾಧ್ಯವಾಗಲಿದೆ ಎಂದರು.

ದಡ್ಡಲಕಾಡು ಶಾಲೆ ವಿಶ್ವವಿದ್ಯಾನಿಲಯದ ಮಟ್ಟಕ್ಕೆ ಏರಲಿ; ಜ್ಞಾನಗಂಗೆಯು ಹರಿಯಲಿ ಎಂದು ಹಾರೈಸಿದ ಅವರು, ಗ್ರಾಮೀಣ ಶಾಲೆಗಳು ಇಂದು ಕಂಪ್ಯೂಟರೀಕರಣಗೊಂಡಿದ್ದು, ವಿದ್ಯೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇಲ್ಲಿನ ಗ್ರಾಮೀಣ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅವರು ವಿದ್ಯಾರ್ಥಿಗಳ ಏಳಿಗೆಯನ್ನು ಗಮನದಲ್ಲಿರಿಸಿ ಶಾಲೆಯನ್ನು ಅಭಿವೃಧ್ದಿ ಪಡಿಸಿರುವುದು ರಾಜ್ಯಕ್ಕೆ ಮಾದರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. 30ರಷ್ಟಿದ್ದ ಮಕ್ಕಳ ಸಂಖ್ಯೆ ಗ್ರಾಮೀಣರ ಸಹಕಾರದಿಂದಾಗಿ ಇಂದು 500ಕ್ಕೆ ಏರಿರುವುದು ನಿಜವಾದ ಸಾಧನೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನ ವಕೀಲರಾದ ಎಸ್ ರಾಜಶೇಖರ್ ಹಿಳಿಯೂರು ಪಾಲ್ಗೊಂಡರು. ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾೈಕ್ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪಾಲ್ಗೊಂಡರು. ಕೆರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿದರು.

Comments are closed.