ಕರಾವಳಿ

ಚರ್ಚ್ ಹಾಲ್‍ನಲ್ಲಿ ನಡೆದ ಪತ್ರಕರ್ತರ ಯಕ್ಷಗಾನದಲ್ಲಿ ಸಿಬ್ಬಂದಿಯ ದುರ್ವತನೆ : ಯಕ್ಷಗಾನ ಪ್ರದರ್ಶನದ ವೇಳೆ ಮೈಕ್, ಲೈಟ್ ಕಿತ್ತೆಸೆದು ಅವಮಾನ

Pinterest LinkedIn Tumblr

ಚರ್ಚ್ ಹಾಲ್‍ನಲ್ಲಿ ನಡೆದ ಪತ್ರಕರ್ತರ ಯಕ್ಷಗಾನದ ಸಂದರ್ಭ ಮ್ಯಾನೇಜರ್ ಕೆವಿನ್ ಮತ್ತು ಸಿಬ್ಬಂದಿ ವೇದಿಕೆಯಿಂದ ಮೈಕ್ ಕಿತ್ತೊಗೆಯುತ್ತಿರುವುದು.

ಮಂಗಳೂರು : ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಶನಿವಾರ ಮಧ್ಯಾಹ್ನ ಪ್ರೆಸ್‍ಕ್ಲಬ್ ಡೇ ಸಂಭ್ರಮದಲ್ಲಿ ಪತ್ರಕರ್ತರ ಯಕ್ಷಗಾನ ನಡೆಯುತ್ತಿದ್ದ ವೇಳೆ ಮ್ಯಾನೇಜರ್ ಧ್ವನಿವರ್ಧಕ ಮತ್ತು ರಂಗಸ್ಥಳದ ಲೈಟ್ ಆಫ್ ಮಾಡಿ, ಯಕ್ಷಗಾನಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿದೆ.

ಲೇಡಿಹಿಲ್ ಪ್ರೆಸ್ ಕ್ಲಬ್ ಮುಂಭಾಗದಲ್ಲಿರುವ ಕಾರಣ ಚರ್ಚ್ ಸಂಭಾಂಗದಲ್ಲಿ ಶನಿವಾರ ಬೆಳಗ್ಗೆಯಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ ಊಟ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬ್ರೇಕಿಂಗ್ ನ್ಯೂಸ್ ನಡುವೆಯೂ ಪತ್ರಕರ್ತರೆಲ್ಲ ಬಿಡುವು ಮಾಡಿಕೊಂಡು ಯಕ್ಷ ಗುರು ರಾಮಚಂದ್ರ ರಾವ್ ಎಲ್ಲೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ನರಕಾಸುರ ವಧೆ, ಮೈಂದ ದ್ವಿವಿಧ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. 1.45 ಗಂಟೆಯ ಯಕ್ಷಗಾನ ಅವಧಿ. ಆದರೆ ಸಭಾ ಕಾರ್ಯಕ್ರಮಗಳು ವಿಳಂಬವಾದ ಕಾರಣ ಮಧ್ಯಾಹ್ನ 1.30ರ ಬಳಿಕ ಯಕ್ಷಗಾನ ಆರಂಭವಾಗಿತ್ತು. 3 ಗಂಟೆಯಾಗುತ್ತಿದ್ದಂತೆಯೇ ಸಭಾಂಗಣದ ಅವಧಿ ಮುಗಿಯಿತು ಎಂದು ಮ್ಯಾನೇಜರ್ ಕೆವಿನ್ ಎಂಬಾತ ಧ್ವನಿವರ್ಧಕ ಬಂದ್ ಮಾಡಿಸಿದರು. ಸಿಬ್ಬಂದಿ ವೇದಿಕೆಯಿಂದ ಮೈಕಗಳನ್ನು ಎಳೆದುಕೊಂಡು ಹೋದರು.

ಮಹಿಳಾ ಭಾಗವತರು ಮೈಕ್ ಇಲ್ಲದೆಯೂ ಎದೆಗುಂದದೆ ಭಾಗವತಿಕೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಲೈಟ್ ಕೂಡಾ ಆಫ್ ಮಾಡಿದರು. ನೋವಾದರೂ ತೋರಿಸದ ಪತ್ರಕರ್ತರು ಧ್ವನಿವರ್ಧಕ, ಲೈಟ್ ಇಲ್ಲದೆಯೂ 20 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿ, ಮಂಗಲ ಹಾಡಿದರು.

ತಿರುಗುಬಾಣ: ಕರಾವಳಿ ಉತ್ಸವದಲ್ಲಿ ಜನರೇಟರ್ ವ್ಯವಸ್ಥೆ ಕೈಕೊಟ್ಟ ಧ್ವನಿವರ್ಧಕ ಇಲ್ಲದೆ ಲೈಟ್ ಇಲ್ಲದೆ ಸಂಗೀತ ಕಾರ್ಯಕ್ರಮ ಮಾಡಿದ ಕುರಿತು ಪತ್ರಕರ್ತರು ಎಲ್ಲರೂ ವರದಿ ಮಾಡಿದ್ದರು. ಆದರೆ ಇದೇ ಪತ್ರಕರ್ತರ ಕಾರ್ಯಕ್ರಮಕ್ಕೆ ನಿಯಮದ ನೆವ ಹೇಳಿ ಉದ್ದೇಶ ಪೂರ್ವಕವಾಗಿ ಲೈಟ್ ಆಫ್ ಮಾಡಿದರೂ ಪ್ರತಿಭಟಿಸಲು ಧೈರ್ಯ ಮೂಡಲಿಲ್ಲ.

ಚುನಾವಣೆ ನೀತಿ ಸಂಹಿತೆ ಸಂದರ್ಭ ರಾತ್ರಿ ಧ್ವನಿವರ್ಧಕ ಅನುಮತಿ ಇಲ್ಲದೆ ಹೋದ ಸಂದರ್ಭ ಉಡುಪಿ, ಮಂಗಳೂರು, ಉತ್ತರ ಕನ್ನಡದಲ್ಲಿ ಯಕ್ಷಗಾನಕೋಸ್ಕರ ಕಟ್ಟು ನಿಟ್ಟಿನ ಜಿಲ್ಲಾಧಿಕಾರಿಗಳೂ ಕೂಡಾ ನಿಯಮ ಸಡಿಲಿಕೆ ಮಾಡಿದ್ದರು. ಕಾರ್ಯಕ್ರಮ ಆದ ಕೂಡಲೇ ಬಾಗಿಲು ಹಾಕಿದ ಈ ಚರ್ಚ್ ಹಾಲ್‍ಗಳಿಗೆ 20 ನಿಮಿಷ ಅವಕಾಶ ನೀಡಿದರೆ ಕಳೆದುಕೊಳ್ಳುವುದೇನು ?

ಯಕ್ಷ ಜೀವನದಲ್ಲಿ ನೋಡಿಲ್ಲ:  ಸಂಘಟಕರಿಗೆ ಅವಮಾನ ಅಥವಾ ಪತ್ರಕರ್ತರಿಗೆ ಆದ ಅವಮಾನ ಅಲ್ಲ. ಯಕ್ಷಗಾನ ನಡೆಯುತ್ತಿದ್ದಾಗಲೇ ಮೈಕ್, ಲೈಟ್ ಕಿತ್ತು ಹಾಕುವುದು ಕಲೆಗೆ ಮಾಡುವ ಘೋರ ಅವಮಾನ. ನನ್ನ ಇಡೀ ಯಕ್ಷಗಾನ ಬದುಕಿನಲ್ಲಿ ಈ ರೀತಿ ಆಗಿಲ್ಲ. ಚರ್ಚ್ ಮಾಲೀಕರು, ಸಿಬ್ಬಂದಿ ಕ್ಷಮೆ ಯಾಚಿಸಬೇಕು ಎಂದು ಯಕ್ಷಗುರು ರಾಮಚಂದ್ರ ಭಟ್ ಎಲ್ಲೂರು ಆಗ್ರಹಿಸಿದ್ದಾರೆ.

ಪತ್ರಕರ್ತರ ಆಕ್ರೋಶ:  ಚರ್ಚ್ ಹಾಲ್‍ಗಳು ಯಕ್ಷಗಾನಕ್ಕೆ ಪೂರಕವಲ್ಲ. ಪ್ರತಿಧ್ವನಿಯಾಗಿ ಸರಿಯಾಗಿ ಅರ್ಥ ಹೇಳಲು ಆಗುವುದಿಲ್ಲ. ಆದರೆ ಪ್ರೆಸ್ ಕ್ಲಬ್‍ಗೆ ಹತ್ತಿರುವಾಗಿರುವುದರಿಂದ ಅಲ್ಲಿಯೇ ಪತ್ರಕರ್ತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನಕ್ಕೆ ಹಾಲ್ ಸಿಬ್ಬಂದಿ ಈರೀತಿ ಅವಮಾನ ಮಾಡಿರುವುದು ತಪ್ಪು. ಒಂದು 20 ನಿಮಿಷ ಮೈಕ್, ಲೈಟ್ ಹಾಕಿದ್ದರೆ ಅವರ ಗಂಟೇನು ಹೋಗುತ್ತಿತ್ತು. ಇದು ಖಂಡನೀಯ. ಇನ್ನು ಮುಂದೆ ಇಂಥ ಕಠೋರ ನಿಯಮ ಹೇರುವ, ಯಕ್ಷಗಾನ ಅವಮಾನ ಮಾಡುವ ಕಡೆಯ ಯಕ್ಷಗಾನ ಪ್ರದರ್ಶನ ನೀಡದೇ ಇರುವುದೇ ಒಳಿತು ಎಂದು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ಜಿತೇಂದ್ರ ಕುಂದೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳಮುಖಿಯರಿಗೂ ಅವಮಾನ:  ಇದೇ ಹಾಲ್‍ನಲ್ಲಿ ಹಿಂದೊಮ್ಮೆ ಮಂಗಳಮುಖಿಯರು ಅ.15ರಂದು ಸ್ವಾತಂತ್ರ್ಯೋತ್ಸವ ಸಂದಭ್ ಕಾರ್ಯಕ್ರಮ ಮಾಡುವಾಗ ಧ್ವಜಾರೋಹಣಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದಾಗ ದೇಶಭಕ್ತಿ ಎನ್ನುವುದರ ಅರಿವೆ ಮತ್ತು ಪರಿವೆ ಇಲ್ಲದೆ ನಿರಾಕರಿಸಲಾಗಿತ್ತು. ಅವರು ಬೇರೆಡೆ ಧ್ವ್ವಜಾರೋಹಣ ಮಾಡಿದ್ದರು.

ನೀರು ಬಂದ್ ಮಾಡಿದ್ದರು: ಇತ್ತೀಚೆಗೆ ಖಾಸಗಿ ಶುಭ ಸಮಾರಂಭ ನಡೆದಾಗ ಕಾರ್ಯಕ್ರಮ ಆಯೋಜಿಸಿದವರು ಎದುರು ಮಾತನಾಡಿದರು ಎಂಬ ಕಾರಣಕ್ಕೆ ಕೈ ತೊಳೆಯಲು ಹೋದಾಗ ನೀರಿನ ಗೇಟ್ ವಾಲ್ ಬಂದ್ ಮಾಡಿ ಅಮಾನವೀಯ ವರ್ತನೆ ತೋರಿದ್ದರು. ಕೊನೆಗೆ ಬಿಸಿಲೆರಿ ಬಾಟಲ್ ನೀರುಗಳನ್ನು ಖರೀದಿಸಿ ಅದರಲ್ಲಿ ಕೈ ತೊಳೆಯುವ ಹಾಗೆ ಆಗಿತ್ತು.

Comments are closed.