ಕರಾವಳಿ

ಕರಾವಳಿ ಉತ್ಸವ ಸಮಾರೋಪ : ಪ್ರೊ. ಹಿಲ್ಡಾ ರಾಯಪ್ಪನ್‌ಗೆ ಕರಾವಳಿ ಗೌರವ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ಡಿಸೆಂಬರ್.31: ನಗರದ ಪಣಂಬೂರು ಬೀಚ್‌ನಲ್ಲಿ ರವಿವಾರ ನಡೆದ ಕರಾವಳಿ ಉತ್ಸವ-ಪಣಂಬೂರು ಬೀಚ್ ಉತ್ಸವ ಗಳ ಸಮಾರೋಪ ಸಮಾರಂಭದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಬದುಕುವ ದಾರಿ ತೋರುತ್ತ ಬಂದಿರುವ ಪ್ರಜ್ಞಾ ಕೌನ್ಸಿಲಿಂಗ್‌ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್‌ ಅವರಿಗೆ 2018ರ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರಿಗೆ ಕರಾವಳಿ ಗೌರವ ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕರಾವಳಿ ಪ್ರದೇಶದಲ್ಲಿನ ಬೀಚ್‌ಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಆರ್ಥಿಕ ಚಲಾವಣೆ ಮತ್ತು ಆರ್ಥಿಕ ಸಬಲೀಕರಣದಿಂದ ಪ್ರವಾಸೋದ್ಯಮ ಬೆಳೆಯಲಿದೆ ಎಂದು ಹೇಳಿದರು.

ನೆರೆಯ ಗೋವಾ, ಕೇರಳದಲ್ಲಿ ಬೆರಳೆಣಿಕೆಯಷ್ಟೇ ಬೀಚ್‌ಗಳಿವೆ. ಅವುಗಳಿಂದಲೇ ಆ ರಾಜ್ಯಗಳಿಗೆ ಸಂಪತ್ತು ಹರಿದುಬರುತ್ತಿವೆ. ಕರಾವಳಿ ಪ್ರದೇಶದಲ್ಲೂ ಹಲವಾರು ಬೀಚ್‌ಗಳಿವೆ. ಕೇವಲ ಬೀಚ್‌ಗಳ ಸದುಪಯೋಗದಿಂದಲೇ ನಮ್ಮ ಕರಾವಳಿಯೂ ಅಭಿವೃದ್ಧಿ ಹೊಂದಲಿದೆ. ಇದಕ್ಕೆ ಕರಾವಳಿ ಜನತೆ ಬಂಡವಾಳ ವನ್ನು ಹೂಡಬೇಕು. ಆರ್ಥಿಕ ಸಬಲತೆಯಿಂದ ಸದೃಢತೆ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕರಾವಳಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳಿಂದ ಕರಾವಳಿ ಜನತೆ ಕಂಗೆಟ್ಟಿದೆ. ಜಿಲ್ಲೆಯಲ್ಲಿ ಆಕ್ರಮಣ ಮತ್ತು ಆಕ್ರೋಶ ಶಾಶ್ವತವಲ್ಲ. ಆಕ್ರಮಣದಿಂದ ಕರಾವಳಿಯಲ್ಲಿ ಬದುಕಲಾಗುವುದಿಲ್ಲ. ಎಲ್ಲರೂ ಸೌಹಾರ್ದದಿಂದ ಬಾಳಬೇಕು ಎಂದು ಕರೆ ನೀಡಿದರು.

ಇಲ್ಲಿಯ ಜನತೆ ಐದಾರು ಭಾಷೆ ಮಾತನಾಡಬಲ್ಲರು. ಕರಾವಳಿ ಬಹು ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಹೀಗಾಗಿ ತುಳುನಾಡಿನಲ್ಲಿ ಬದುಕುವುದೇ ವಿಶೇಷ. ಸೌಹಾರ್ದದಲ್ಲಿ ಬದುಕಿ ಉತ್ತಮ ಜೀವನ ನಡೆಸಿ ಎಂದು ನಮ್ಮ ಹಿರಿಯರು ಪಾಠ ಹೇಳಿಕೊಟ್ಟಿದ್ದಾರೆ ಎಂದು ಹಿಲ್ಡಾ ರಾಯಪ್ಪನ್‌ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಅಪರ ಜಿಲ್ಲಾಧಿಕಾರಿ ಕುಮಾರ್, ಪಣಂಬೂರು ಬೀಚ್ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್‌, ಪಣಂಬೂರು ಬೀಚ್‌ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್‌ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.

Comments are closed.