ಕರಾವಳಿ

ಸಾಸ್ತಾನ: ಬಾರ್ ಟೆರೆಸ್ಸಿನಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ, ಶವ ಕೆ.ಎಂ.ಸಿ.ಗೆ ರವಾನೆ

Pinterest LinkedIn Tumblr

ಉಡುಪಿ: ಬಾರೊಂದರ ಟೆರಸ್ (ಮೇಲ್ಚಾವಣಿ)ನಲ್ಲಿ ಯುವಕನೋರ್ವನ ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಇದೊಂದು ಕೊಲೆಯೆಂಬ ಶಂಕೆ ವ್ಯಕ್ತವಾಗಿದೆ. ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ
ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು ಗುರುವಾರ ಬೆಳಿಗ್ಗೆ ಘಟ‌ನೆ ಬೆಳಕಿಗೆ ಬಂದಿದೆ.

ಮಾಬುಕಳ ನಿವಾಸಿ ಹರೀಶ್ ಕುಂದರ್(27) ಮೃತ ಯುವಕನಾಗಿದ್ದು ಈತ ಇಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದ.

ಸಾಸ್ತಾನದ ಪೇಟೆಯಲ್ಲಿರುವ ಮಧುರಾ ಹೆಸರಿನ ಬಾರ್ ಮೇಲಂತಸ್ತಿನಲ್ಲಿ ಬೆಳಿಗ್ಗೆ ಯುವಕನೋರ್ವನ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಶೀಲನೆ ವೇಳೆ ಇದು ಸಮೀಪದೂರಿನ ಹರೀಶ್ ಎಂಬಾತನ ಶವ ಎಂಬುದು ಖಾತ್ರಿಯಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಪರಿಶೀಲನೆ ನಡೆಸಿದ್ದು ಕಾಲು ಭಾಗದಲ್ಲಿ ರಕ್ತಗಾಯ ಕಂಡುಬಂದಿದೆ. ಸ್ಥಳೀಯರು ಕೂಡ ಇದೊಂದು ಕೊಲೆ ಎಂಬುದಾಗಿ ಗುಮಾನಿ ವ್ಯಕ್ತಪಡಿಸಿದ್ದು ಬಾರಿನ ಮೇಲ್ಬಾಗದಲ್ಲಿ ಕುಡಿದು ಗಲಾಟೆ ನಡೆದು ಬಳಿಕ ಈ ಘಟನೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಅಥವಾ ಆಕಸ್ಮಿಕ ಸಾವೇ ಎಂಬುದು ತನಿಖೆ ಬಳಿಕ ತಿಳಿಯಬೇಕಿದೆ.

ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆ ಶವವನ್ನು ಮಣಿಪಾಲ ಕೆ.ಎಂ.ಸಿ‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೋಟ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.