ಕರಾವಳಿ

ಕೋಡಿಯಲ್ಲಿ ಮರಳು ಸಾಗಾಟದ ಲಾರಿ ತಡೆದು ಸ್ಥಳೀಯರ ಆಕ್ರೋಷ; ಶಾಸಕ ಹಾಲಾಡಿ ಭೇಟಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಡಿಯ ಅಳಿವೆ ಪ್ರದೇಶದ ಬಳಿಯಲ್ಲಿನ ಸಮುದ್ರ ತೀರದಲ್ಲಿ ಮರಳು ತುಂಬಿ ಸಾಗಿಸುತ್ತಿರುವ ಲಾರಿಗಳನ್ನು ಸ್ಥಳೀಯರು ತಡೆದು ಆಕ್ರೋಷ ವ್ಯಕ್ತಪಡಿಸಿದ್ದು ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿಯಿಲ್ಲದ ನಡುವೆಯೂ ಮರಳು ತೆಗೆದು ಕಡಲ ತೀರವನ್ನು ಹಾಳುಗೈಯಲಾಗುತ್ತಿದೆ. ತೀರದಲ್ಲಿ ಬೃಹಾತಕಾರದ ಹೊಂಡ ಈಗಾಗಲೇ ನಿರ್ಮಾಣವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಅಹವಾಲು ಕೇಳಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಥಳ ವೀಕ್ಷಣೆ ನಡೆಸಿ ಫೋನ್ ಮುಖಾಂತರ ಜಿಲ್ಲಾಧಿಕಾರಿಯವರ ಬಳಿಯಲ್ಲಿಯೇ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು.

ಮಾಜಿ ಪುರಸಭೆ ಸದಸ್ಯ ಸಂದೀಪ್ ಕೋಡಿ, ಸ್ಥಳೀಯರಾದ ಸುನೀಲ್ ಪೂಜಾರಿ, ಸುಧಾಕರ್ ಮೊದಲಾದವರು ಶಾಸಕರಿಗೆ ಸ್ಥಳೀಯವಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು. ಕೂಡಲೇ ಮರಳುಗಾರಿಕೆ ನಿಲ್ಲಿಸಿ ಊರನ್ನು ಉಳಿಸಿ ಎಂದು ಊರಿನವರ ಪರವಾಗಿ ಮನವಿ ಮಾಡಿದರು. ಸ್ಥಳದಲ್ಲಿದ್ದ ಮಹಿಳೆಯರು ಕೂಡ ಶಾಸಕರ ಬಳಿ ತಮ್ಮ ಅಹವಾಲು ಹೇಳಿಕೊಂಡರು. ಇನ್ನು ಇದೇ ವೇಳೆ ಈ ಭಾಗದ ಕೆಲವು ಮುಖಂಡರೆನಿಸಿಕೊಂಡವರು ನಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡುತ್ತಿಲ್ಲವೆಂದಾಗ ಶಾಸಕರ ಸಮ್ಮುಖದಲ್ಲಿಯೇ ಎರಡು ಬಣವಾಗಿ ಏರ್ಪಟ್ಟು ಒಂದಷ್ಟುಮಾತಿನ ಚಕಮಕಿ ನಡೆದಿದ್ದು ಬಳಿಕ ಶಾಸಕರು ಎಲ್ಲರನ್ನೂ ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಬ್ರೇಕ್ ವಾಟರ್ ಕಾಮಗಾರಿ ಹಾಗೂ ಡ್ರೆಜ್ಜಿಂಗ್ ಮಾಡಿದ ಮರಳನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳಲು ಶರತ್ತುಬದ್ಧವಾಗಿ ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದರು. ಸಮುದ್ರ ಮಟ್ಟಕ್ಕಿಂತ ಜಾಸ್ಥಿ, ಅಪಾಯದ ರೀತಿಯಲ್ಲಿ ಅವೈಜ್ಞಾನಿಕವಾಗಿ ಮರಳು ತೆಗೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿಯೂ ಮಾತನಾಡಿದ್ದು ಕೂಡಲೇ ಮರಳು ಸಾಗಾಟ ನಿಲ್ಲಿಸುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಕೃತಿಕವಾಗಿ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.