ಕರಾವಳಿ

ಕರಾವಳಿ ಉತ್ಸವ ಕಾರ್ಯಕ್ರಮಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಂದ ಚಾಲನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್. 21 : ಪ್ರಸಕ್ತ ವರ್ಷದ ದ.ಕ. ಜಿಲ್ಲಾ ಕರಾವಳಿ ಉತ್ಸವಕ್ಕೆ ಇಂದು ಚಾಲನೆ ನೀಡಲಾಗಿದ್ದು, ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ಶುಕ್ರವಾರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಕರಾವಳಿ ಉತ್ಸವ ಪ್ರಯುಕ್ತ ಅಯೋಜಿಸಲಾದ ವಸ್ತುಪ್ರದರ್ಶನ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಡಿ. 21ರಿಂದ 45 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್‍ಮೆಂಟ್‍ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಇರಲಿವೆ.

ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಮೊಯ್ಲಿ, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್., ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಡಾ. ಸೆಲ್ವಮಣಿ, ಎಡಿಸಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ನರೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿ ಉತ್ಸವದ ಉದ್ಘಾಟನೆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ಮಂಗಳೂರು ಕೇಂದ್ರ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ಎ.ಬಿ ಶೆಟ್ಟಿ ಸರ್ಕಲ್, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನ್ ಕಟ್ಟೆ ವೃತ್ತ, ಕಾರ್ನಾಡ್ ಸದಾಶಿವ ರಾವ್ ರಸ್ತೆ (ಕೆ.ಎಸ್. ರಾವ್ ರೋಡ್), ಬಿಷಪ್ ಹೌಸ್, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ಸರ್ಕಲ್), ಪಿ.ವಿ.ಎಸ್. ಜಂಕ್ಷನ್, ಮಹಾತ್ಮಾ ಗಾಂಧಿ ರಸ್ತೆ, ಬಳ್ಳಾಲ್‌ಬಾಗ್, ಲಾಲ್‌ಭಾಗ್ ಮೂಲಕ ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಂಡಿತ್ತು.

ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಕರಾವಳಿಯ ಸಾಂಸ್ಕೃತಿಕ ಸಂಭ್ರಮದೊಂದಿಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿಗಳನ್ನೊಳಗೊಂಡಿದ್ದು, ರಾಜ್ಯದ ಸುಮಾರು 80ಕ್ಕೂ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮ:

ಕರಾವಳಿ ಉತ್ಸವದ ಪ್ರಮುಖ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಲ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್ ಎರಡು ಕಡೆ ನಡೆಯಲಿವೆ. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಕಲಾವಿದರ, ಖ್ಯಾತಿವೆತ್ತ ಕಲಾ, ಸಾಂಸ್ಕೃತಿಕ ತಂಡಗಳಿಂದ, ಕಲಾವಿದರಿಂದ ಆಕರ್ಷಕ, ಕಾರ್ಯಕ್ರಮಗಳು ನಡೆಯಲಿವೆ. ಯುವ ಉತ್ಸವ, ನಗೆ ಹಬ್ಬ, ಸಂಗೀತ, ನೃತ್ಯ, ನಾಟಕ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಕ್ರೀಡಾ ಪಂದ್ಯಾಟಗಳು: ಕರಾವಳಿ ಉತ್ಸವ ಅಂಗವಾಗಿ ಜ. 28 ರಂದು ಕರಾವಳಿ ಉತ್ಸವ ಮೈದಾನ ಪಕ್ಕದಲ್ಲಿ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಮುಕ್ತ ಹ್ಯಾಂಡ್‍ಬಾಲ್, ಬಾಕ್ಸಿ ಪಂದ್ಯಾವಳಿ, ವಿಕಲಚೇತನರ ಕ್ರೀಡಾಕೂಟ, ಲಗೋರಿ ಪಂದ್ಯಾಟ ನಡೆಯಲಿದೆ.

ಜ.29ರಂದು ನಗರದ ಡಾನ್ ಬಾಸ್ಕೋ ಹಾಲ್‍ನಲ್ಲಿ ಪುರುಷರ ಹಾಗೂ ಮಹಿಳೆಯರಿಗೆ ಮುಕ್ತ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ನಗದು ನೀಡಲಾಗುವುದು. ಶಾಲಾ ಕಾಲೇಜುಗಳ ಆಸಕ್ತ ಕ್ರೀಡಾ ಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಬೀಚ್ ಉತ್ಸವ:

ಬೀಚ್ ಉತ್ಸವವು ಜನವರಿ 28ರಿಂದ 30ರವರೆಗೆ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಅನುಭವಿ ನೃತ್ಯ ತಂಡಗಳಿಂದ ಆಕರ್ಷಕ ನೃತ್ಯ ಸ್ಪರ್ಧೆ, ಸಂಗೀತ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ, ಬೆಳಿಗ್ಗೆ ಬೀಚ್ ವಾಲಿಬಾಲ್ ಪಂದ್ಯಾಟ, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ, ಡ್ರಮ್ ಜಾಮ್ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಕರ್ಷಕ ತಿಂಡಿ ತಿನಿಸುಗಳ ಆಹಾರೋತ್ಸವ ಕೂಡಾ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ.

ಜ.22ರಿಂದ 24ರವರೆಗೆ ಕದ್ರಿ ಪಾರ್ಕ್‍ನಲ್ಲಿ ಮಂಗಳೂರಿನ ಇತಿಹಾಸ, ಪರಂಪರೆ ಸಾರುವ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ. ಅದೇ ರೀತಿ, ಸ್ವಾತಂತ್ರ್ಯಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳ ಕೃತಿಗಳ ಮಾಹಿತಿ ಮತ್ತು ಪ್ರದರ್ಶನ ಕೂಡಾ ಇರಲಿದೆ.

ಜ.30ರಂದು ಸಮಾರೋಪ : ಮಣಿಕಾಂತ್ ಕದ್ರಿ ಲೈವ್

ಜ.30ರಂದು ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಸಮಾರೋಪ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಬಳಿಕ ಖ್ಯಾತ ಸಂಗೀತಗಾರ ಮಣಿಕಾಂತ್ ಕದ್ರಿ ಲೈವ್ ನಡೆಯಲಿದೆ.

Comments are closed.