ಕರಾವಳಿ

ಪ್ರಧಾನಿ ಮೋದಿಗೆ ವ್ಯಾಪಕ ಬೆಂಬಲ : ಮಂಗಳೂರಿನಲ್ಲಿ ‘ಟೀಂ ಮೋದಿ’ ಸಂಘಟನೆಗೆ ಚಾಲನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.17: ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಟೀಂ ಮೋದಿ ಸಂಘಟನೆ ಆರಂಭಗೊಡಿದ್ದು, ‘ಟೀಂ ಮೋದಿ’ ಸಂಘಟನೆಗೆ ರವಿವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ‘ಟೀಂ ಮೋದಿ’ ಸಂಘಟನೆಗೆ ಕಾಮನ್‌ವೆಲ್ತ್ ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಪ್ರದೀಪ್ ಕುಮಾರ್ ರವಿವಾರ ಚಾಲನೆ ನೀಡಿದರು.

ಪ್ರದೀಪ್ ಕುಮಾರ್ ಅವರು ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಹಂಪನಕಟ್ಟೆಯಲ್ಲಿ ಚಾಲನೆ ನೀಡಿದರು. ಬಳಿಕ ಬೃಹತ್ ಸಂಖ್ಯೆಯ ಮೋದಿ ಅಭಿಮಾನಿಗಳ ಉಪಸ್ಥಿತಿಯಲ್ಲಿ ಹಂಪನಕಟ್ಟೆಯಿಂದ ಕೇಂದ್ರ ಮೈದಾನದ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

ಈ ವೇಳೆ ಟೀಂ ಮೋದಿ ವಕ್ತಾರ ಅರುಣ್ ಶೇಟ್ ಮಾತನಾಡಿ, 2014ರ ಹಿಂದೆ ಮಾಧ್ಯಮಗಳಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯೇ ಕಣ್ಣ ಮುಂದೆ ಬರುತ್ತಿತ್ತು. ಆದರೆ ಇಂದು ಭಾರತ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದರು.

ಟೀಮ್ ಮೋದಿ ಕಾರ್ಯಕರ್ತರಾದ ಸಮಿತ್, ಸುಶಾಂತ್, ಅಶೋಕ್, ದಯಾ ಆಕಾಶ್, ಚೈತ್ರಾ, ಭವ್ಯಾ,ಶ್ರೀಪತಿ, ಮುದ್ರಾ ಯೋಜನೆಯ ಫಲಾನುಭವಿ ಸುಮಾ ಕೋಡಿಕಲ್ ಮತ್ತಿತರರಿದ್ದರು.

ಬಳಿಕ ಮೋದಿ ಸಾಧನೆಗಳ ಬಗ್ಗೆ ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆ ನಡೆದ ಕಾರ್ಯಕ್ರಮಕ್ಕೆ ಮೀನುಗಾರ ಮಹಿಳೆಯರು ಚಾಲನೆ ನೀಡಿದರು. ಬಳಿಕ ಮೋದಿ ಬಾಲ್ಯದಲ್ಲಿ ಚಹಾ ಮಾರುತ್ತಿದ್ದುದ್ದನ್ನು ನೆನೆಪಿಸುವ ಅಂಗವಾಗಿ ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆ ಮತ್ತು ಬಸ್ ನಿಲ್ದಾಣದಲ್ಲಿ ಚಹಾ ವಿತರಿಸಲಾಯಿತು. ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಟೀಂ ಮೋದಿಗೆ ಚಾಲನೆ ನೀಡಲಾಯಿತು.

Comments are closed.