ಕರಾವಳಿ

‘ಸೀ ವಾಕ್’ ಆಗಿದೆ ಕೋಡಿ ಬ್ರೇಕ್ ವಾಟರ್; ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೋಡಿ ಕಡಲತಡಿ!

Pinterest LinkedIn Tumblr

ಕುಂದಾಪುರ: ಸಂಜೆ ಆಯ್ತೆಂದ್ರೆ ಇಲ್ಲಿ ಪ್ರವಾಸಿಗರ ದಂಡು. ಒಂದೆಡೆ ಬಾನಂಗಳದಲ್ಲಿ ಬಾನಾಡಿಗಳ ಕಲರವ. ಕೆಂಬಣ್ಣದ ಸೂರ್ಯ ಸಮುದ್ರದಲ್ಲಿ ಮುಳುಗುವ ವಿಹಂಗಮ ನೋಟ. ಕುಂದಾಪುರ ಕೋಡಿ ಕಡಲ ತಡಿಯಲ್ಲಿ ನಿರ್ಮಾಣಗೊಂಡ ಸೀ ವಾಕ್ ಜನರ ಆಕರ್ಷಣೀಯ ಕೇಂದ್ರವಾಗಿದೆ.

ಹೇಳಿಕೇಳೀ ಕುಂದಾಪುರ ವಿವಿಧ ಕ್ಷೇತ್ರಗಳಲ್ಲಿ ಅಭಿವ್ರದ್ಧಿ ಹೊಂದಿ ದಿನೇದಿನೇ ಬೆಳೆಯುತ್ತಿದೆ. ಧಾರ್ಮಿಕ, ಶೈಕ್ಷಣಿಕ, ವ್ಯವಹಾರಿಕವಾಗಿಯೂ ಕುಂದಾಪುರ ದಾಪುಗಾಲಿಡುತ್ತಿದ್ದು ಪ್ರಾಕ್ರತಿಕ ಕೊಡುಗೆಗಳ ವೈಭೋಗವನ್ನೇ ಹೊದ್ದಿರುವ ಕುಂದಾಪುರ ಪ್ರವಾಸೋಧ್ಯಮದತ್ತವೂ ಬೆಳೆಯಬೇಕಿದೆ. ಪ್ರವಾಸೋಧ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು ಕುಂದಾಪುರದ ಕೋಡಿ ಪ್ರದೇಶ. ರಜಾ ದಿನಗಳು ಸೇರಿದಂತೆ ನಿತ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುವುದು ಕುಂದಾಪುರ ಕೋಡಿ ಕಡಲ ಕಿನಾರೆ. ಇಷ್ಟು ಸಮಯ ಕೇವಲ ದಡದಲ್ಲಿ ಕೂತು ಸಮುದ್ರ, ಸೂರ್ಯಾಸ್ತ ವೀಕ್ಷಿಸಿ ಕಿನಾರೆಯಲ್ಲಿ ಮರಳಾಟ ಆಡುತ್ತಿದ್ದ ಮಂದಿಗೆ ಇನ್ನು ಬಂಪರ್ ಆಫರ್ ಇದೆ.

ಸಮುದ್ರದ ನಡುವೆಯೇ ನಡೆದು ಸಾಗಿ ಸೂರ್ಯಾಸ್ತ ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮಂದಿಯ ಆಸೆ ನನಸಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿರುವ ನಿಟ್ಟಿನಲ್ಲಿ ಆ ಭಾಗದಲ್ಲಿ ವ್ಯಾಪಾರ ವಹಿವಾಟು ಹೆಚ್ಚಳವಾಗಿದೆ. ಮುಂಜಾನೆ, ಮುಸ್ಸಂಜೆ ವಾಕಿಂಗ್ ಮಾಡಲು ಪ್ರಸಕ್ತ ಸ್ಥಳ ಇದಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕಡಲ್ಕೊರೆತ ತಡೆಗೆ ಗಂಗೊಳ್ಳಿ ಹಾಗೂ ಕೋಡಿಯಲ್ಲಿ ನಿರ್ಮಿಸಲಾದ ಬ್ರೇಕ್ ವಾಟರ್‌ನ್ನು ಮಲ್ಪೆ ಮಾದರಿಯಲ್ಲಿ ಸೀ ವಾಕ್ ಆಗಿ ಪರಿವರ್ತಿಸಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಸೇರಿದಂತೆ ಕುಂದಾಪುರ ಪುರಸಭೆ ಇದಕ್ಕೆ ಸಹಕಾರ ನೀಡಲಿವೆ.

ಕಡಲ್ಕೊರೆತ ಶಾಶ್ವತ ಪರಿಹಾರ, ಅಪಾಯಕಾರಿ ಅಳಿವೆ ಅಗಲಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 102 ಕೋ.ರೂ. ವೆಚ್ಚದಲ್ಲಿ ಕೋಡಿಯಲ್ಲಿ ಸುಮಾರು 1 ಕಿಲೋಮೀಟರ್ ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ ಬ್ರೇಕ್ ವಾಟರ್ ಯೋಜನೆ 2015ರಲ್ಲಿ ಮಂಜೂರಾಗಿತ್ತು. ಟ್ರೆಟ್ರಾಫೈಡ್ ಮೂಲಕ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ಕಾಮಗಾರಿ ಪ್ರಸ್ತುತ ಪೂರ್ಣಗೊಂಡಿದೆ. ಕೋಡಿ ಹಾಗೂ ಗಂಗೊಳ್ಳಿಯ ಬ್ರೇಕ್‌ವಾಟರ್‌ಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಲ್ಪೆಯಲ್ಲಿ ಈಗಾಗಲೇ ಸೀವಾಕ್ ನಿರ್ಮಿಸಲಾಗಿದ್ದು, ಅದೇ ಮಾದರಿಯಲ್ಲಿ ಬ್ರೇಕ್ ವಾಟರ್‌ಗಳ ಬದಿಗಳಿಗೆ ಸೈಡ್‌ವಾಲ್ ನಿರ್ಮಿಸಿ, ಪ್ರವಾಸಿಗರಿಗೆ ನಡೆದಾಡಲು, ಕಡಲ ತೆರೆಗಳ ಅಬ್ಬರ – ಇಳಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಪ್ರವಾಸಿ ವಾಹನ ನಿಲುಗಡೆಗೆ ಸಮೀಪದಲ್ಲೇ ವ್ಯವಸ್ಥೆ, ಹೈ ಮಾಸ್ಟ್ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಹಿತ ಎಲ್ಲ ಮೂಲ ಸೌಕರ್‍ಯಗಳನ್ನು ಒದಗಿಸಿ ವಿಶಾಲವಾದ ಕೋಡಿ ಕಡಲ ಕಿನಾರೆಯನ್ನು ಪ್ರವಾಸೋಧ್ಯಮ ಕೇಂದ್ರವನ್ನಾಗಿ ಮಾಡುವ ಗುರಿಯಿಟ್ಟುಕೊಳ್ಳಲಾಗಿದೆ ಎಂದು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.

ಸೀ ವಾಕ್ ಕಾನ್ಸೆಪ್ಟ್ ಆರಂಭಿಕ ಹೆಜ್ಜೆಯಲ್ಲೇ ಜನರಿಂದ ಉತ್ತಮ ರೆಸ್ಫಾನ್ಸ್ ಪಡೆದಿದೆ. ಮೂಲಸೌಕರ್ಯ ಹೆಚ್ಚಿಸಿ ಇನ್ನಷ್ಟು ಪ್ರಚಾರ ಜಾಸ್ಥಿಗೊಳಿಸಿದ್ದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕೋಡಿಯು ಪ್ರವಾಸೋಧ್ಯಮದಲ್ಲಿ ಇನ್ನೊಂದು ಹೊಸ ದಾಖಲೆ ಬರೆಯಲಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.