ಕರಾವಳಿ

ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿದ್ದ ಮಿಥುನ್ ರೈಗೆ ಮತ್ತೆ ಒಲಿದ ಪಟ್ಟ

Pinterest LinkedIn Tumblr

ಮಂಗಳೂರು, ನವೆಂಬರ್.16: ಪಕ್ಷದ ಚಟುವಟಿಕೆ ಹಾಗು ಸಂಘಟನೆಯಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿದ್ದ ಮಿಥುನ್ ರೈ ಅವರ ಅಮಾನತು ಆದೇಶವನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಹಿಂಪಡೆದಿದೆ.

ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ, ನೋಟೀಸು ನೀಡಿದ್ದಕ್ಕೆ ಉತ್ತರ ನೀಡಿಲ್ಲ ಹಾಗು ಪಕ್ಷದ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂಬ ಕಾರಣಗಳಿಗಾಗಿ ಮಿಥುನ್ ರೈ ಸಹಿತ ರಾಜ್ಯದ 10 ಜಿಲ್ಲೆಗಳ ಯುವ ಕಾಂಗ್ರೆಸ್ ಅಧ್ಯಕ್ಷರನ್ನು, ರಾಜ್ಯ ಯುವ ಕಾಂಗ್ರೆಸ್ ನ ಎಂಟು ಮಂದಿ ಕಾರ್ಯದರ್ಶಿಗಳನ್ನು ಹಾಗು ರಾಜ್ಯ ಯುವ ಕಾಂಗ್ರೆಸ್ ನ ಒಬ್ಬ ಉಪಾಧ್ಯಕ್ಷರನ್ನು ಅಮಾನತುಗೊಳಿಸಿ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರವೀಂದ್ರದಾಸ್ ನ.5ರಂದು ಆದೇಶ ಹೊರಡಿಸಿದ್ದರು.

ಈ ಬಗ್ಗೆ ಅದೇ ದಿನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಮಿಥುನ್ ರೈ ಅವರು, ” ಅಕ್ಟೊಬರ್ 19 ಕ್ಕೆ ಒಂದು ಸಭೆ ಕರೆದಿದ್ದರು. ನವರಾತ್ರಿ ಸಂದರ್ಭ ಆಗಿದ್ದ ಕಾರಣ ಆ ಸಭೆಯಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನೋಟೀಸ್ ನೀಡಿದ್ದರು. ಅದಕ್ಕೆ ನಾನು ಉತ್ತರ ನೀಡುತ್ತೇನೆ. ಅದಕ್ಕೂ ಮೊದಲು ಜೈಪುರದಲ್ಲಿ ನಡೆದ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ” ಎಂದು ತಿಳಿಸಿದ್ದರು.

ಮಿಥುನ್ ರೈ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿಂದ ಮಾಜಿ ಸಚಿವ ಅಭಯಚಂದ್ರ ಅವರಿಗೇ ಪಕ್ಷ ಮತ್ತೆ ಅವಕಾಶ ನೀಡಿತ್ತು. ಆದರೆ ಮೂಡಬಿದ್ರೆಯಿಂದ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಮಿಥುನ್ ರೈ ಇದರಿಂದ ಬೇಸರಿಸಿಕೊಂಡಿದ್ದರು.

ಇದೀಗ ಮಿಥುನ್ ರೈಯವರನ್ನು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿದ್ದ ಆದೇಶವನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಹಿಂಪಡೆದಿದೆ. ತಕ್ಷಣದಿಂದಲೇ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಅವರಿಗೆ ಸೂಚಿಸಲಾಗಿದ್ದು, ಮಿಥುನ್ ರೈ ಸಹಿತ ಇತರ ಮೂವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.

Comments are closed.