
ಮಂಗಳೂರು, ನವೆಂಬರ್.13: ನಗರದ ಜುವೆಲ್ಲರಿ ಮಾಲಕನ ದರೋಡೆಗೆ ಸಂಚು ರೂಪಿಸಿದ ಅಂತರಾಜ್ಯ ದರೋಡೆಕಾರರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶೇಖ್ ಮಹಮ್ಮದ್ ಅನ್ಸಾರ್ ಯಾನೆ ಅನ್ಸಾರ್ (34), ಕೆ.ಸಿ.ರೋಡ್ ನಿವಾಸಿ ರಮೀಝ್ (21), ಮುಹಮ್ಮದ್ ತೌಸೀಫ್ ಯಾನೆ ತಚ್ಚು (24), ಉಬೈದುಲ್ಲಾ (25), ಮುಹಮ್ಮದ್ ತೌಸೀಫ್ ಯಾನೆ ತೌಸೀಫ್ (25), ಮುಹಮ್ಮದ್ ಅಲಿ (25), ಅಂತಾರಾಜ್ಯ ಆರೋಪಿಗಳಾದ ಅಹ್ಮದ್ ಕಬೀರ್ (30), ಅಸ್ಗರ್ ಅಲಿ (27), ಸಾಬೀತ್ (19), ಮುಹಮ್ಮದ್ ಸಬಾದ್ (22), ಅಮೀರ್ ಅಲಿ (19) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ಮಾರುತಿ 800 ಕಾರು ನಂಬ್ರ: ಕೆಎ-02-ಝಡ್-4617 , ಕಾರಿನ ಅಂದಾಜು ಮೌಲ್ಯ ರೂಪಾಯಿ 50,000/- , ಮಾರುತಿ ರಿಟ್ಜ್ ಕಾರಿನ ಅಂದಾಜು ಮೌಲ್ಯ ರೂಪಾಯಿ 03 ಲಕ್ಷ, ಕಬ್ಬಿಣದ ಚೂರಿ- 1 , ಕಬ್ಬಿಣದ ರಾಡ್- 1 , ಕಬ್ಬಿಣದ ರಾಡ್- 1 , ಕಾಟು ಮರದ ಸೋಂಟೆ -1 , ಕಬ್ಬಿಣದ ರಾಡ್- 1. , ಕಾಟು ಮರದ ಸೋಂಟೆ- 1 , ಕಾಟು ಮರದ ಸೋಂಟೆ-1 , ನಕಲಿ ನಂಬರ್ ಪ್ಲೇಟ್ -4 , ನಗದು ರೂ.16050/- ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,66,050 ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ತಂಡವೊಂದು ದರೋಡೆ ನಡೆಸುವ ಸಿದ್ಧತೆಯಲ್ಲಿ ಇರುವ ಬಗ್ಗೆ ಖಚಿತ ಪಡೆದ ಎಸಿಪಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದಗೌಡ ಭಜಂತ್ರಿ ಮತ್ತು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ರಥಬೀದಿಯ ವೈಷ್ಣವಿ ಜುವೆಲ್ಲರಿ ಮಾಲಕ ಸಂತೋಷ್ ಎಂಬವರ ನಗದು ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದರೋಡೆ ಸಂಚಿನಲ್ಲಿದ್ದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಲ್ಲೆ ಪ್ರಕರಣ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬಗ್ಗೆ ತನಿಖೆಯ ವೇಳೆ ತಿಳಿದುಬಂದಿದೆ.
ಸುಮಾರು 20 ದಿನಗಳ ಹಿಂದೆ ರಥಬೀದಿಯ ಇದೇ ವೈಷ್ಣವಿ ಜುವೆಲ್ಲರಿ ಮಾಲಕನಿಗೆ ಸೇರಿದ ನಗದನ್ನು ಬೇರೆ ತಂಡವೊಂದು ಲೂಟಿ ಮಾಡಿದ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎಸಿಪಿ ಕೆ.ರಾಮರಾವ್ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿ ಎಎಸ್ಸೈ ಮೋಹನ ಕೆ.ವಿ., ಎಚ್.ಸಿ.ಗಳಾದ ಗಿರೀಶ್ ಬೆಂಗ್ರೆ, ಸುನೀಲ್‌ಕುಮಾರ್, ರೆಜಿ ವಿ.ಎಂ., ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್, ಮಹೇಶ್, ಮುಹಮ್ಮದ್ ಶರೀಫ್, ದಯಾನಂದ, ಸುಧೀರ್ ಶೆಟ್ಟಿ, ಮುಹಮ್ಮದ್ ಇಕ್ಬಾಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ಮತ್ತು ಎಚ್.ಸಿ.ಗಳಾದ ರಂಜನ್, ಮೋಹನ್, ಸುಭಾಷ್ ಸಿಬ್ಬಂದಿ ಮಾರುತಿ, ಆನಂದ ಮತ್ತು ಗ್ಯಾನಪ್ಪ ಭಾಗವಹಿಸಿದ್ದಾರೆ.
Comments are closed.