ಕರಾವಳಿ

ರೈತರ ಬಗ್ಗೆ ಮಾತನಾಡುವ ನೈತಿಕತೆ ಮಿಸ್ಟರ್ ಯಡಿಯೂರಪ್ಪಗಿಲ್ಲ: ಬೈಂದೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಕುಂದಾಪುರ: ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದ ಮೋದಿ ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಪ್ರಹಾರ ನಡೆಸುತ್ತಿದೆ. ತಾನು ತಿನ್ನಲ್ಲ ತಿನ್ನುವವರಿಗೂ ಬಿಡಲ್ಲ ಎಂದಿರುವ ಮೋದಿ ಅವರ ಅವಧಿಯಲ್ಲೇ ರಫೇಲ್ ಹಗರಣಗಳಂತಹ ಹಗರಣ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಪ್ರಧಾನಿ ಮೋದಿಯವರೇ ನೀವು ಮನ್ ಕಿ ಬಾತ್ ಬಿಡ್ರಿ, ಖಾಮ್ ಕಿ ಬಾತ್ ಬಗ್ಗೆ ಮಾತಾಡ್ರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೆಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಅವರು ಬೈಂದೂರಿನ ನಾಗೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೂರು ಲೋಕಸಭಾ, 2 ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ವಿಧಾನಸಭೆಗೆ ನಾಲ್ಕೂವರೆ ವರ್ಷದ ಅವಧಿಯಿದೆ. ಆದರೆ ಲೋಕಸಭಾ ಚುನಾವಣೆಗಳು ಅನಗತ್ಯವಾಗಿ ಬಂದಿವೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಆಸೆಯಿಂದ ಈ ಅವ್ಯವಸ್ಥೆ ಎದುರಾಗಿದೆ. ಜನಪ್ರತಿನಿಧಿಗಳು ಅವರಿಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದವರು ಜನರನನ್ನೇ ಕೇಳಿ ರಾಜಿನಾಮೆ ಕೊಡಬೇಕು. ‌ಇಲ್ಲವೆಂದರೆ ಅದು ಜನರಿಗೆ ಮಾಡುವ ದ್ರೋಹ. ಈ ಭಾಗದಲ್ಲಿ ಈ ಹಿಂದೆ ಸಂಸದರಾದ ಬಿ.ಎಸ್.ವೈ ಹಾಗೂ ರಾಘವೇಂದ್ರ ಮಾಡಿದ ಸಾಧನೆ ಏನೂ ಇಲ್ಲ. ಕ್ಷೇತ್ರದತ್ತ ಮುಖವೂ ಮಾಡಿಲ್ಲ. ಅಧಿಕಾರದ ಆಸೆಗಾಗಿ ಎರಡೂವರೆ ದಿನ ಕಾನೂನು ಬಾಹಿರವಾಗಿ ಸಿಎಂ ಆದ ಯಡಿಯೂರಪ್ಪ ಹಸಿರು ಶಾಲು ಧರಿಸಿ ಮಣ್ಣಿನಮಗನೆಂದು ನಾಟಕವಾಡುತ್ತಾರೆ. ಹಾಗಾದರೆ ನಾವ್ಯಾರು ಮಣ್ಣಿನ ಮಕ್ಕಳಲ್ವ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಎಸ್ ವೈ ಮತ್ತೆ ಸಿಎಂ ಆಗೋದು ಕನಸು. ಬಿಎಸ್ ವೈ ಸಿಎಂ ಆಗ್ತಾರೆ ಎಂದು ಶೋಭಾ ಕರಂದ್ಲಾಜೆ ಕನಸು ಕಾಣುತ್ತಿದ್ದಾರೆ. ಬಹುಶಃ ಶೋಭಾ ಕರಂದ್ಲಾಜೆ ಭ್ರಮೆಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಮತ್ತು ಶೋಭಾಗೆ ಸುಳ್ಳು ಹೇಳೋದೇ ಕೆಲಸವಾಗಿಬಿಟ್ಟಿದೆ. ಯಡಿಯೂರಪ್ಪನವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದರು.

ಈಗ ಉಪಚುನಾವಣೆ ಪ್ರಚಾರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇವೆ. ಹಿಂದಿನದನ್ನೆಲ್ಲ ಮರೆತಿದ್ದೇವೆ. ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಐದೂ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದ್ದು, ಕೋಮುವಾದಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದರು.

ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎಲ್ಲಾ ವರ್ಗದ ಜನರ ಪರವಾಗಿ ಸರಕಾರ ಕೆಲಸ ಮಾಡಿತ್ತು. ನಾಲ್ಕು ಕೋಟಿ ಜನರಿಗೆ ಅಕ್ಕಿ ನೀಡುವ ಕೆಲಸವಾಗಿತ್ತು. ಬಿಜೆಪಿಯವರು ಎಲ್ಲಾದರೂ ಈ‌ ಕೆಲಸ ಮಾಡಿದ್ದಾರೆಯೇ ಹೇಳಲಿ. ಕೇವಲ ಹಿಂದುತ್ವದಿಂದ ಹೊಟ್ಟೆ ತುಂಬಲ್ಲ. ಧರ್ಮದ ಬಗ್ಗೆ ರಾಜಕೀಯ ಮಾಡಿದ್ರೆ ಹೊಟ್ಟೆ ತುಂಬಲ್ಲ.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನ ಮಾಡಿಯೆಂದರೆ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಬೇಜವಬ್ದಾರಿ ಹೇಳಿಕೆ ನೀಡಿದ್ದೀರಿ. ಆದರೆ ಚುನಾವಣಾ ಸಮಯದಲ್ಲಿ ಹಸಿರು ಶಾಲು ಹೊದ್ದು ಪ್ರಚಾರಕ್ಕಿಳಿಯುವ ನಿಮಗೆ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯನವರು ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಮಿಸ್ಟರ್ ಯಡಿಯೂರಪ್ಪ ಎಂದು‌ ನಾಲ್ಕೈದು ಬಾರಿ ಜರಿದ ಸಿದ್ದರಾಮಯ್ಯನವರು, ನೀವು ಹಸಿರು ಶಾಲು ಹಾಕಿಕೊಳ್ಳುವುದು ಕೇವಲ ಡೋಂಗಿತನವಾಗಿದೆ. ಈ ಬಗ್ಗೆ ಯಾವುದೇ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದರು.

ಅಂದು ಕರ್ನಾಟಕದಲ್ಲಿ ಬರಗಾಲವಿದೆ, ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದು ನೀಯೋಗದೊಂದಿಗೆ ಪ್ರಧಾನಿ ಮೋದಿಯವರ ಬಳಿ ಬಿಜೆಪಿಯ ಮುಖಂಡರ ಸಮೇತ ತೆರಳಿದ್ದರೂ ಕೂಡ ಪ್ರಧಾನಿ ಒಪ್ಪಲಿಲ್ಲ. ಅವರನ್ನು ಮನವೊಲಿಸುವ ಕೆಲಸ ಬಿಜೆಪಿಯ ಯಾವುದೇ ಗಿರಾಕಿಯೂ ಮಾಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಯೋಗ್ಯತೆಯಿಲ್ಲದ ನಿಮಗೆ ರೈತರ ಬಗ್ಗೆ ಮಾತನಾಡಲು ನಾಚಿಕೆಯಾಗಲ್ಲವೇ ಎಂದು ಪ್ರಶ್ನಿಸಿದರು.

ಮತ ಹಾಕುವ ತನಕ ಮಾತ್ರ ಮತದಾರ‌ ಮುಂದೆ ಬಳಿಕ ಬಿಜೆಪಿಯ ಯಡಿಯೂರಪ್ಪ, ಅನಂತ್ ಕುಮಾರ್ ಹಗ್ಡೆ ಅಂತವರು ಮಾತ್ರ ಮುಂದೆ ಎಂದು ಲೇವಡಿಯಾಡಿದರು.

ಅಚ್ಚೆ ದಿನ್ ಅಬಿ ತಕ್ ನಹಿ ಆಯೆಗಾ. ಮೋದಿ‌ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. 400 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 950 ಆಗಿದೆ. ಅವರ ಮೋಡಿಯ ಮಾತನ್ನು ಇನ್ನೂ ನಂಬಬೇಕೆ? ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಜಣ ತಂದು 15 ಲಕ್ಷ ಕೊಡುವ ಭರವಸೆ ನೀಡಿದ್ದರು. ಆದರೆ ಯಾರೊಬ್ಬರ ಖಾತೆಗೆ 15 ರೂಪಾಯಿ ಕೂಡ ಬಂದಿಲ್ಲ. ಕಪ್ಪು ಹಣ ಬಯಲಿಗೆಳೆಯುವ ಭ್ರಷ್ಟಾಚಾರ ತೊಲಗಿಸುವೆ ಎಂದು ಭಾಷಣ ಬಿಗಿಯುವ ಪ್ರಧಾನಿ ಮಾಡಿದ್ದೇನು ಇಲ್ಲ. ಯಾವೊಬ್ಬ ಕಪ್ಪು ಹಣ ಉಳ್ಳವನೂ ಸಮಸ್ಯೆ ಅನುಭವಿಸಿಲ್ಲ.

ಹಿಂದೂ ಮುಂಸ್ಲಿಂ ನಡುವೆ ಸಾಮಾರಸ್ಯ ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ದಲಿತರು, ಅಲ್ಪಸಂಖ್ಯಾತರು ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ. ನಾವು ನೀಡಿದ ಎಲ್ಲಾ ಭಾಗ್ಯಗಳು ಎಲ್ಲಾ ವರ್ಗದ, ಎಲ್ಲಾ ಧರ್ಮದವರಿಗೆ ಅನುಕೂಲವಾಗುವಂತದ್ದು. ಆದರೆ ಬಿಜೆಪಿ ಸುಳ್ಳಿನ ರಾಜಕಾರಣ ಮಾಡುತ್ತಾರೆ. ಅವರನ್ನು ಕರಾವಳಿಯ ಬುದ್ದಿವಂತ ಜನರು ಹೇಗೆ ಆರಿಸುತ್ತಾರೆಂಬುದು ನಿಜಕ್ಕೂ ತಿಳಿಯುತ್ತಿಲ್ಲ.

ಮಧು ಬಂಗಾರಪ್ಪ ಓರ್ವ ಜಾತ್ಯಾತೀತ ರಾಜಕಾರಣಿಯಾಗಿದ್ದು ಅವರನ್ನು ಲೋಕಸಭೆಗೆ ಕಳಿಸಿ ಆವಾಗಲೇ ಬಂಗಾರಪ್ಪನವರ ಆತ್ಮಕ್ಕೂ ಶಾಂತಿ ಸಿಗುತ್ತೆ. ಗೋಪಾಲ ಪೂಜಾರಿ ಮಾಡಿದ ಕೆಲಸಕ್ಕೆ ಕೂಲಿ ಈ ಬಾರಿ ನೀಡಿಲ್ಲ ಅದಕ್ಕಾಗಿ ಮಧು ಬಂಗಾರಪ್ಪರನ್ನು ಗೆಲ್ಲಸಿ ಬಡ್ಡಿ ಸಮೇತ ಕೂಲಿ‌ ನೀಡಿ ಎಂದರು.

ಗೋಪಾಲ ಪೂಜಾರಿಯನ್ನು ಹೊಗಳಿದ ಮಾಜಿ ಸಿಎಂ..!
ನಾ ಕಂಡ ಜನಪರ ಕಾಳಜಿ ಇರುವ ಕ್ರಿಯಾಶೀಲ ಶಾಸಕರಲ್ಲಿ ಗೋಪಾಲ ಪೂಜಾರಿ ಒಬ್ಬರು. ರಾಜಕೀಯಕ್ಕಾಗಿ, ಸಮಾಜಕ್ಕಾಗಿ ಬಹಳಷ್ಟು ಕಳೆದುಕೊಂಡಿದ್ದು ಅವರ ಸೋಲು‌ ನನಗೂ ನೋವು ತಂದಿದೆ. ಅವರು ಶಾಸಕರಾಗಿದ್ದ ವೇಳೆ ಕ್ಷೇತ್ರಕ್ಕೆ 2 ಸಾವಿರ ಕೋಟಿ ತಂದಿದ್ದು ಇತರೆ ಕ್ಷೇತ್ರದ ಶಾಸಕರು ತಂದಿದ್ದಾರೆಯೇ? ಪ್ರಮೋದ್, ಸೊರಕೆ, ಮಾಂಕಾಳ ವೈದ್ಯರು ಮಾಡಿದ ಕೆಲಸ ಜನರು ಮರೆತಿದ್ದು ನೋಡಿದರೆ ಮತಯಂತ್ರದ ಬಗ್ಗೆ ಅನುಮಾನ‌ಬರುತ್ತೆ ಎಂದರು.

ಈ ಸಂದರ್ಭ ಶಿವಮೊಗ್ಗ ಲೋಕಸಭಾ ಚುನಾವಣೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ, ಸಚಿವರಾದ ಜಮೀರ್ ಅಹಮ್ಮದ್, ಡಾ. ಜಯಮಾಲ, ವಿಧಾನ ಪರಿಷತ್ ಸದಸ್ಯ‌‌ರಾದ ಪ್ರತಾಪಚಂದ್ರ ಶೆಟ್ಟಿ, ಭೋಜೆಗೌಡ, ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಗೋಪಾಲ ಭಂಡಾರಿ, ಮಾಂಕಾಳ ವೈದ್ಯ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಸ್ ಮುಖಂಡರಾದ ರವಿ ಶೆಟ್ಟಿ, ಮನ್ಸೂರ್ ಮರವಂತೆ, ಕಾಂಗ್ರೆಸ್ ಮುಖಂಡರಾದ ಎಮ್ ಎ ಗಫೂರ್, ಜನಾರ್ಧನ ತೋನ್ಸೆ ಮಲ್ಯಾಡಿ ಶಿವರಾಮ್ ಶೆಟ್ಟಿ, ಮಾಣಿಗೋಪಾಲ್, ಸಂಪಿಗೇಡಿ ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.