ಕರಾವಳಿ

ಮಂಗಳೂರಿನ ಶಾಲಾ ಮಕ್ಕಳಿಗೆ ಶುಭ ಸುದ್ಧಿ : ದಸರಾ ರಜೆ ಕಡಿತ ಆದೇಶ ಹಿಂಪಡೆದ ಸರ್ಕಾರ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 27: ಈ ಬಾರಿಯ ದಸರಾ ಸಂದರ್ಭದಲ್ಲಿ ಶಾಲೆಗಳಿಗೆ ರಜೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಇದೀಗ ನಗರದ ವಿವಿಧ ಸಂಘ ಸಂಸ್ಥೆಗಳ,ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಮಂಗಳೂರಿನ ಶಾಲಾ ಮಕ್ಕಳಿಗೆ ಶುಭ ಸುದ್ಧಿಯನ್ನು ನೀಡಿದೆ.

ನಗರದ ಸರ್ಕ್ಯುಟ್ ಹೌಸ್‌ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು‌.ಟಿ. ಖಾದರ್ ಅವರು, ಮಂಗಳೂರಿನಲ್ಲಿ ದಸರಾ ರಜೆಯಲ್ಲಿ ಯಾವುದೇ ಕಡಿತ ಇಲ್ಲ.ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ ಜೊತೆ ಚರ್ಚೆ ನಡೆಸಿಯೇ ತೀರ್ಮಾನಿಸಲಾಗಿದೆ. ಶಿಕ್ಷಣ ಇಲಾಖೆಯ ಎಂದಿನ ತೀರ್ಮಾನದಂತೆ ರಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಸುರಿದ ಸತತ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ – ಕಾಲೇಜುಗಳಿಗೆ ನಿರಂತರ ರಜೆ ನೀಡಿದ್ದರಿಂದ ಈ ಬಾರಿಯ ಮಂಗಳೂರು ದಸರಾ ರಜೆ ಕಡಿತಗೊಳಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿತ್ತು. ಮಳೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ನೀಡಿದಕ್ಕಾಗಿ ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ‌ ಕುರಿತಾಗಿ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ ರಜೆ ಕಡಿತ ನಿರ್ಧಾರವನ್ನು ವಾಪಾಸ್ ಪಡೆದಿದೆ. ಪ್ರಸಕ್ತ ಸಾಲಿನ ದಸರಾ ರಜೆಯಲ್ಲಿ ಯಾವುದೇ ಕಡಿತವಿಲ್ಲ. ಸರ್ಕಾರ ತನ್ನ ಆದೇಶ ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.

ದ.ಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕೆಲ ದಿನಗಳ ಹಿಂದೆ ಹೊರಡಿಸಿದ ಆದೇಶದ ಪ್ರಕಾರ, ಅಕ್ಟೋಬರ್ 14ರಿಂದ 21ರವರೆಗೆ ಜಿಲ್ಲೆಯಲ್ಲಿ ದಸರಾ ರಜೆ ಘೋಷಣೆಯಾಗಿತ್ತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದಸರಾ ರಜೆ ಕಡಿತ ಮಾಡಲಾಗಿತ್ತು. ಆದ್ರೆ ಈಗ ಆದೇಶ ವಾಪಾಸ್ ಪಡೆದು ಅಕ್ಟೋಬರ್‌ 7ರಿಂದ 21ರವರೆಗೆ ರಜೆ ಘೋಷಣೆ ಮಾಡಲು ಶಿಕ್ಷಣ ಇಲಾಖೆ ಕ್ರಮ ವಹಿಸಲಿದೆ.

ಮೂಲರಪಟ್ಣ :ಹೊಸ ಸೇತುವೆ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ

ಗುರುಪುರ ಸೇತುವೆಯನ್ನು ಹೊಸದಾಗಿ ನಿರ್ಮಿಸಲು ಎನ್ ಎಚ್‌ಎಐ ನಿಂದ 35 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ. ಗುರುಪುರದ ನೂತನ ಸೇತುವೆ ನಿರ್ಮಾಣವಾಗುವವರೆಗೂ ಹಳೆಯ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶವಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಮೂಲರಪಟ್ಣ ಸೇತುವೆ ಕುಸಿತ ಪ್ರದೇಶವನ್ನು ದುರಸ್ತಿ ಮಾಡುವ ಬದಲು ಆ ಜಾಗದಲ್ಲಿ ಹೊಸದಾದ ಸೇತುವೆಯನ್ನೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ 50 ಕೋಟಿ ರೂ.ನ್ನು ಬಿಡುಗಡೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಮೂಲರಪಟ್ಣವನ್ನು ಉಳ್ಳಾಲ, ಮಂಗಳೂರಿನಂತೆ ವಾಣಿಜ್ಯ ಕೇಂದ್ರವಾಗಿ ರೂಪಿಸಲಾಗುವುದು. ತಲಪಾಡಿಯಿಂದ ಮುಡಿಪುವರೆಗೆ ಅಭಿವೃದ್ಧಿ ಹೊಂದಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

Comments are closed.