ಕರಾವಳಿ

ಯುವತಿಯರ ಲೈಂಗಿಕ ವೀಡಿಯೋ ಚೀತ್ರಿಕರಣ ಪ್ರಕರಣಕ್ಕೆ ಹೊಸ ತಿರುವು : ಕಿಡ್ನಪ್, ಬ್ಲ್ಯಾಕ್‌ಮೈಲ್, ದರೋಡೆ ಪ್ರಕರಣದ ಯುವತಿ ಸಹಿತಾ ಇಬ್ಬರ ಸೆರೆ

Pinterest LinkedIn Tumblr

                                ರಾಕೇಶ್                                                                             ಶ್ರೀ ಲತಾ   

ಮಂಗಳೂರು : ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು ವೀಡಿಯೋ ಚೀತ್ರಿಕರಿಸಿರುವ ಪ್ರಕರಣ ಹೊಸ ತಿರುವು ಪಡೆದು ಕೊಂಡಿದ್ದು, ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿ ವೃದ್ಧರೊಬ್ಬರನ್ನು ಕಿಡ್ನಪ್ ಮಾಡಿ, ಬ್ಲ್ಯಾಕ್ ಮೈಲ್ ಮಾಡಿ ದರೋಡೆ ಮಾಡಿದ ಯುವತಿ ಸಹಿತಾ ಇಬ್ಬರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿ, ಬಂಧಿತರಿಂದ ನಾಲ್ಕೂವರೆ ಪವನ್ ಚಿನ್ನದ ಸರ, ಎರಡು ಚಿನ್ನದ ಉಂಗುರ, ವಾಚ್ ಮತ್ತು ಮೆಮೋರಿ ಕಾರ್ಡ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕೋಡಿಕಲ್ ನಿವಾಸಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಮಂಗಳೂರು ತಾಲೂಕು ಅಧ್ಯಕ್ಷೆ ಶ್ರೀ ಲತಾ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ.

ಘಟನೆ ವಿವರ :

ನಗರದ ಕೆಪಿಟಿ ಸಮೀಪದ ವ್ಯಾಸನಗರದ ಅಪಾರ್ಟ್‍ ಮೆಂಟ್ ಒಂದರಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು ವೀಡಿಯೋ ಚೀತ್ರಿಕರಿಸಿರುವ ಪ್ರಕರಣಕ್ಕೆ ಸಂಬಂಧ ಪಟ್ಟವರೆಂದು ಹೇಳಲಾದ ವೃದ್ದರೋರ್ವರಿಗೆ ದಿನಾಂಕ 23-09-2018 ರಂದು ಮಹಿಳೆಯೋರ್ವರು ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಲೇಡಿಹಿಲ್ ಸ್ಟೇಡಿಯಂ ಬಳಿಗೆ ಬರುವಂತೆ ತಿಳಿಸಿ ವೃದ್ದರು ಕಾರಿನಲ್ಲಿ ಸ್ಟೇಡಿಯಂ ಬಳಿಗೆ ಬಂದಾಗ ವೃದ್ದರನ್ನು ಮಹಿಳೆ ಮತ್ತು 4 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಸುರತ್ಕಲ್ ನ ರಾಜೇಶ್ ಪವಿತ್ರನ್ ಎಂಬವರ ಮನೆಯಲ್ಲಿ ಕೂಡಿ ಹಾಕಿ, ತಲಾ 5 ಲಕ್ಷ ಹಣ ಕೊಡಬೇಕೆಂದು ಇಲ್ಲದಿದ್ದಲ್ಲಿ ಮೆಮೋರಿ ಕಾರ್ಡ್ ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿದ್ದರು,

ವೃದ್ದರು ಬೇಡಿಕೆ ಇಟ್ಟ ಹಣ ಕೊಡದಿದ್ದಾಗ ಆತನಿಗೆ ಎಲ್ಲರೂ ಸೇರಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಕುತ್ತಿಗೆಯಲ್ಲಿದ್ದ 4 ½ ಪವನ್ ತೂಕದ ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ನಗದು ರೂ. 18,000/- ಗಳನ್ನು ದರೋಡೆ ಮಾಡಿರುತ್ತಾರೆ. ದರೋಡೆಗೆ ಒಳಗಾದ ವ್ಯಕ್ತಿ ಠಾಣೆಗೆ ಬಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ ಆರೋಪಿ ಶ್ರೀಲತಾ ಮತ್ತು ಆರೋಪಿ ರಾಕೇಶ್ ಎಂಬವರನ್ನು ಪೊಲೀಸರು ಬಂಧಿಸಿ ಆರೋಪಿಗಳ ವಶದಿಂದ ಪಿರ್ಯಾದಿದಾರರಿಂದ ದರೋಡೆಗೆ ಒಳಗಾದ 4 ½ ಪವನ್ ತೂಕದ ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ಮತ್ತು ಆರೋಪಿತರಲ್ಲಿದ್ದ ಮೆಮೋರಿ ಕಾರ್ಡ್ ನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿತಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ಬಂಧನ ಬಾಕಿ ಇದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸು ಉಪ ಆಯುಕ್ತರಾದ ಶ್ರೀಮತಿ ಉಮಾ ಪ್ರಶಾಂತ್ ರವರ ನಿರ್ದೇಶನದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ ಉದಯ ನಾಯಕ್ ರವರ ಮಾರ್ಗದರ್ಶನದಂತೆ ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕೆ.ಕೆ. ರಾಮಕೃಷ್ಣ ಮತ್ತು ಸಿಬ್ಬಂದಿಯವರು ಮತ್ತು ಉರ್ವ ಪೊಲೀಸು ಠಾಣೆ ಪೊಲೀಸು ನಿರೀಕ್ಷಕರಾದ ರವೀಶ್ ನಾಯಕ್ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.

Comments are closed.