ಕರಾವಳಿ

ಹಂಪನ್‌ಕಟ್ಟೆ ಸಮೀಪದ ಬಟ್ಟೆ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ : ಲಕ್ಷಾಂತರ ರೂ.ಗಳ ಸೊತ್ತು ಬೆಂಕಿಗಾಹುತಿ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 27: ಮಂಗಳೂರಿನ ಹೃದಯ ಭಾಗವಾದ ಹಂಪನ್‌ಕಟ್ಟೆ ಸಮೀಪದ ಜಿ‌ಎಚ್‌ಎಸ್ ರಸ್ತೆಯ ಜನತಾ ಬಝಾರ್ ಬಳಿಯ ಸೆಲೆಕ್ಷನ್ ಸೆಂಟರ್ ಬಟ್ಟೆ ಅಂಗಡಿಯಲ್ಲಿ ಗುರುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.ಗಳ ಸೊತ್ತು ಬೆಂಕಿಗಾಹುತಿಯಾಗಿದೆ.

ಪ್ರಾಥಮಿಕ ವರದಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅಕಸ್ಮಿಕ ಸಂಭವಿಸರ ಬೇಕೆಂದು ಅಂದಾಜಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಪೊಲೀಸರು ಅಲ್ಲಿ ಸೇರಿದ್ದ ಜನರನ್ನು ಘಟನಾ ಸ್ಥಳದಿಂದ ದೂರಕ್ಕೆ ಚದುರಿಸುವ ಕಾರ್ಯ ಕೈಗೊಂಡಿದ್ದಾರೆ.

ಜಿ‌ಎಚ್‌ಎಸ್ ರಸ್ತೆಯು ಜನನಿಬಿಡ ಪ್ರದೇಶವಾಗಿದ್ದು, ಸೆಲೆಕ್ಷನ್ ಸೆಂಟರ್ ಬಟ್ಟೆ ಮಳಿಗೆ ಇರುವ ಕಟ್ಟಡದಲ್ಲಿ ಕಾಮಾತ್ ಎಂಡ್ ಕೋ ಸೇರಿದಂತೆ ಹಲವಾರು ವ್ಯಾಪಾರ ಮಳಿಗೆಗಳಿದ್ದು, ಬೆಂಕಿಯ ಕೆನ್ನಾಲಗೆ ಈಗಾಗಲೇ ಕಾಮಾತ್ ಎಂಡ್ ಕೋ ಮಳಿಗೆಗೆ ವ್ಯಾಪಿಸಿದ್ದು, ಸಮೀಪದ ಇತರ ಮಳಿಗೆಗಳಿಗೆ ಹರಡದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.

ಬೆಂಕಿ ಅವಘಡದಿಂದ ಸೆಲೆಕ್ಷನ್‌ ಸೆಂಟರ್‌ ಮತ್ತು ಕಾಮತ್‌ ಕೋ ಮಳಿಗೆಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಲಕ್ಷಾಂತರ ರೂ.ಗಳ ಸೊತ್ತು ಬೆಂಕಿಗಾಹುತಿಯಾಗಿದೆ, ಎರಡೂ ಸಂಸ್ಥೆಗಳಿಗೆ ಅಪಾರ ನಷ್ಟವಾಗಿರುವ ಬಗ್ಗೆ ತಿಳಿದು ಬಂದಿದೆ.ಘಟನೆಯಲ್ಲಿ ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಮನಪಾ ಅಯುಕ್ತರು, ಪೊಲೀಸ್ ಕಮೀಷನರ್ ಭೇಟಿ:

ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್,ಡಿಸಿಪಿ ಉಮಾ ಪ್ರಶಾಂತ್‌, ಮಂಗಳೂರು ಮಹಾನಗರ ಪಾಲಿಕೆ. ಅಯುಕ್ತಕ ಮಹಮ್ಮದ್ ನಝೀರ್, ಮೇಯರ್ ಭಾಸ್ಕರ್ ಮೊಯ್ಲಿ ಹಾಗೂ ಮನಪಾ ಸದಸ್ಯರು ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.