
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ “ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ ಅ.10ರಿಂದ 19ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವೈಭವದ ಮಂಗಳೂರು ದಸರಾ ಮಹೋತ್ಸವದ ಉದ್ಘಾಟನೆಗೆ ಗೃಹ ಸಚಿವ ಡಾ. ಪರಮೇಶ್ವರ್ ಆಗಮಿಸುವ ನಿರೀಕ್ಷೆಯಿದೆ ಎಂದು ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದರು.
ಮಂಗಳೂರು ದಸರಾ ಮಹೋತ್ಸವದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ. 10ರಂದು ದೇವಾಲಯದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆ ಪ್ರತಿಷ್ಠಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅ.19ರಂದು ವೈಭವದ ದಸರಾ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ತನ್ನ ಪುತ್ರ ಸಂತೋಷ್ ಪೂಜಾರಿ ಪ್ರತಿವರ್ಷ ಮಂಗಳೂರು ದಸರಾಕ್ಕೆ 10 ಲಕ್ಷ ರೂ. ನೀಡುತ್ತಾ ಬಂದಿದ್ದು, ಈ ವರ್ಷ ಕೂಡ ಅಷ್ಟೇ ಮೊತ್ತವನ್ನು ನೀಡಲಿದ್ದಾರೆ. ಕಿರಿಯ ಪುತ್ರ ದೀಪಕ್ ಪೂಜಾರಿ ಅವರೂ 3 ಲಕ್ಷ ರೂ. ನೀಡುತ್ತಾರೆ. ದಾನಿಗಳಿಂದ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಪೂಜಾರಿ ತಿಳಿಸಿದರು.
ಕುದ್ರೋಳಿ ಕ್ಷೇತ್ರ ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಾದ ದೇವಾಲಯವಲ್ಲ. ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನ ಧರ್ಮೀಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ದಸರಾ ಆಚರಣೆಗೆ ಸರಕಾರದಿಂದ ಒಂದು ಪೈಸೆ ಅನುದಾನ ಹಿಂದೆಯೂ ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಸರಕಾರದ ನೆರವಿಲ್ಲದೆ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿವೆ ಎಂದು ಪೂಜಾರಿ ಹೇಳಿದರು.
ದಸರಾ ಮೆರವಣಿಗೆಯಲ್ಲಿ ಕಳೆದ ವರ್ಷ 68 ಟ್ಯಾಬ್ಲೊಗಳು ಭಾಗವಹಿಸಿದ್ದವು. ಈ ಬಾರಿ ಅದಕ್ಕಿಂತ ಹೆಚ್ಚಿನ ಟ್ಯಾಬ್ಲೊಗಳನ್ನು ನಿರೀಕ್ಷಿಸಲಾಗಿದೆ. ಹಲವು ಸಂಘಟನೆಯವರು ಸಂಪರ್ಕಿಸಿದ್ದು, ಹೊಸ ಟ್ಯಾಬ್ಲೊ ಮಾಡುವ ಉತ್ಸಾಹ ತೋರಿಸಿದ್ದಾರೆ. ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳಿಗೆ ಆದ್ಯತೆ ನೀಡಲಾಗುವುದು ಎಂದರು.
(ಹಿಂದಿನ ಕಡತ ಚಿತ್ರಗಳು)


ಅ.19ರಂದು ಸಂಜೆ ವೈಭವದ ಶೋಭಾಯಾತ್ರೆ :
ಅ.19ರಂದು ಸಂಜೆ 4 ಗಂಟೆಗೆ ವೈಭವದ “ಮಂಗಳೂರು ದಸರಾ’ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 75ಕ್ಕಿಂತಲೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ.
ಜಿಲ್ಲೆ ಹಾಗೂ ಹೊರಜಿಲ್ಲೆಯ ಜಾನಪದ ತಂಡಗಳು ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿವೆ. ಸುಮಾರು 500ಕ್ಕೂ ಹೆಚ್ಚು ಆಲಂಕಾರಿಕ ಕೊಡೆಗಳ ಮೂಲಕ ಮೆರವಣಿಗೆಗೆ ಮೆರುಗು ನೀಡಲಿದೆ.ಈ ಹಿಂದೆಗಿಂತಲೂ ಮತ್ತಷ್ಟು ವಿಜೃಂಭಣೆಯಿಂದ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ ಎಂದು ಪೂಜಾರಿ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್. (ಅಡ್ವಕೇಟ್), ದೇವಾಲಯದ ಪ್ರಮುಖರಾದ ಊರ್ಮಿಳಾ ರಮೇಶ್ ಕುಮಾರ್, ದೇವೇಂದ್ರ ಪೂಜಾರಿ, ಡಿ.ಡಿ. ಕಟ್ಟೆಮಾರ್, ಶೇಖರ ಪೂಜಾರಿ, ಚಿತ್ತರಂಜನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.