
ಮಂಗಳೂರು, ಸೆಪ್ಟಂಬರ್. 11: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಬಂದ್ ನಡೆಸಲು ಸರಕಾರಿ ಯಂತ್ರವನ್ನು ಬಳಸಿಕೊಂಡಿದ್ದು, ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬಲವಂತದ ಬಂದ್ ನಡೆಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕಾಂಗ್ರೆಸ್ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಬಲವಂತದ ಬಂದ್ ನಡೆಸಲಾಗಿದೆ .ಮಂಗಳೂರು ಮತ್ತು ಬಂಟ್ವಾಳದಲ್ಲಿ ಮಾಜಿ ಶಾಸಕರು ಮುಂದೆ ನಿಂತು ಬಲವಂತವಾಗಿ ಬಂದ್ ಮಾಡಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಬಂಟ್ವಾಳದಲ್ಲಿ ಬಿಜೆಪಿ ಶಾಸಕರ ವಾಹನದ ಮೇಲೆ ಕಲ್ಲೆಸೆದು ಕೊಲೆಯತ್ನ ನಡೆದಿದೆ.ಉಡುಪಿಯಲ್ಲೂ ಬಜೆಪಿ ಮುಖಂಡರ ಮೇಲೆ ಹಲ್ಲೆ ನಡೆದಿದೆ. ಆಸ್ಪತ್ರೆ ಕ್ಯಾಂಟಿನ್, ಪತ್ರಿಕೆ ಅಂಗಡಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸರಕಾರಿ ಯಂತ್ರವನ್ನು ಬಳಸಿಕೊಂಡು ಹಲವಾರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.

ಪೆಟ್ರೋಲ್ ಬೆಲೆ ಇಳಿಕೆಯಾಗ ಬೇಕಾದರೆ ರಾಜ್ಯ ಸರಕಾರ ಸೆಸ್ ಹಿಂದಕ್ಕೆ ಪಡೆಯಬೇಕು. ರಾಜಸ್ಥಾನದಲ್ಲಿ ಇರುವ ರಾಜ್ಯ ಸರಕಾರ ಈ ರೀತಿಯ ಕ್ರಮ ಕೈಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು. ನ್ಯಾಯಾಲಯದ ತೀರ್ಪಿನ ಪ್ರಕಾರ ಬಂದ್‌ಗೆ ಕರೆ ನೀಡಿದವರು ಆ ಸಂದರ್ಭದಲ್ಲಿ ನಡೆದಿರುವ ನಷ್ಟವನ್ನು ಭರಿಸಬೇಕಾಗಿದೆ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಿರುವ ನಷ್ಟವನ್ನು ಕಾಂಗ್ರೆಸ್ ಭರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ (ಸುರತ್ಕಲ್) ಶಾಸಕ ಡಾ. ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಹಾಗೂ ಬಿಜೆಪಿ ಮುಖಂಡರಾದ ರವಿ ಶಂಕರ್ ಮಿಜಾರ್, ಕಿಶೋರ್ ರೈ, ಜಿತೇಂದ್ರ ಕೊಟ್ಟಾರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.