
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ವಾರಸ್ಯಕರವಾದ ಹಾಗೂ ಜನಸಾಮಾನ್ಯರ ಅಕ್ರೋಷಕ್ಕೆ ಕಾರಣವಾಗುವಂತ ವಿದ್ಯಾಮಾನವೊಂದು ನಡೆಯಿತು.
ಅದೇನೆಂದರೆ ಮನಪಾದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯ ಎಂಬ ವಿಚಾರದಲ್ಲಿ ಒಂದೇ ಪಕ್ಷದ ಹಾಲಿ ಹಾಗೂ ಮಾಜಿ ಮೇಯರ್ ಗಳ ನಡುವೆ ಮಾತಿನ ಸಮರ ನಡೆಯಿತು. ಸಮರ ಎನ್ನುವುದಕ್ಕಿಂತ ಒಂದು ರೀತಿಯಲ್ಲಿ ತೆರಿಗೆ ಕಟ್ಟುವ ಮಂಗಳೂರಿನ ಸಮಸ್ತ ಜನರನ್ನು ಮೂರ್ಖರಾಗಿಸುವ ಪ್ರಯತ್ನ ಎಂದೇ ಹೇಳಬಹುದು. ಈ ರೀತಿ ಬರೆಯಲು ಕಾರಣವಿದೆ.
ಮನಪಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾಗಿರುವ ಮಾಜಿ ಮೇಯರ್ ಕವಿತಾ ಸನಿಲ್, ತಮ್ಮ ವಾರ್ಡ್ ನಲ್ಲಿ ಒಂದೂವರೆ ಸೆಂಟ್ಸ್ ನಲ್ಲಿ ಕಟ್ಟಲಾಗುತ್ತಿದ್ದ ಮನೆಯೊಂದನ್ನು ಕೆಡವಿದ ವಿಷಯವನ್ನು ಪ್ರಸ್ತಾಪಿಸಿದರು. ಪಚ್ಚನಾಡಿ ಆಶ್ರಯ ಕಾಲನಿಯಲ್ಲಿ 1.5 ಸೆಂಟ್ಸ್ ಜಾಗದಲ್ಲಿದ್ದ ರಿಕ್ಷಾ ಚಾಲಕರೊಬ್ಬರ ಮನೆಯನ್ನು ಕೆಡವಿ ಹಾಕಲಾಗಿದೆ. ಬಡವರ ಮನೆಯನ್ನು ಕೆಡವುವ ಪಾಲಿಕೆ ಶ್ರೀಮಂತರ ಕಟ್ಟಡವನ್ನು ನಿಯಮ ಮೀರಿದ್ದರೂ ಕೆಡವುತ್ತಿಲ್ಲ ಎಂದು ಆರೋಪಿಸಿದರು.

ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ, ಅನಧಿಕೃತ ಕಟ್ಟಡಗಳು, ಮಸಾಜ್ ಪಾರ್ಲರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನ್ಯಾಯಾಲಯದಿಂದ ಆದೇಶ ಆದ 52 ಕಟ್ಟಡಗಳ ತೆರವಿಗೆ ಕ್ರಮವಾಗಿಲ್ಲ. ಆದರೆ ಬಡಪಾಯಿಯ ಮನೆಯನ್ನು ನೆಲಸಮ ಮಾಡಿದ್ದು ಯಾಕೆ ಎಂದು ಕವಿತಾ ಸನಿಲ್ ಪ್ರಶ್ನಿಸಿದರು.
ಈ ವೇಳೆ ಇದಕ್ಕೆ ಪ್ರತ್ಯುತ್ತರ ನೀಡಿದ ಮೇಯರ್ ಭಾಸ್ಕರ್ ಮೊಯಿಲಿ, ನೀವು ಮೇಯರ್ ಆಗಿದ್ದಾಗ ಎಷ್ಟು ಮಾಡಿದ್ದೀರಿ…? ಎಂದು ಪ್ರಶ್ನೆ ಮಾಡಿದರು. ನೀವು ಅಧಿಕಾರದಲ್ಲಿದ್ದಾಗ ತೆಗೆಸಬಹುದಿತ್ತಲ್ಲಾ ಎಂದು ಸವಾಲೆಸದರು.

ನಾನು ಮೇಯರ್ ಆಗಿದ್ದಾಗ, ಸಾಕಷ್ಟು ದಾಳಿ, ಕ್ರಮಗಳನ್ನು ಮಾಡಲಾಗಿದೆ ಎಂದು ಕವಿತಾ ಸನಿಲ್ ಉತ್ತರಿಸಿದರು.ಅವರ ಮಾತುಗಳಿಗೆ ಪ್ರತಿಯಾಗಿ ಮೇಯರ್ ಭಾಸ್ಕರ ಮೊಯ್ಲಿ, ನೀವು ಏನೆಲ್ಲಾ ಮಾಡಿದ್ದೀರಿ ಎಂಬುದು ಗೊತ್ತಿದೆ ಎಂದು ಕೊಂಕು ಮಾತನಾಡಿದರು.
ಇದರಿಂದಾಗಿ ಕೆಲಕ್ಷಣ ಸಭೆಯು ಹಾಲಿ ಹಾಗೂ ಮಾಜಿ ಮೇಯರ್ಗಳ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ನಂತರ ಇಬ್ಬರ ಮಧ್ಯೆ ನಡೆದ ಮಾತಿನ ಚಕಮಕಿಯಿಂದ ಸಭೆಯಲ್ಲಿ ಗದ್ದಲ ಉಂಟಾಯಿತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ ಮಾಜಿ ಮೇಯರ್ಗಳ ಈ ಒಳ (ಒಣ)ಜಗಳವನ್ನು ಬೇರೆ ರೀತಿಯ ಚರ್ಚೆಗಳ ಮೂಲಕ ಕೂಡ ಬಗೆಹರಿಸ ಬಹುದಿತ್ತು.. ಆದರೆ ಜನ ಸಾಮಾನ್ಯರ ಮೂಲ ಸೌಕರ್ಯಗಳ.. ಕುಂದು ಕೊರತೆಗಳಿಗಾಗಿ ಅಯೋಜಿಸಲಾಗಿರುವ ಈ ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಪ್ರಮುಖ ಸಮಸ್ಯೆಗಳನ್ನು ಬದಿಗೊತ್ತಿ ಈ ರೀತಿ ತಮ್ಮ ಪ್ರತಿಷ್ಠೆಗಾಗಿ ಜಗಳ ಮಾಡುವ ಮೂಲಕ ಜನ ಸಾಮಾನ್ಯರ ಪ್ರಮುಖ ವಿಚಾರಗಳ ಚರ್ಚೆಗಾಗಿ ಮೀಸಲಾಗಿಟ್ಟಿರುವ ಸಮಯವನ್ನು ಹಾಳುಗೆಡವುದು ಎಷ್ಟು ಸರಿ ಎಂಬುವುದು ಪಾಲಿಕೆಯ ವಿಪಕ್ಷ ಸದಸ್ಯರ ಪ್ರಶ್ನೆ?..
Comments are closed.