ಕರಾವಳಿ

ವರುಣನ ರೌದ್ರವತಾರ: ಮಂಗಳೂರು-ಮಡಿಕೇರಿ ಹೆದ್ದಾರಿ ಜೋಡುಪಾಲದಲ್ಲಿ ಭೀಕರ ದುರಂತ : ಮಣ್ಣಿನಡಿಯಲ್ಲಿ ಸಿಲುಕಿದ ಆರು ಮಂದಿ ನಾಪತ್ತೆ ; ಸಚಿವ ಖಾದರ್ ಸ್ಥಳಕ್ಕೆ ದೌಡು

Pinterest LinkedIn Tumblr

ಸುಳ್ಯ, ಆಗಸ್ಟ್.18: ಮಂಗಳೂರು-ಮಡಿಕೇರಿ ಮಧ್ಯದ ಸಂಪಾಜೆ ಬಳಿಯ ಜೋಡುಪಾಲ, ಮದೆನಾಡು ಬಳಿ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿತ.ನಡೆದು ಪ್ರಕೃತಿ ದುರಂತ ಸಂಭವಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಜೋಡುಪಾಳ್ಯ ದುರಂತ ಪ್ರದೇಶಕ್ಕೆ ದೌಡಯಿಸಿದ್ದಾರೆ.

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರು, ಜೋಡುಪಾಲ ದುರಂತದ ಮಾಹಿತಿ ತಿಳಿದು, ತಕ್ಷಣವೇ ಬಂಟ್ವಾಳದಿಂದ ಜೋಡುಪಾಲಕ್ಕೆ ತೆರಳಿದ್ದಾರೆ.

ಸಂಪಾಜೆ – ಮಡಿಕೇರಿ ಮಧ್ಯದ ಜೋಡುಪಾಲದಲ್ಲಿ ಗುರುವಾರದಿಂದಲೇ ಜೋಡು ಪಾಲದ ಮೇಲ್ಭಾಗದ ಗುಡ್ಡ ಕುಸಿದು ಜಾರಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿರುವ ಮನೆಯವರನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮವಾಗಿ ಮೂರು ಮನೆಗಳು ಸಂಪೂರ್ಣ ಧ್ವಂಸಗೊಂಡಿವೆ. ಈ ಮನೆಗಳಲ್ಲಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿದ್ದು, ಓರ್ವರ ಗಂಡಸು ಆತನ ಪತ್ನಿ ಹಾಗೂ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿರಬೇಕೆಂದು ಶಂಕಿಸಲಾಗಿದೆ.

ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಸುಮಾರು 3 ಕಿಲೋಮೀಟರ್‌ನಷ್ಟು ವಾಹನವಾಗಲಿ, ಜನರಾಗಲಿ ತೆರಳಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ನಿಗ್ರಹ ದಳ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿತು.

ಸುಳ್ಯ ಎಸ್ಸೈ ಮಂಜುನಾಥ್ ಮತ್ತು ಸಿಬ್ಬಂದಿ, ಊರವರು ಸಹಕಾರ ನೀಡಿದರು. ಅಪರಾಹ್ನದ ವೇಳೆಗೆ ಬಸಪ್ಪ ಎಂಬವರ ಮೃತದೇಹವನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇನ್ನೊಂದು ಮನೆಯ ನಿವಾಸಿ ಹಮೀದ್ ಎಂಬವರ ಇಬ್ಬರು ಮಕ್ಕಳು ಕೂಡಾ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಈ ಮಧ್ಯೆ ಅಲ್ಲಿ ಶಾಲೆಯೊಳಗೆ ಸಿಲುಕಿಕೊಂಡಿದ್ದ ಸುಮಾರು 60ರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ಕರೆತಂದು ಕಲ್ಲುಗುಂಡಿ ಶಾಲೆ ಮತ್ತು ಅರಂತೋಡು ತೆಕ್ಕಿಲ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ಸಾಗಿದೆ. ಊರವರು ಸಂತ್ರಸ್ತರಿಗೆ ಆಹಾರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ನೀರು ಸಹಿತವಾಗಿ ಬೃಹತ್ ಕಲ್ಲುಗಳು ಗುಡ್ಡದಿಂದ ಜಾರಿ ಬರುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ.

ಈ ಪ್ರದೇಶದಿಂದ ಸ್ಥಳಾಂತರಿಸಲ್ಪಟ್ಟ ನೂರಕ್ಕೂ ಅಧಿಕ ಮಂದಿಯನ್ನು ಸಂಪಾಜೆ, ಅರಂತೋಡು ಶಿಬಿರಗಳಲ್ಲಿದ್ದಾರೆ. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರನ್ನು ಭೇಟಿ ಮಾಡಿದ್ದಾರೆ.

ಸುಳ್ಯ‌ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಮತ್ತು ಎಸ್.ಐ. ಮಂಜುನಾಥ್ ನೇತೃತ್ವದಲ್ಲಿ ಸುಳ್ಯ ಪೊಲೀಸರು, ರಾಷ್ಟ್ರೀಯ ವಿಪತ್ತು ದಳದ ಸದಸ್ಯರು, ಅಗ್ನಿಶಾಮಕ ದಳದವರು ಹಾಗು ಸ್ಥಳೀಯರು ಜೋಡುಪಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸುಳ್ಯ ಹಾಗೂ ಪರಿಸರದ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿರಾಶ್ರಿತರಿಗೆ ಸಹಾಯಹಸ್ತ ಚಾಚಲು ಆರಂಭಿಸಿದ್ದು, ಈಗಾಗಲೇ ಸಹಾಯ ಹರಿದು ಬರಲಾರಂಭಿಸಿದೆ .

Comments are closed.