ಕರಾವಳಿ

ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್‌ ಬಿಹಾರಿ ವಾಜಪೇಯಿ ವಿಧಿವಶ

Pinterest LinkedIn Tumblr

ಹೊಸದಿಲ್ಲಿ : ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್‌ ಬಿಹಾರಿ ವಾಜಪೇಯಿ (93) ಅವರು ವಿಧಿವಶರಾಗಿದ್ದಾರೆ.

ದೇಶ ಕಂಡ ಅಪರೂಪದ ರಾಜಕಾರಣಿ, ಅಜಾತ ಶತೃ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು (ಆ.16) ಮೃತಪಟ್ಟರು. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ವಾಜಪೇಯಿ ನಿಧನದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.

ಮೂತ್ರಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಎರಡು ತಿಂಗಳಿಂದ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

93 ವರ್ಷದ ವಾಜಪೇಯಿ ಅವರು 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದಾಗಿ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಕಳೆದ ಎರಡು ತಿಂಗಳಿನಿಂದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆಯಷ್ಟೇ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಆರೋಗ್ಯ ವಿಚಾರಿಸಿದ್ದರು. ಇಂದು ಹಿರಿಯ ಮುಖಂಡ ಎಲ್​.ಕೆ.ಅಡ್ವಾಣಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿರಿಯ ನಾಯಕರಾಗಿದ್ದ ವಾಜಪೇಯಿ, ಬದುಕಿದ್ದಷ್ಟೂ ದಿನ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿದ್ದರು. ಅಧಿಕಾರ, ಹಣಕ್ಕಾಗಿ ಆಸೆ ಪಡಲಿಲ್ಲ. ಭ್ರಷ್ಟಾಚಾರವೆಂಬುದನ್ನು ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಅನಾರೋಗ್ಯದಿಂದ ಹೈರಾಣಿಗದ್ದ ಅವರು, ಈಗ ಅಸುನೀಗಿದ್ದರೂ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ.

ಮಾದರಿ ಸಂಸತ್​ ಪಟುವಾಗಿದ್ದ ಅವರು ಉತ್ತಮ ವಾಗ್ಮಿಯೂ ಕೂಡ. ಇಡೀ ದೇಶದುದ್ದಗಲಕ್ಕೂ ಸಂಚರಿಸಿ ಹಿಂದು ಸಿದ್ಧಾಂತದಡಿ ಬಿಜೆಪಿಯನ್ನು ಸಂಘಟಿಸಿ ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದ್ದರು.

ವ್ಯಾಪಕ ಕಟ್ಟೆಚ್ಚರ :

ಏಮ್ಸ್‌ ಆಸ್ಪತ್ರೆ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ಮಾಡಿ ಗಣ್ಯರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ಸುತ್ತಮುತ್ತಲಿನ ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ವಾಜಪೇಯಿ ಅವರ ನಿವಾಸದ ಬಳಿಯೂ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ರಸ್ತೆಯನ್ನು ಬಂದ್‌ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲೆಡೆ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಲಕ್ನೋದಲ್ಲಿರುವ ವಾಜಪೇಯಿ ಅವರ ಸಂಬಂಧಿಕರು, ಅವರ ದತ್ತು ಪುತ್ರಿಯನ್ನು ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ.

Comments are closed.