ಕರಾವಳಿ

ಭಾರೀ ಮಳೆಗೆ ಗುಡ್ಡ ಕುಸಿತ : ಶಿರಾಡಿ ಘಾಟ್ ರಸ್ತೆಯಲ್ಲಿ 10 ದಿನ ವಾಹನ ಸಂಚಾರ ನಿಷೇಧ – ಕೆ‌ಎಸ್‌‍ಆರ್‌ಟಿಸಿ ಬಸ್ ಸಂಚಾರ ಸ್ತಗಿತ

Pinterest LinkedIn Tumblr

ಮಂಗಳೂರು, ಆಗಸ್ಟ್.16: ಇತ್ತೀಚಿಗೆ ನೂರಾರು ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಗೊಂಡ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತದಂತಹ ಅನಾಹುತ ಇನ್ನೂ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ (ಆ.16ರಿಂದ ಆ.25ವರೆಗೆ) ವಾಹನಗಳ ಸಂಪೂರ್ಣ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಯಿಂದ ಆ.25ರ ಬೆಳಗ್ಗೆ 6 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

ಕಳೆದ ನಾಲ್ಕೈದು ದಿನಗಳಿಂದ ಶಿರಾಡಿ ಘಾಟ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂ ಕುಸಿತ ಸಂಭವಿಸಿದೆ. ಇದರಿಂದ ಬೃಹತ್ ಮರಗಳ ಸಹಿತ ಭಾರೀ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಗೆ ಬಿದ್ದಿದೆ. ಇವುಗಳನ್ನು ತೆರವುಗೊಳಿಸಲು ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಭೂಕುಸಿತದಂತಹ ಹಾನಿ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಈ ಹೆದ್ದಾರಿಯಲ್ಲಿ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಬಂದ್ :

ಇದೇ ವೇಳೆ ಶಿರಾಡಿ ಘಾಟ್ ಪ್ರದೇಶದಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವುದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಎಲ್ಲಾ ರೀತಿಯ ವೋಲ್ವೋ, ರಾಜಹಂಸ ಬಸ್ ಸಂಚಾರ ನಿಲ್ಲಿಸಲಾಗಿದೆ. ಕರ್ನಾಟಕ ಸಾರಿಗೆ ಬಸ್ಸು(ಕೆಂಪು ಬಸ್ಸು) ಗಳು ಮಾತ್ರ ಚಾರ್ಮಾಡಿ ಮಾರ್ಗದಲ್ಲಿ ಬೆಂಗಳೂರಿಗೆ ಸಂಚರಿಸುತ್ತಿವೆ. ಈಗಾಗಲೇ ವೋಲ್ವೋ ಟಿಕೆಟ್ ಬುಕ್ ಮಾಡಿದವರಿಗೆ 100% ರೀಫಂಡ್ ಮಾಡಲಾಗುವುದು ಎಂದು ಕೆಎಸ್ಆರ್ ಟಿಸಿ ಡಿಸಿ ತಿಳಿಸಿದ್ದಾರೆ.

Comments are closed.