ಕರಾವಳಿ

ಇಂಟಕ್ ನಾಯಕ ಪುನೀತ್ ಶೆಟ್ಟಿ ಹಲ್ಲೆ ಪ್ರಕರಣ : ಕಾಂಗ್ರೆಸ್ ನಾಯಕ ಮಿಥುನ್ ರೈ ಸಹಿತಾ 15 ಮಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು, ಆಗಸ್ಟ್.16: ಕ್ವಿಟ್ ಇಂಡಿಯಾ’ ಚಳವಳಿಯ ನೆನಪಿಗಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಂಟಕ್ ಯುವ ನಾಯಕ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಅಧ್ಯಕ್ಷ ಪುನೀತ್ ಶೆಟ್ಟಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಇಂಟಕ್ ವತಿಯಿಂದ ದ.ಕ. ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಮಿಥುನ್ ರೈ ಬೆಂಬಲಿಗರೆನ್ನಲಾದ 15 ಮಂದಿ ಬಾಡಿಗೆ ಗೂಂಡಾಗಳು ಪುನೀತ್ ಶೆಟ್ಟಿ ಮೇಲೆ ಹಲ್ಲೆ ನಡೆಸಿ ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಲಾಗಿದ್ದು, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಸಹಿತ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಿಥುನ್ ರೈ ವಿರುದ್ಧ ವಿವಿಧ ಠಾಣೆಗಳಲ್ಲಿ ಐದಾರು ಪ್ರಕರಣಗಳು ದಾಖಲಾಗಿದ್ದರೂ ಅವರಿಗೆ ಪೊಲೀಸ್ ಇಲಾಖೆ ಗನ್‌ಮ್ಯಾನ್ ವ್ಯವಸ್ಥೆ ಕಲ್ಪಿಸಿದೆ. ಮಿಥುನ್ ರೈ ಇದನ್ನು ದುರುಪಯೋಗ ಪಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಇಂಟಕ್ ಮುಖಂಡರಾದ ಮುದಸ್ಸಿರ್ ಕುದ್ರೋಳಿ, ನಾಗೇಂದ್ರ ಜಪ್ಪಿನಮೊಗರು, ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಘಟನೆ ವಿವರ :

ಆಗಸ್ಟ್.9ರಂದು ‘ಕ್ವಿಟ್ ಇಂಡಿಯಾ’ ಚಳವಳಿಯ ನೆನಪಿಗಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ತಲುಪಿದ ಸಂದರ್ಭ ಇಂಟಕ್ ನಾಯಕ ಪುನೀತ್ ಶೆಟ್ಟಿ ಮತ್ತು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದಿತ್ತು.

ಈ ವೇಳೆ ಪುನೀತ್ ಶೆಟ್ಟಿ ಮೇಲೆ ಮಿಥುನ್ ರೈ ಬೆಂಬಲಿಗರು ಎನ್ನಲಾದ ಕೆಲವರು ಹಲ್ಲೆ ನಡೆಸಿದ್ದು, ಘಟನೆಯಿಂದ ಗಾಯಗೊಂಡ ಪುನೀತ್ ಶೆಟ್ಟಿ ಅಸ್ಪತ್ರೆಗೆ ದಾಖಲಾಗಿದ್ದರು. ಕಾಂಗ್ರೆಸ್ ನ ಹಿರಿಯ ನಾಯಕರ ಮುಂದೆಯೇ ಈ ಹೊಡೆದಾಟ ನಡೆದಿತ್ತು.

ಕ್ವಿಟ್ ಇಂಡಿಯಾ ಕಾರ್ಯಕ್ರಮದ ನಂತರ ಮಿಥುನ್ ರೈ ಮತ್ತು ಆತನ ಬೆಂಬಲಿಗರು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ. ಮಿಥುನ್ ರೈ ನನಗೆ ಜೀವ ಬೆದರಿಕೆಯೊಡ್ಡಿದ್ದಾನೆ. ಇದು ಹಲ್ಲೆ ಮಾತ್ರ, ಮುಂದಿನ ದಿನಗಳಲ್ಲಿ ನಿನ್ನನ್ನು ಕೊಲ್ಲುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದಾನೆ” ಎಂದು ಅಸ್ಪತ್ರೆಗೆ ಭೇಟಿ ನೀಡಿದ ಮಾಧ್ಯಮದವರಲ್ಲಿ ಪುನೀತ್ ಶೆಟ್ಟಿ ತಿಳಿಸಿದ್ದರು.

ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದಾನೆ. ಅವಿನಾಶ್, ಗಿರೀಶ್ ಆಳ್ವ ಮೊದಲಾದವರು ಗೂಂಡಾಗಳಂತೆ ವರ್ತಿಸಿ ನನಗೆ ಹಲ್ಲೆ ನಡೆಸಿದ್ದಾರೆ. ನನ್ನ ಚೈನ್ ತೆಗೆದಿದ್ದಾರೆ. ಮಿಥುನ್ ರೈ ಮೇಲೆ 3 ಕೇಸ್ ಗಳಿವೆ. ಆದರೆ ಆತನಿಗೆ ಗನ್ ಕೊಟ್ಟಿದ್ದಾರೆ. ಗನ್ ಮ್ಯಾನ್ ಕೊಟ್ಟಿದ್ದಾರೆ. ಬರ್ಕೆ ವ್ಯಾಪ್ತಿಯಲ್ಲಿ ಆತನ ಮೇಲೆ ಕಂಪ್ಲೇಂಟ್ ಇದೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದರು.

Comments are closed.