ಕರಾವಳಿ

ಹೆದ್ದಾರಿ ಕಾಮಗಾರಿಯು ವಿಳಂಬ ಖಂಡಿಸಿ ಉಭಯ ಜಿಲ್ಲೆಗಳ ನಾಲ್ಕು ಟೋಲ್‌ಗೇಟ್‌ಗಳಿಗೆ ಮುತ್ತಿಗೆ : ದೇವಿಪ್ರಸಾದ್ ಶೆಟ್ಟಿ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ಆಗಸ್ಟ್.14: ದ.ಕ.ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದವರೆಗಿನ (ರಾಷ್ಟ್ರೀಯ ಹೆದ್ದಾರಿ 66ರ) ಚತುಷ್ಪಥ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿರುವುದನ್ನು ಖಂಡಿಸಿ ಈ ತಿಂಗಳಾಂತ್ಯದೊಳಗೆ ಏಕಕಾಲದಲ್ಲಿ ಉಭಯ ಜಿಲ್ಲೆಗಳ ನಾಲ್ಕು ಟೋಲ್‌ಗೇಟ್‌ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ 66 ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೆದ್ದಾರಿಯ ಪರ ಹೋರಾಟ ನಡೆಸಲು ಅವಿಭಜಿತ ಜಿಲ್ಲೆಯ ವಿವಿಧ ಸಂಘಟನೆಗಳನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಸಮಿತಿ ವತಿಯಿಂದ ಆ.16ರಂದು ದ.ಕ.ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ಸ್ಪಂದಿಸದಿದ್ದರೆ ಟೋಲ್‌ಗೇಟ್‌ಗಳಿಗೆ ಮುತ್ತಿಗೆ ಹಾಕುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

2010ರಲ್ಲಿ ಆರಂಭಗೊಂಡ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಪಘಾತಕ್ಕೀಡಾಗಿ ಹಲವು ಮಂದಿ ಸಾವಿಗೀಡಾಗಿದ್ದಾರೆ. ಬೈಪಾಸ್ ರಸ್ತೆಗಳು ಪೂರ್ಣಗೊಂಡಿಲ್ಲ. ಪ್ರಮುಖ ಸ್ಥಳಗಳಲ್ಲೇ ಸರ್ವಿಸ್ ರಸ್ತೆ ಮಾಡಿಲ್ಲ. ಫ್ಲೈಓವರ್ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಆದರೂ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಟೋಲ್ ಸಂಗ್ರಹ ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.

ತಿಂಗಳ ಹಿಂದೆ ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧಿಕಾರಿ ಹೇಳಿದ್ದರೂ, ಸುರತ್ಕಲ್‌ನಲ್ಲಿ ಸುಂಕ ಸಂಗ್ರಹ ಬಂದ್ ಮಾಡದೆ ಈಗ ಇನ್ನೊಬ್ಬ ಗುತ್ತಿಗೆದಾರರಿಗೆ ಸುಂಕ ಸಂಗ್ರಹಕ್ಕೆ ಆದೇಶ ನೀಡಲಾಗಿದೆ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹೇಳಿದ ಮಾತಿಗೆ ಬೆಲೆ ಇಲ್ಲದಿದ್ದರೆ ಜನರು ಯಾರಲ್ಲಿ ಸಮಸ್ಯೆ ಹೇಳಿಕೊಳ್ಳ್ಳಬೇಕು? ಎಂದು ದೇವಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಅಶ್ರಫ್, ಸಂಚಾಲಕ ಪ್ರತಾಪ್ ಶೆಟ್ಟಿ, ಪ್ರಮುಖರಾದ ಶೇಖರ ಹೆಜಮಾಡಿ, ಸಿದ್ದೀಕ್ ತಲಪಾಡಿ ಮತ್ತಿತರರರು ಉಪಸ್ಥಿತರಿದ್ದರು.

Comments are closed.