ಕರಾವಳಿ

ಗಲ್ಫ್ ಕನ್ನಡಿಗರ ಸೇವಾಕಾರ್ಯಗಳು ಶ್ಲಾಘನೀಯ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ : ಕರಾವಳಿ ಕನ್ನಡಿಗರು ಶ್ರಮಜೀವಿಗಳು. ಉದ್ಯೋಗ ನಿಮಿತ್ತ ವಿಶ್ವದ ಮೂಲೆ-ಮೂಲೆಗಳಿಗೆ ಹೋದರೂ ಅಲ್ಲಿ ತಮ್ಮ ಒಳ್ಳೆಯ ತನದಿಂದಲೇ ಗುರುತಿಸಲ್ಪಡುತ್ತಾರೆ. ತಮ್ಮ ಸಂಪಾದನೆಯ ಒಂದಂಶವನ್ನು ಅಶಕ್ತರಿಗೆ ನೀಡುವುದನ್ನು ತಪ್ಪಿಸುವುದಿಲ್ಲ. ವಿದೇಶಗಳಲಿದ್ದರೂ ಹುಟ್ಟೂರ ನೆಂಟು ಬಿಡದೆ ಸಹಾಯ ಹಸ್ತ ಚಾಚುವುದು ನಮ್ಮವರ ದೊಡ್ಡಗುಣ ಎಂದು ವಿಧಾನ ಪರಿಷತ್ ಪತ್ರಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟೇಶ್ವರ ಸಮೀಪದ ಸಹನಾ ಕನ್‌ವೆನ್‌ಷನ್ ಸೆಂಟರ್‌ನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಆಯೊಜಿಸಿದ್ದ ಮೀಟ್ ಅಂಡ್ ಗ್ರೀಟ್ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

 

ಇಂದಿನ ಫ್ಯಾಷನ್ ಮತ್ತು ಸ್ಪರ್ಧಾಮಯ ಯುಗದಲ್ಲಿ ಹೊಸ ಬಟ್ಟೆಯನ್ನು ಫ್ಯಾಷನ್ ಹೆಸರಿನಲ್ಲಿ ಹರಿದು ಹಾಕಿಕೊಳ್ಳುವವರಿದ್ದಾರೆ. ಆದರೆ ನಮ್ಮ ನಡುವೆ ಹರಿದ ಬಟ್ಟೆಯನ್ನೂ ಹಾಕಲಾಗದ ಬಡವರಿದ್ದಾರೆ. ಸಾವಿರ ಕೋಟಿ ಸರದಾರರು ಜಿಲ್ಲೆಯಲ್ಲಿ ಸಾಕಷ್ಟಿದ್ದಾರೆ. ಅವರೆಲ್ಲ ಬಡವರ ಬಗ್ಗೆ ಕ್ಷಣ ಯೋಚಿಸಿ ಕೊಡುಗೈಯಾದರೆ ಸಮಾಜದಲ್ಲಿ ಅದ್ಬುತ ಬದಲಾವಣೆ ಸಾಧ್ಯ ಎಂದು ಗಲ್ಫ್ ಕನ್ನಡಿಗರ ಸೇವಾಕಾರ್ಯಗಳನ್ನು ಶ್ಲಾಘಿಸಿದ ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಕೊಡಮಾಡಿದ ವಿದ್ಯಾನಿಧಿ ಮತ್ತು ಅಫಘಾತ ಪರಿಹಾರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಕುಂದಾಪ್ರ ಕನ್ನಡ ಬಾಷೆಯ ಸೊಗಡಿನ ಬಗ್ಗೆ ಪ್ರಸ್ತಾಪಿಸಿದ ಪೂಜಾರಿ ಅವರು ಕುಂದಗನ್ನಡ ಭಾಷಾ ಅಕಾಡೆಮಿ ಸ್ಥಾಪನೆಗಾಗಿ ಸದನದಲ್ಲಿ ಗಮನ ಸೆಳೆದಿದ್ದೆ. ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಪ್ರಾಧಿಕಾರ ರಚನೆಗೂ ಒತ್ತಾಯಿಸಲಾಗಿತು. ಅದರೆ ಇಗಾಗಲೇ ಇದ್ದ ಅಕಾಡಮಿಗಳಿಗೂ ಅನುದಾನ ಬಿಡುಗಡೆಗೊಳಿಸದ ಸರ್ಕಾರ ಈ ಬೇಡಿಕೆಗಳನ್ನು ನೆನೆಗುದಿಗೆ ತಳ್ಳಿದೆ ಎಂದಿ ವಿಷಾದಿಸಿದರು.

ಮುಖ್ಯ ಅತಿಥಿ ಅಂತರಾಷ್ಟ್ರೀಯ ಜಾದೂಗಾರ, ಲೇಖಕ ಉಪ್ಪುಂದ ಓಂಗಣೇಶ್ ಮಾತನಾಡಿ ಜಗತ್ತಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಾಷೆಗಳು ಈಗಾಗಲೆ ನಶಿಸಿವೆ. ಕುಂದಾಪ್ರ ಕನ್ನಡಕ್ಕೆ ಈ ದುರ್ಗತಿ ಬಾರದಂತೆ ನಾವು ಎಚ್ಚರವಹಿಸಬೇಕು. ಪ್ರತಿಷ್ಟೆಯಿಂದ ಭಾಷೆ ಮರೆಯಬಾರದು. ಶುದ್ಧ ಕನ್ನಡ ಮಾತನಾಡುವ ಕುಂದಾಪುರದ ನಾವೇ ಇದನ್ನು ಉಳಿಸದಿದ್ದರೆ ಅನ್ಯರು ಮಾಡರು. ಕುಂದಾಪ್ರ ಕನ್ನಡ ಭಾಷೆಗೆ ಸರ್ಕಾರ ಕೂಡಲೆ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಕೆ..
ಬೈಂದೂರುನಲ್ಲಿ ವಿಮಾನ ನಿಲ್ದಾಣ ರಚನೆ, ಕುಂದಾಪ್ರ ಕನ್ನಡಕ್ಕೆ ಅಕಾಡೆಮಿ ಸ್ಥಾಪನೆ, ಬೈಂದೂರಿನಲ್ಲಿ ಸಂಘದ ಕಟ್ಟಡ ರಚನೆಗಾಗಿ ಜಮೀನು ಬೇಡಿಕೆಯ ಮನವಿಯನ್ನು ಶ್ರೀನಿವಾಸ ಪೂಜಾರಿಯವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ ಸಂಘದ ಅಧ್ಯಕ್ಷ ಸಾಧನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಬೆಸುಗೆ ಪೌಂಡೆಷನ್ ಅಧ್ಯಕ್ಷ ವೆಂಕಟೇಶ್ ಕಿಣಿ, ಸಂಘದ ಗೌರವಾಧ್ಯಕ್ಷ ಶೀನ ದೇವಾಡಿಗ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಅರುಣ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.