ಕರಾವಳಿ

ಹಿಂದೂಗಳ ಅವಗಣನೆಯೇ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ : ಎಮ್‍‌ಎಲ್‌ಸಿ ಭೋಜೆಗೌಡ ವಿವಾದಾತ್ಮಕ ಹೇಳಿಕೆ

Pinterest LinkedIn Tumblr

ಮಂಗಳೂರು, ಆಗಸ್ಟ್.4: ಕಾಂಗ್ರೆಸ್ ಪಕ್ಷವು ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದರಿಂದ ದಯನೀಯ ಸೋಲು ಕಂಡಿದೆ. ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಭೋಜೆಗೌಡ ವಿವಾದಾತ್ಮಕ ಹೇಳಿದ್ದಾರೆ.

ನಗರದ ಸರ್ಕ್ಯುಟ್ ಹೌಸ್‌ನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಒಂದು ಕಾಲದಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿತ್ತು ಆದರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಪಕ್ಷ ತಮ್ಮ ಸೋಲಿನ ಬಗ್ಗೆ ಕಾರಣ ಹುಡುಕಿಕೊಳ್ಳಬೇಕಾಗಿದೆ. ನನ್ನ ಅಭಿಪ್ರಾಯದ ಪ್ರಕಾರ ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸುವ ರೀತಿಯ ಆಡಳಿತ ನಡೆಸಿರುವುದು ಅವರ ಭಾವನೆಗಳಿಗೆ ನೋವಾಗುವಂತೆ ನಡೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಕರಾವಳಿ ಸೇರಿದಂತೆ ಆರು ಜಿಲ್ಲೆಗಳಿಗೆ ಸೇರಿದ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಶಾಸಕರು, ಸಂಸದರಿದ್ದರೂ ಜೆಡಿಎಸ್ ಅಭ್ಯರ್ಥಿಯಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಇಲ್ಲಿ ಜೆಡಿಎಸ್ ಪ್ರಾಬಲ್ಯ ಇರದಿದ್ದರೂ ನೈಋತ್ಯ ಕ್ಷೇತ್ರದಲ್ಲಿ ಈ ಭಾಗದ ಮತದಾರರು ಜೆಡಿಎಸ್​ಗೆ ಗೆಲುವು ತಂದಿದ್ದಾರೆ.ಇದಕ್ಕೆ ಪ್ರಜ್ಞಾವಂತ ಮತದಾರರು ಕಾರಣ.ನನ್ನನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಭೋಜೇಗೌಡ ತಿಳಿಸಿದ್ದಾರೆ.

ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ನೀಡಲಾಗಿಲ್ಲ. ಸಮಾಜದ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು ಎನ್ನುವುದು ನಮ್ಮ ನಿಲುವಾಗಿದೆ. ನಾನು ಕೇಸರಿ ಶಾಲು ಧರಿಸುತ್ತೇನೆ, ಕೇಸರಿ ಬಣ್ಣ ಬಿಜೆಪಿಯ ಸೊತ್ತಲ್ಲ ಎಂದು ಬೋಜೇಗೌಡ ತಿಳಿಸಿದರು.

ನೈರುತ್ಯ ಶಿಕ್ಷಕರ ವಿಧಾನ ಸಭಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಮಂಗಳೂರಿನಲ್ಲಿ ಕಚೇರಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಾರಿ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದನ ದೊರೆತಿದೆ. ಪದವಿ ಪೂರ್ವ ಕಾಲೇಜು ಹಾಗೂ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಸಮಸ್ಯೆ ಪರಿಹರಿಸಲಾಗಿದೆ.

ಹಿಂದೆ ಕೈ ಬಿಟ್ಟಿದ್ದ ಉಪನ್ಯಾಸಕರನ್ನು ಮರು ನೇಮಕಗೊಳಿಸಲಾಗಿದೆ. ಒಟ್ಟು 12 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಸೇವಾ ಭದ್ರತೆಯ ಬಗ್ಗೆ ಸೆಪ್ಟೆಂಬರ್ ಒಳಗೆ ತೀರ್ಮಾನವಾಗಲಿದೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಮುಖ್ಯ ಮಂತ್ರಿಯ ಜೊತೆ ಮತ್ತು ಶಿಕ್ಷಕರ ಪ್ರತಿನಿಧಿಗಳು ಸೇರಿದಂತೆ ಶೀಘ್ರಲ್ಲಿ ಸಭೆ ನಡೆಯಲಿದೆ ಎಂದು ಬೋಜೇ ಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞ, ಕಾರ್ಯಾಧ್ಯಕ್ಷ ರಾಮ್‌ಗಣೇಶ್, ಪಕ್ಷದ ವಕ್ತಾರ ಸುಶೀಲ್ ನರ್ಹೋನ್ನಾ, ಯುವ ಘಟಖ್ದ ನಾಯಕ ಅಕ್ಷಿತ್ ಸುವರ್ಣ,ಪದಾಧಿಕಾರಿಗಳಾದ ವಸಂತ ಪುಜಾರಿ, ಸುಮತಿ ಹೆಗ್ಡೆ, ಶ್ರೀನಾಥ್ ರೈ ಮೊದಲಾದವರು ಉಪಸ್ಥಿತರಿದ್ದರು.

Comments are closed.