ಕರಾವಳಿ

ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರದ ಅಲೆಗಳ ರುದ್ರನರ್ತನ : ಕಡಲ್‌ಕೊರೆತಕ್ಕೆ ಹಲವು ಮನೆಗಳು ನೀರು ಪಾಲು

Pinterest LinkedIn Tumblr

ಮಂಗಳೂರು : ಉಳ್ಳಾಲ ಹಾಗೂ ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಹಲವಾರು ಮನೆಗಳು ಸಂಪೂರ್ಣ ಹಾನಿಗೊಂಡಿದೆ. ಉಳ್ಳಾಲದ ಕೈಕೋ, ಕಿಲೆರಿಯಾನಗರದಲ್ಲಿ ಸಮುದ್ರ ರೌದ್ರಾವತಾರ ತೋರಿದ್ದು ಕೈಕೋ ಬಳಿ ಹಲವಾರು ಮನೆಗಳು ಹಾನಿಗೊಂಡು ಭೀಫಾತುಮ್ಮ ಎಂಬವರ ಮನೆ ಸಮುದ್ರ ಪಾಲಾಗಿದೆ.

ಕಳೆದ ಕೆಲವು ದಿನಗಳಿಂದ ಉಳ್ಳಾಲದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರದ ಅಲೆಗಳು ಉಳ್ಳಾಲದ ಕೈಕೋ, ಕಿಲೇರಿಯಾನಗರ, ಮುಕ್ಕಚ್ಚೇರಿ, ಸಿಗ್ರೌಂಡ್, ಸೋಮೇಶ್ವರ ಉಚ್ಚಿಲದ ಪೆರಿಬೈಲು ಬಳಿ ದಡಕ್ಕಪ್ಪಳಿಸುತ್ತಿವೆ. ಕೈಕೋ ಮತ್ತು ಕಿಲೇರಿಯಾನಗರದಲ್ಲಿ ಮನೆಗಳು ಕುಸಿದರೆ, ಪೆರಿಬೈಲು ಬಳಿ ರಸ್ತೆ ಕುಸಿಯುವ ಭೀತಿಯಲ್ಲಿತ್ತು. ಸಮುದ್ರದ ಆಲೆಗಳ ರುದ್ರನರ್ತನಕ್ಕೆ ಸಿಲುಕಿ ಬೀಫಾತುಮ್ಮ ಅವರ ಮನೆ ಕುಸಿಯುವ ಮೂಲಕ ಈ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಲ್ಲಿ 15 ಮನೆಗಳು ಕುಸಿದಿವೆ.

ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು ಮತ್ತಿತರ ಕಡೆ ಕಡಲಕೊರೆತ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲಾಗಿದ್ದರೂ, ಅದನ್ನು ಮೀರಿ ನೀರು ಹರಿದುಬಂದಿದೆ. ಪ್ರಾಕೃತಿಕ ದುರಂತಗಳ ನಿಯಂತ್ರಣ ಕಷ್ಟಸಾಧ್ಯ. ಕಡಲ ತೀರದಲ್ಲಿರುವ ಮನೆಗಳು ಸದಾ ಅಪಾಯಕಾರಿಯಾಗಿವೆ. ಈ ನಿಟ್ಟಿನಲ್ಲಿ ಇಂತಹ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬದಲಾಗಿದೆ.

ಸೋಮೇಶ್ವರ ಪೆರಿಬೈಲು ಬಳಿ ಮಂಗಳವಾರ ತಾತ್ಕಾಳಿಕ ಕಲ್ಲು ಹಾಕುವ ಕಾರ್ಯ ಅರಂಭಗೊಂಡಿದೆ. ಉಳ್ಳಾಲ ಕೈಕೋದಲ್ಲಿ ಹಾನಿಯಾದ ಮನೆಗಳಿಂದ ಎಲ್ಲರೂ ಸ್ಥಳಾಂತರಗೊಂಡಿದ್ದಾರೆ ಹಾಗೂ ಆಪಾಯದಲ್ಲಿರುವ ಕೆಲವು ಮನೆಗಳ ಸದಸ್ಯರು ಹಗಲಿನಲ್ಲಿ ಮನೆಯಲ್ಲಿದುಕೊಂಡು ಸಂಜೆ ವೇಳೆಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪರ್ಯಾಯ ನಿವೇಶನಕ್ಕೆ ಸೂಚನೆ :

ಕಡಲಕೊರೆತದಿಂದ ಮನೆ ಹಾನಿಗೊಂಡಿರುವ ಕುಟುಂಬಗಳಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಈಗಾಗಲೇ ಆದೇಶಿಸಿದ್ದಾರೆ. ಕಡಲಕೊರೆತದಿಂದ ಹೆಚ್ಚು ಅಪಾಯದಲ್ಲಿರುವ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ 15 ದಿನದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಮಂಜೂರುಗೊಳಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.

ಈಗಾಗಲೇ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಉಳ್ಳಾಲ ದರ್ಗಾ ಸಮಿತಿ ಮತ್ತು ಸ್ಥಳೀಯರ ನೆರವಿನಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ ‌. ಅಗತ್ಯ ಬಿದ್ದಲ್ಲಿ ಇನ್ನಷ್ಟು ಮಂದಿಗೆ ಆಶ್ರಯ ನೀಡಲು ಸಿದ್ಧವಿರುವುದಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಹಾಜಿ ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಉಳ್ಳಾಲ ನಗರಸಭೆಯಿಂದಲೂ ಎಲ್ಲಾ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಸಚಿವ ಖಾದರ್ ಮಾಹಿತಿ ನೀಡಿದ್ದಾರೆ..

ಗಂಜಿ ಕೇಂದ್ರಕ್ಕೆ ಜನ ಬರುತ್ತಿಲ್ಲ :

ಒಂಭತ್ತುಕೆರೆ ಶಾಲೆಯಲ್ಲಿ ಉಳ್ಳಾಲ ನಗರಸಭೆಯಿಂದ ಗಂಜಿಕೇಂದ್ರವನ್ನು ಅರಂಭಿಸಲಾಗಿದ್ದರೂ, ಜನರು ಆತ್ತ ಕಡೆ ಸುಳಿದಿಲ್ಲ. ಉಳ್ಳಾಲ ದರ್ಗಾದಲ್ಲೂ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರೆ ನಿರಾಶ್ರಿತರು ಸಂಬಂಧಿಗಳ ಮನೆಗಳಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.

ಶಾಶ್ವತ ಕಾಮಗಾರಿ ನಡೆದ ಮೊಗವೀರಪಟ್ಣದಲ್ಲೂ ಮನೆಗಳು ಅಪಾಯಕರಿ ಸ್ಥಿತಿಯಲ್ಲಿದ್ದು ಸುಮಾರು 5 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಕಡಲ್ಕೊರೆತದ ಆರ್ಭಟದಿಂದಾಗಿ ಉಳ್ಳಾಲ ಭಾಗದ ಕಡಲ ತಡಿಯ ಜನರು ಆತಂಕದಿಂದ ದಿನದೂಡುವಂತಾಗಿದೆ.

Comments are closed.